ಸಾರಾಂಶ
ಮಹಾರಾಷ್ಟ್ರ ಕೃಷ್ಣಾ ಕಣಿವೆ ವ್ಯಾಪ್ತಿಯಲ್ಲಿ ಮಿತಿಮೀರಿ ಮಳೆಯಾಗುತ್ತಿರುವುದರಿಂದ ಕೃಷ್ಣಾನದಿ ತುಂಬಿ ಹರಿಯುತ್ತಿದೆ. ಹೀಗಾಗಿ ಸಮೀಪದ ಹಿಪ್ಪರಗಿ ಜಲಾಶಯಕ್ಕೆ ಮಂಗಳವಾರ ೧,೧೯,೨೦೦ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ೧,೧೮,೪೫೦ ಕ್ಯುಸೆಕ್ ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಮಹಾರಾಷ್ಟ್ರ ಕೃಷ್ಣಾ ಕಣಿವೆ ವ್ಯಾಪ್ತಿಯಲ್ಲಿ ಮಿತಿಮೀರಿ ಮಳೆಯಾಗುತ್ತಿರುವುದರಿಂದ ಕೃಷ್ಣಾನದಿ ತುಂಬಿ ಹರಿಯುತ್ತಿದೆ. ಹೀಗಾಗಿ ಸಮೀಪದ ಹಿಪ್ಪರಗಿ ಜಲಾಶಯಕ್ಕೆ ಮಂಗಳವಾರ ೧,೧೯,೨೦೦ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ೧,೧೮,೪೫೦ ಕ್ಯುಸೆಕ್ ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ.ಮಹಾರಾಷ್ಟ್ರದ ರಾಜಾಪೂರ ಜಲಾಶಯದಿಂದ ಅಪಾರ ಪ್ರಮಾಣದ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದ್ದು, ದಿನದಿಂದ ದಿನಕ್ಕೆ ನೀರಿನ ಮಟ್ಟ ಹೆಚ್ಚಳವಾಗುತ್ತಾ ಸಾಗಿದೆ. ಕೃಷ್ಣಾ ನದಿಗೆ ಸುಮಾರು ೨ಲಕ್ಷ ಕ್ಯುಸೆಕ್ ನೀರು ಬಂದರೆ, ಈ ಭಾಗದಲ್ಲಿ ಪ್ರವಾಹ ಉಂಟಾಗಿ ಕೆಲ ಗ್ರಾಮಗಳು ಮುಳುಗಡೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಾದ ಕೊಯ್ನಾದಲ್ಲಿ ೪೫ ಮಿ.ಮೀ., ನೌಜಾ ೫೩ ಮಿ.ಮೀ., ಮಹಾಬಳೇಶ್ವರ ೬೯ ಮಿ.ಮೀ., ಮಳೆಯಾಗಿರುವುದರಿಂದ ಹಿಪ್ಪರಗಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಮಂಗಳವಾರ ಹಿಪ್ಪರಗಿ ಜಲಾಶಯಕ್ಕೆ ಒಟ್ಟು ೧,೧೯,೨೦೦ ಕ್ಯುಸೆಕ್ ನೀರು ಹರಿದು ಬರುತ್ತಿದೆ. ೧,೧೮,೪೫೦ ಕ್ಯುಸೆಕ್ ನೀರನ್ನು ಮುಂದೆ ಹರಿಬಿಡಲಾಗುತ್ತಿದೆ. ೬ ಟಿಎಂಸಿ ಸಾಮರ್ಥ್ಯದ ಹಿಪ್ಪರಗಿ ಜಲಾಶಯ ನೀರಿನ ಮಟ್ಟ ೫೨೨.೭೪ ಮೀ. ಇದೆ. ಸದ್ಯಕ್ಕೆ ಪ್ರವಾಹ ಭೀತಿ ಇಲ್ಲ. ಕೃಷ್ಣಾ ನದಿ ನೀರಿನ ಪ್ರಮಾಣ ಹೆಚ್ಚಳವಾಗುತ್ತಿರುವುದರಿಂದ ನದಿ ಪಾತ್ರದ ಜನರು ಸುರಕ್ಷತಾ ಸ್ಥಳಗಳಿಗೆ ತೆರಳಬೇಕು. ನದಿ ಪಾತ್ರದ ಜನರು ನದಿ ನೀರಲ್ಲಿ ಸ್ನಾನ ಮಾಡುವುದಾಗಲಿ, ಬಟ್ಟೆ, ಜಾನುವಾರುಗಳನ್ನು ಸ್ವಚ್ಛಗೊಳಿಸುವುದಾಗಲಿ, ಮಕ್ಕಳು ನದಿತೀರಕ್ಕೆ ಹೋಗಬಾರದು. ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಿ ಜಾಗ್ರತರಾಗಿರಿ ಎಂದು ಜಮಖಂಡಿ ವಲಯದ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ತಿಳಿಸಿದ್ದಾರೆ.ಕುಡಚಿ ಸೇತುವೆ ಜಲಾವೃತ:
ಮಹಾರಾಷ್ಟ್ರದ ಮಿರಜ್-ಸಾಂಗಲಿಗೆ ತೆರಳಲು ಸೇತುವೆಯಾಗಿದ್ದ ಕುಡಚಿ ಸೇತುವೆ ಜಲಾವೃತವಾದ ಹಿನ್ನೆಲೆಯಲ್ಲಿ ಈ ಭಾಗದಿಂದ ಆಸ್ಪತ್ರೆಗಳಿಗೆ ತೆರಳುವ ಅನೇಕ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.