ಸಾರಾಂಶ
ಶ್ರೀರಂಗಪಟ್ಟಣ ತಾಲೂಕಿನ ಪೀಹಳ್ಳಿಯ ಶ್ರೀಉಂತೂರಮ್ಮ ದೇವಾಲಯದಲ್ಲಿ ಅರ್ಚಕರು ಪೂಜೆ ಸಲ್ಲಿಸುವ ವಿಷಯವಾಗಿ ಒಂದೇ ಜನಾಂಗಕ್ಕೆ ಸೇರಿದ ಮುಖಂಡರ ಒಳ ಜಗಳದಿಂದ ಈ ಬಾರಿ ದೇವಿಗೆ ಶಿವರಾತ್ರಿ ಹಬ್ಬದಲ್ಲೂ ಪೂಜೆಯಿಲ್ಲದಂತಾಗಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಪೀಹಳ್ಳಿಯ ಶ್ರೀಉಂತೂರಮ್ಮ ದೇವಾಲಯದಲ್ಲಿ ಅರ್ಚಕರು ಪೂಜೆ ಸಲ್ಲಿಸುವ ವಿಷಯವಾಗಿ ಒಂದೇ ಜನಾಂಗಕ್ಕೆ ಸೇರಿದ ಮುಖಂಡರ ಒಳ ಜಗಳದಿಂದ ಈ ಬಾರಿ ದೇವಿಗೆ ಶಿವರಾತ್ರಿ ಹಬ್ಬದಲ್ಲೂ ಪೂಜೆಯಿಲ್ಲದಂತಾಗಿದೆ.ಈ ಹಿಂದಿನಿಂದಲೂ ದೇವಾಲಯದ ಪೂಜೆ ಜವಾಬ್ದಾರಿಯು ಗ್ರಾಮದ ದಲಿತ ಜನಾಂಗದವರಿಗೆ ಸೇರಿತ್ತು. ಪೂರ್ವಿಕರ ಕಾಲದಿಂದಲೂ ಅವರೇ ಪೂಜೆ ನಡೆಸಿಕೊಂಡು ಬರುತ್ತಿದ್ದಾರೆ ಎನ್ನಲಾಗಿದೆ. ಈಗ ಅರ್ಚಕರ ವಿಷಯವಾಗಿ ನಡೆಯುತ್ತಿರುವ ಒಳ ಜಗಳದಿಂದ ದೇವಾಲಯಕ್ಕೆ ಮತ್ತೊಮ್ಮೆ ಬೀಗ ಹಾಕಲಾಗಿದೆ.
ಈ ಹಿಂದೆ ಗ್ರಾಮದ ಬೋರಯ್ಯ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಕಾಲಾ ನಂತರ ಪುತ್ರ ಜಯರಾಮು ಅವರನ್ನು ದೇವಿ ಸೂಚನೆ ಮೇರೆಗೆ ಅರ್ಚಕರಾಗಿ ನೇಮಿಸಲಾಗಿತ್ತು. ಆದರೆ, ಜಯರಾಮು ಸರಿಯಾಗಿ ಪೂಜೆ ಸಲ್ಲಿಸದೆ ಜೊತೆಗೆ ದೇವಾಲಯಕ್ಕೆ ಬರುವ ಭಕ್ತರೊಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಆರೋಪದಡಿ ಕಳೆದೊಂದು ವರ್ಷದ ಹಿಂದೆ ಅವರ ಬದಲು ನಾವೇ ಪೂಜೆ ನೆರವೇರಿಸಲು ಮುಂದಾಗಿದ್ದಾಗಿ ದೇವಾಲಯದ ಟ್ರಸ್ಟ್ ಅಧ್ಯಕ್ಷ ಪರಮೇಶ್ ತಿಳಿಸಿದ್ದಾರೆ.ಈ ಬೆಳವಣಿಗೆಯನ್ನು ಖಂಡಿಸಿ ಅರ್ಚಕ ಜಯರಾಮು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಕಳೆದ ಬಾರಿ ಶಿವರಾತ್ರಿ ವೇಳೆ ದೇವಾಲಯಕ್ಕೆ ಬೀಗಮುದ್ರೆ ಒತ್ತಲಾಗಿತ್ತು. ಇದೀಗ ಮತ್ತೊಮ್ಮೆ ಶಿವರಾತ್ರಿ ಹಬ್ಬ ಎದುರಾಗಿರುವ ಕಾರಣ ಟ್ರಸ್ಟ್‌ನ ಸದಸ್ಯರು ದೇವಾಲಯದ ಬೀಗ ತೆಗೆದು ದೇವಿಗೆ ಪೂಜೆ ಸಲ್ಲಿಸಲು ಮುಂದಾಗಿದ್ದರು.
ಇದಕ್ಕೊಪ್ಪದ ಅರ್ಚಕ ಜಯರಾಮು, ದೇವಾಲಯದ ಅರ್ಚಕರನ್ನಾಗಿ ನನ್ನನ್ನು ನೇಮಿಸಲಾಗಿದೆ. ನನ್ನ ಗಮನಕ್ಕೆ ತಾರದೆ ಪ್ರಕರಣ ನ್ಯಾಯಾಲಯದಲ್ಲಿದ್ದರೂ ಬೀಗ ಹೊಡೆದು ಬೇರೊಬ್ಬರಿಂದ ಹೇಗೆ ಪೂಜೆ ಮಾಡಿಸುತ್ತೀರಿ ಎಂಬುದಾಗಿ ಅರಕೆರೆ ಪೋಲೀಸ್ ಠಾಣಾ ಮೆಟ್ಟಿಲೇರಿದ್ದಾರೆ. ಹಾಗಾಗಿ ಮತ್ತೊಮ್ಮೆ ದೇವಾಲಯಕ್ಕೆ ಬೀಗ ಹಾಕಲಾಗಿದೆ. ಒಂದೇ ಜನಾಂಗದವರ ಒಳ ಜಗಳದಿಂದಾಗಿ ದೇವಿಗೆ ಈ ಬಾರಿಯೂ ಪೂಜೆ ಇಲ್ಲದಂತಾಗಿದೆ.