ಮಾನ್ಸೂನ್ ಪ್ರಾರಂಭದ ಹಂತದಲ್ಲಿ ಸಾಂಕ್ರಾಮಿಕ ರೋಗ ಹೆಚ್ಚಳ : ಎಚ್ಚರ

| Published : Jun 17 2024, 01:42 AM IST / Updated: Jun 17 2024, 09:45 AM IST

ಸಾರಾಂಶ

ನರಸಿಹಂರಾಜಪುರ, ಮಾನ್ಸೂನ್‌ ಪ್ರಾರಂಭದ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳಾದ ಡೆಂಘೀ, ಚಿಕನ್ ಗುನ್ಯಾ, ಮಲೇರಿಯಾ ಕಾಯಿಲೆಗಳು ಹೆಚ್ಚಾಗಿ ಕಂಡು ಬರುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಎನ್‌. ವಿಜಯ ಕುಮಾರ್ ತಿಳಿಸಿದರು.

 , ನರಸಿಹಂರಾಜಪುರ :  ಮಾನ್ಸೂನ್‌ ಪ್ರಾರಂಭದ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳಾದ ಡೆಂಘೀ, ಚಿಕನ್ ಗುನ್ಯಾ, ಮಲೇರಿಯಾ ಕಾಯಿಲೆಗಳು ಹೆಚ್ಚಾಗಿ ಕಂಡು ಬರುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಎನ್‌. ವಿಜಯ ಕುಮಾರ್ ತಿಳಿಸಿದರು.

ಶನಿವಾರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಚುನಾಯಿತ ಪ್ರತಿನಿಧಿಗಳಿಗೆ, ಪಟ್ಟಣ ಪಂಚಾಯಿತಿ ಸಿಬ್ಬಂದಿಗೆ ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ, ಅಂತರ ಇಲಾಖೆ ಸಮನ್ವಯ ಸಭೆ ಹಾಗೂ ಅಡೋಕೆಶಿ ಸಭೆಯಲ್ಲಿ ಮಾತನಾಡಿದರು. ನರಸಿಂಹರಾಜಪುರ ತಾಲೂಕಿನಲ್ಲಿ 2 ಡೆಂಘೀ ಪ್ರಕರಣ ದೃಢಪಟ್ಟಿದೆ.

 9 ಸಂಶಯಾಸ್ಪದ ಪ್ರಕರಣಗಳಾಗಿದೆ. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿ ಸಹಕಾರ ಅಗತ್ಯವಾಗಿದೆ. ಡೆಂಘೀ ಚಿಕನ್‌ ಗುನ್ಯಾ, ಮಲೇರಿಯಾ ಕಾಯಿಲೆಗಳು ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ಕಾಯಿಲೆಗಳಾಗಿದೆ. ಡೆಂಘೀ ಮತ್ತು ಚಿಕನ್ ಗುನ್ಯಾ ಜ್ವರ ವೈರಸ್‌ ನಿಂದ ಉಂಟಾಗುತ್ತಿದ್ದು ಈಡೀಸ್ ಈಜಿಪ್ಟ್‌ ಎಂಬ ಹೆಣ್ಣು ಸೊಳ್ಳೆ ಯಿಂದ ಕಟ್ಟುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳನ್ನು ಹಗಲು ಹೊತ್ತು ಕಚ್ಚುವ ಸೊಳ್ಳೆಗಳು ಅಥವಾ ಡೇ ಬೈಟರ್‌ ಎಂದು ಕರೆಯುತ್ತಾರೆ. ಡೆಂಘೀ ಜ್ವರಕ್ಕೆ ಮೂಳೆ ಮುರಿತದ ಕಾಯಿಲೆ ಎಂದೂ ಕೂಡಾ ಕರೆಯುತ್ತಾರೆ. ಮೂಳೆ ಮುರಿದಾಗ ಎಷ್ಟು ನೋವು ಇರುತ್ತದೆಯೋ ಅದೇ ರೀತಿ ಡೆಂಘೀ ಜ್ವರ ಬಂದಾಗ ಸಹ ನೋವು ಉಂಟಾಗುತ್ತದೆ ಎಂದರು.

ಡೆಂಘೀ ಕಾಯಿಲೆಗ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ. ಶೀಘ್ರವಾಗಿ ಪತ್ತೆ ಮಾಡಿ ಲಕ್ಷಣ ಆಧಾರಿತ ಚಿಕಿತ್ಸೆ ನೀಡಿ ಗುಣ ಪಡಿಸಬಹುದು. ಸೊಳ್ಳೆಗಳ ನಿಯಂತ್ರಣಕ್ಕೆ ಮನೆ ಸುತ್ತ ನೀರು ನಿಲ್ಲದಂತೆ ನೋಡಿ ಕೊಳ್ಳಬೇಕು. ನೀರಿನ ತಾಣಗಳನ್ನು ವಾರಕ್ಕೊಮ್ಮೆ ಉಜ್ಜಿ ತೊಳೆದು ಬಿಸಿಲಿನಲ್ಲಿ ಒಣಗಿಸಿ ಮತ್ತೆ ನೀರನ್ನು ಶೇಖರಿಸಿ ಮುಚ್ಚಿಟ್ಟು ಬಳಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್‌, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ, ಸದಸ್ಯರಾದ ಜುಬೇದ, ಉಮಾ, ಸುರಯ್ಯಾ ಭಾನು, ಸೋಜ, ಕುಮಾರಸ್ವಾಮಿ, ಮುಕಂದ, ವಸೀಂ, ಮುನಾವರ್‌ ಪಾಷಾ, ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕಿ ವಿಜಯಕುಮಾರ್, ಪಟ್ಟಣ ಪಂಚಾಯಿತಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು. ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್‌ ಸ್ವಾಗತಿಸಿದರು. ತಾಲೂಕು ಹಿರಿಯ ಕ್ಷಯ ರೋಗ ಚಿಕಿತ್ಸಾ ಮೇಲ್ವಿಚಾರಕ ಪವನ್‌ ವಂದಿಸಿದರು.