ಕೆಆರ್‌ಎಸ್ ಅಣೆಕಟ್ಟೆಗೆ ಒಳ ಹರಿವು ಕ್ಷೀಣ; ಪ್ರವಾಹ ಭೀತಿ ದೂರ

| Published : Aug 20 2025, 01:30 AM IST

ಸಾರಾಂಶ

ಕಾವೇರಿ ಜಲಾನಯನ ಪ್ರದೇಶ ಸೇರಿದಂತೆ ಕೊಡುಗು, ಮಡಿಕೇರಿ ಇತರೆ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿತ್ತು. ಅಣೆಕಟ್ಟೆ ಭದ್ರತಾ ದೃಷ್ಟಿಯಿಂದ ಕಾವೇರಿ ನದಿ ಮೂಲಕ 91 ಸಾವಿರಕ್ಕೂ ಹೆಚ್ಚಿನ ಕ್ಯುಸೆಕ್‌ ನೀರನ್ನು ಹೊರಬಿಡಲಾಗಿತ್ತು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಕ್ಷೀಣಿಸಿದ ಹಿನ್ನೆಲೆಯಲ್ಲಿ ಅಣೆಕಟ್ಟೆಯಿಂದ ಕಾವೇರಿ ನದಿಗೆ ಬಿಡುತ್ತಿದ್ದ ಹೊರ ಹರಿವಿನ ನೀರಿನ ಪ್ರಮಾಣವನ್ನು ಇಳಿಕೆ ಮಾಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ಎದುರಾಗಿದ್ದ ಪ್ರವಾಹ ಭೀತಿ ದೂರವಾಗಿದೆ.

ಕಾವೇರಿ ಜಲಾನಯನ ಪ್ರದೇಶ ಸೇರಿದಂತೆ ಕೊಡುಗು, ಮಡಿಕೇರಿ ಇತರೆ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿತ್ತು. ಅಣೆಕಟ್ಟೆ ಭದ್ರತಾ ದೃಷ್ಟಿಯಿಂದ ಕಾವೇರಿ ನದಿ ಮೂಲಕ 91 ಸಾವಿರಕ್ಕೂ ಹೆಚ್ಚಿನ ಕ್ಯುಸೆಕ್‌ ನೀರನ್ನು ಹೊರಬಿಡಲಾಗಿತ್ತು.

ಇದರಿಂದ ತಾಲೂಕಿನ ಪ್ರಸಿದ್ಧ ಪ್ರವಾಸಿತಾಣ ರಂಗನತಿಟ್ಟು ಪಕ್ಷಿಧಾಮ ಪಶ್ಚಿಮವಾಹಿನಿ ಹಾಗೂ ಪಟ್ಟಣದ ಸ್ನಾನಘಟ್ಟದ ಮಂಟಪಗಳು, ಶ್ರೀಸಾಯಿ ಮಂದಿರ ಭಾಗಶಃ ಜಲಾವೃತಗೊಂಡಿದ್ದವು. ಶ್ರೀನಿಮಿಷಾಂಬ ದೇವಾಲಯದ ಬಳಿ ಭಕ್ತರ ಸ್ನಾನ ಘಟ್ಟ ಹಾಗೂ ಸ್ನಾನಗೃಹ, ಪಶ್ಚಿಮ ವಾಹಿನಿ ಬಳಿ ಪುರಾತನ ಸ್ಮಾರಕಗಳ ಕಟ್ಟಡಗಳು, ಕಾವೇರಿ ಸಂಗಮ ಹಾಗೂ ಸ್ನಾನಘಟ್ಟ ಶ್ರಾದ್ದಾಕೇಂದ್ರ, ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಕಾವೇರಿ ನದಿ ನೀರಿನಿಂದಾಗಿ ಬಹುತೇಕ ಮುಳುಗಡೆ ಹಂತಕ್ಕೆ ತಲುಪಿತ್ತು. ಮುಂಜಾಗೃತಾ ಕ್ರಮವಾಗಿ ಜಿಲ್ಲಾ ಹಾಗೂ ತಾಲೂಕು ಆಡಳಿತ ಸಾರ್ವಜನಿಕರು ಕಾವೇರಿ ನದಿ ಬಳಿ ತೆರಳದಂತೆ ಪ್ರವೇಶ ನಿರ್ಬಂಧಿಸಿ ಪೊಲೀಸ್ ಬ್ಯಾರಿಗೇಡ್‌ ನಿರ್ಮಿಸಿ ಎಚ್ಚರ ವಹಿಸಿತ್ತು.

ಮಳೆ ಪ್ರಮಾಣ ಹೆಚ್ಚಾಗಿ ಕಾವೇರಿ ನದಿ ಹಾಗೂ ಕೆಳ ಭಾಗಳಲ್ಲಿ ಮತ್ತಷ್ಟು ಪ್ರವಾಹ ಹೆಚ್ಚಾಗಲಿದೆ ಎಂಬ ಭೀತಿ ರೈತರು ಹಾಗೂ ಸಾರ್ವಜನಿಕರಲ್ಲಿ ಮನೆ ಮಾಡಿತ್ತು. ಕೆಆರ್ ಎಸ್ ಅಣೆಕಟ್ಟೆ ಮೇಲ್ಭಾಗಗಳಲ್ಲಿ ಮಳೆ ಕ್ಷೀಣಿಸಿದ ಹಿನ್ನೆಲೆಯಲ್ಲಿ ಅಣೆಕಟ್ಟೆಯಿಂದ 31 ಸಾವಿರ ಕ್ಯುಸೆಕ್ ಗೂ ಹೆಚ್ಚಿನ ನೀರನ್ನು ಹೊರ ಬಿಡಲಾಗುತ್ತಿರುವುದರಿಂದ ಇದೀಗ ಪ್ರವಾಹ ಇಳಿಮುಖವಾಗಿ ಸಾರ್ವಜನಿಕರಲ್ಲಿ ಇದ್ದ ಆತಂಕ ದೂರ ಮಾಡಿದೆ.

ಸೋಮವಾರ ರಾತ್ರಿ ವರೆವಿಗೂ ಅಣೆಕಟ್ಟೆಗೆ 77,072 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕಾವೇರಿ ನದಿ ಮೂಲಕ 91 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿತ್ತು. ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಮಂಗಳವಾರ ಅಣೆಕಟ್ಟೆಗೆ 41,930 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಅಣೆಕಟ್ಟೆಯಿಂದ 31,025 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಸಂಜೆ ವೇಳೆಗೆ ಅಣೆಕಟ್ಟೆಯಲ್ಲಿ 123.15 ಅಡಿ ನೀರು ಸಂಗ್ರಹವಾಗಿತ್ತು.