ಸಾರಾಂಶ
ಕೆ.ಎಂ. ಮಂಜುನಾಥ್
ಬಳ್ಳಾರಿ: ಕೋವಿಡ್ ಮಾರಿ ಮರೆಯಾಯಿತು ಎಂದುಕೊಳ್ಳುತ್ತಿರುವಾಗಲೇ ಇದೀಗ ಮತ್ತೊಂದು ರೂಪದಲ್ಲಿ ಕೋವಿಡ್ ಜನ್ಮತಳೆದು ಜನರ ಜೀವ ಹಿಂಡುವ ಸಂಚು ರೂಪಿಸುತ್ತಿದೆ. ನಿತ್ಯ ದುಡಿಮೆ ಮೇಲೆಯೇ ಬದುಕು ಕಟ್ಟಿಕೊಂಡಿರುವ ಜಿಲ್ಲೆಯ ಲಕ್ಷಾಂತರ ಜನರಲ್ಲಿ ಜೆಎನ್. 1 ರೂಪಾಂತರ ಸೋಂಕು ಹರಡಿದರೆ ಹೇಗೆ ಎಂಬ ದುಗುಡ ಶುರುವಾಗಿದೆ.ಕೋವಿಡ್‌ನ ಮೊದಲ ಹಾಗೂ ಎರಡನೇ ಅಲೆಯಲ್ಲಾದ ಸಾವು- ನೋವುಗಳ ನಷ್ಟ ಅಷ್ಟಿಷ್ಟಲ್ಲ. ಕುಟುಂಬ ಸದಸ್ಯರನ್ನು ಕಳೆದುಕೊಂಡು ಅನಾಥಭಾವ ಎದುರಿಸಿದ ಕುಟುಂಬಗಳಿಗೆ ಇದೀಗ ಮತ್ತೊಂದು ರೂಪದಲ್ಲಿ ವಕ್ಕರಿಸಿಕೊಳ್ಳುತ್ತಿರುವ ಕೋವಿಡ್ ದಾಳಿ ಜೀವದಾತಂಕ ಮೂಡಿಸಿದೆ.
ಈ ಹಿಂದಿನ ಕೋವಿಡ್ ಎರಡು ಅಲೆಗಳಲ್ಲಿ ಜಿಲ್ಲೆಯಲ್ಲಿ 97,347 ಪ್ರಕರಣಗಳು ದಾಖಲುಗೊಂಡಿದ್ದವು. ಏತನ್ಮಧ್ಯೆ ಸರ್ಕಾರಿ ಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆಗಳು ಮತ್ತು ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಿದ್ದಾಗ್ಯೂ ಏರಿಕೆಯತ್ತ ಮುಖವೊಡ್ಡಿದ್ದ ಸಾವಿನ ಸಂಖ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಪರಿಣಾಮ; ಮೊದಲ ಅಲೆಯಲ್ಲಿ 597 ಹಾಗೂ ಎರಡನೇ ಅಲೆಯಲ್ಲಿ 1066 ಜನರು ಜೀವ ಕಳೆದುಕೊಂಡರು. ಎರಡು ಅಲೆಗಳ ಪೈಕಿ ಜಿಲ್ಲೆಯಲ್ಲಿ ಅತಿ ಹೆಚ್ಚು ಜನರು(543) ಬಳ್ಳಾರಿ ತಾಲೂಕಿನಲ್ಲಿ ಸಾವಿನ ಕದ ತಟ್ಟಿದರು. ಸೋಂಕು ಹರಡುವಿಕೆಯ ಪ್ರಮಾಣ ಗಮನಿಸಿದರೆ ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಕೋವಿಡ್ ಕಾಣಿಸಿಕೊಂಡಿತು.ಪರದಾಡಿದ್ದ ಸೋಂಕಿತರು: ಕೋವಿಡ್ ಎರಡನೇ ಅಲೆಯಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಸೋಂಕಿತರು ಮತ್ತಷ್ಟು ಆತಂಕಕ್ಕೀಡಾದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಪರದಾಡುವಂತಾಯಿತು. ಸರ್ಕಾರಿ ಹಾಸ್ಟೆಲ್‌ಗಳು, ಇತರೆ ವಸತಿನಿಲಯಗಳನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಬದಲಾಯಿಸಲಾಯಿತು. ಖಾಸಗಿ ಹೋಟೆಲ್‌ಗಳು ಕೋವಿಡ್ ಆರೈಕೆ ಕೇಂದ್ರಗಳಾದವು. ಜಿಂದಾಲ್‌ನಲ್ಲಿ ಬೃಹತ್ ಕೋವಿಡ್ ಆಸ್ಪತ್ರೆಯನ್ನು ತೆರೆಯಲಾಯಿತಲ್ಲದೆ, ಆಸ್ಪತ್ರೆಗೆ ಬೇಕಾದ ಸೌಕರ್ಯಗಳನ್ನು ಜಿಲ್ಲಾಡಳಿತ ಪೂರೈಸಿತು. ಇಲ್ಲಿನ ಟ್ರಾಮಾ ಕೇರ್ ಸೆಂಟರ್, ವಿಮ್ಸ್ ಆಸ್ಪತ್ರೆ ಹಾಗೂ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ಗೆ ಅತ್ಯುತ್ತಮ ಚಿಕಿತ್ಸೆ ದೊರೆಯುತ್ತಿದೆ ಎಂಬ ಕಾರಣಕ್ಕಾಗಿಯೇ ಜಿಲ್ಲಾಸ್ಪತ್ರೆ ಹಾಗೂ ವಿಮ್ಸ್‌ನಲ್ಲಿ ಚಿಕಿತ್ಸೆಗಾಗಿ ಸೋಂಕಿತರು ಮುಗಿಬಿದ್ದರು. ಸರ್ಕಾರಿ ಜಿಲ್ಲಾಸ್ಪತ್ರೆ ಹಾಗೂ ವಿಮ್ಸ್‌ನಲ್ಲಿ ಬೆಡ್ ಕೊಡಿಸುವಂತೆ ಜಿಲ್ಲೆಯ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಮೊರೆ ಹೋಗುತ್ತಿರುವ ದೃಶ್ಯಗಳು ಕಂಡುಬಂದವು.
ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ಭಾರತೀಯ ವೈದ್ಯಕೀಯ ಸಂಘ ತಾಲೂಕು ಶಾಖೆಗಳು ಮುತುವರ್ಜಿ ವಹಿಸಿ ಸೋಂಕಿತರಿಗೆ ಚಿಕಿತ್ಸೆ ನೀಡಿ, ರೋಗಿಗಳ ಗುಣಮುಖರಾಗಲು ಶ್ರಮಿಸಿದವು.ಶವಗಳ ರಾಶಿ...ರಾಶಿ: ಕೋವಿಡ್ ಎರಡನೇ ಅಲೆ ಸಾವಿನ ಸರಣಿ ದುಪ್ಪಟ್ಟಾಗಿಸಿತು. ನಗರದ ವಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಶವಗಳು ರಾಶಿ ರಾಶಿಯಾಗಿ ಮಲಗಿದ್ದವು. ಅದೆಷ್ಟೋ ಕುಟುಂಬಗಳು ಮನೆಯ ಸದಸ್ಯರು ಸಾವಿಗೀಡಾಗಿದ್ದರೂ ಮೃತರ ಮುಖ ನೋಡಲು ಸಹ ಬರದಾದರು. ಹೀಗಾಗಿ ವಿಮ್ಸ್ ಶವಾಗಾರದಲ್ಲಿ ಪ್ಲಾಸ್ಟಿಕ್ ಹೊದಿಕೆಯಲ್ಲಿ ಸುತ್ತಿಟ್ಟಿದ್ದ 50ಕ್ಕೂ ಹೆಚ್ಚು ಮೃತದೇಹಗಳು ಅನಾಥವಾಗಿದ್ದವು. ಕೊನೆಗೆ ಜಿಲ್ಲಾಡಳಿತವೇ ಮೃತದೇಹಗಳನ್ನು ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡಿತು.
ಕೋವಿಡ್ ಮೊದಲ ಅಲೆಯಲ್ಲಿ ಅಂತ್ಯಸಂಸ್ಕಾರಕ್ಕೆ ಕೋವಿಡ್ ಮೃತ ವ್ಯಕ್ತಿಯನ್ನು ಎಳೆದುಕೊಂಡು ಹೋಗುತ್ತಿರುವ ವೀಡಿಯೋ ವೈರಲ್ ಆಗಿ, ಕೊನೆಗೆ ಜಿಲ್ಲಾಧಿಕಾರಿಗಳು ಕ್ಷಮೆಯಾಚಿಸಿ, ಮತ್ತೆ ಆ ರೀತಿಯ ಘಟನೆ ಮರುಕಳಿಸಿದಂತೆ ನೋಡಿಕೊಂಡರು.ಚಿಕಿತ್ಸೆ ಪಡೆದು ಗುಣಮುಖ: ಕೋವಿಡ್ ಎರಡನೇ ಅಲೆಯಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗಿದ್ದರಿಂದ ಹೋಟೆಲ್‌ಗಳನ್ನು ಕೋವಿಡ್ ಆರೈಕೆ ಕೇಂದ್ರಗಳನ್ನಾಗಿ ಬದಲಾಯಿಸುವಂತೆ ಜಿಲ್ಲಾಡಳಿತ ಸೂಚಿಸಿದ್ದರಿಂದ ಸ್ಪಂದಿಸಿದೆವು. ಸಾಕಷ್ಟು ಜನರು ಖಾಸಗಿ ಹೋಟೆಲ್‌ಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದರು ಮಯೂರ ಹೋಟೆಲ್‌ನ ಮಾಲೀಕ ಮಧುಸೂದನ್ ತಿಳಿಸಿದರು.