ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರದ ಬಗ್ಗೆ ತಿಳಿಸಿ

| Published : Jan 29 2025, 01:30 AM IST

ಸಾರಾಂಶ

ಶಿಕಾರಿಪುರ: ಇಂದಿನ ಮಕ್ಕಳು ಭವಿಷ್ಯದ ದೇಶದ ಸತ್ಪ್ರಜೆಗಳು. ಅವರಿಗೆ ಬಾಲ್ಯದಿಂದಲೇ ಸಂಸ್ಕಾರ, ಸಂಸ್ಕೃತಿ ಪರಂಪರೆಯ ಬಗ್ಗೆ ತಿಳುವಳಿಕೆ ನೀಡಿದಾಗ ಮಾತ್ರ ಅವರು ದೇಶದ ಅಭಿವೃದ್ಧಿಗೆ ಕೊಡುಗೆ ಸಲ್ಲಿಸಲು ಸಾಧ್ಯ ಎಂದು ತೊಗರ್ಸಿ ಮಳೆ ಹಿರೇಮಠದ ಶ್ರೀ ಮಹಾಂತ ದೇಶೀ ಕೇಂದ್ರ ಸ್ವಾಮೀಜಿ ತಿಳಿಸಿದರು.

ಶಿಕಾರಿಪುರ: ಇಂದಿನ ಮಕ್ಕಳು ಭವಿಷ್ಯದ ದೇಶದ ಸತ್ಪ್ರಜೆಗಳು. ಅವರಿಗೆ ಬಾಲ್ಯದಿಂದಲೇ ಸಂಸ್ಕಾರ, ಸಂಸ್ಕೃತಿ ಪರಂಪರೆಯ ಬಗ್ಗೆ ತಿಳುವಳಿಕೆ ನೀಡಿದಾಗ ಮಾತ್ರ ಅವರು ದೇಶದ ಅಭಿವೃದ್ಧಿಗೆ ಕೊಡುಗೆ ಸಲ್ಲಿಸಲು ಸಾಧ್ಯ ಎಂದು ತೊಗರ್ಸಿ ಮಳೆ ಹಿರೇಮಠದ ಶ್ರೀ ಮಹಾಂತ ದೇಶೀ ಕೇಂದ್ರ ಸ್ವಾಮೀಜಿ ತಿಳಿಸಿದರು.

ತಾಲೂಕಿನ ತೊಗರ್ಸಿಯಲ್ಲಿನ ಪ್ರಾರ್ಥನಾ ಇಂಗ್ಲಿಷ್ ಮೀಡಿಯಂ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದ ಅವರು, ಧರ್ಮ, ಸಂಸ್ಕೃತಿ ನಮ್ಮ ಉಸಿರು, ಈ ಪರಂಪರೆಯ ತಳಹದಿಯ ಮೇಲೆ ಮಕ್ಕಳ ಭವಿಷ್ಯವನ್ನು ನಿರ್ಮಾಣ ಮಾಡುವ ಹೊಣೆ ಶಿಕ್ಷಕರು ಮತ್ತು ಪಾಲಕರ ಮೇಲಿದೆ ಎಂದರು.

ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶಿರಾಳಕೊಪ್ಪ ವಿರಕ್ತ ಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಪ್ರಾಥಮಿಕ ಶಾಲೆ ಮಕ್ಕಳ ಜ್ಞಾನ ಭಂಡಾರಕ್ಕೆ ತಳಹದಿ. ಇಲ್ಲಿ ನೀಡುವ ಶಿಕ್ಷಣ ಭವಿಷ್ಯಕ್ಕೆ ದಾರಿದೀಪವಾಗಲಿದೆ. ದೇಶಭಕ್ತಿ, ರಾಷ್ಟ್ರಪ್ರೇಮ ರೂಢಿಸಿಕೊಂಡು ಸಮಾಜದಲ್ಲಿ ಕೀರ್ತಿ ತರುವಂತೆ ಬಾಳಬೇಕು ಎಂದು ಹೇಳಿದರು.

ಉದ್ರಿ ಆರೋಗ್ಯಾಧಿಕಾರಿ ಡಾ.ಎಂ.ಕೆ.ಮಹೇಶ್ ಮಾತನಾಡಿ, ಪಾಲಕರು ಮನೆಯಲ್ಲಿ ಮಕ್ಕಳಿಗೆ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪೌಷ್ಟಿಕ ಆಹಾರ ನೀಡಬೇಕು. ಇದು ಬೌದ್ಧಿಕ ಜ್ಞಾನಕ್ಕೆ ಪ್ರೇರಣೆಯಾಗುತ್ತದೆ ಎಂದು ತಿಳಿಸಿದರು.

ಗ್ರಾ.ಪಂ ಅಧ್ಯಕ್ಷ ನಿರಂಜನ್ ಮಾತನಾಡಿ, ಮಕ್ಕಳ ಭವಿಷ್ಯಕ್ಕೆ ಪ್ರಾಥಮಿಕ ಶಾಲೆ ಬುನಾದಿ. ಇಲ್ಲಿನ ಶಿಕ್ಷಕರು ಮಕ್ಕಳ ಜ್ಞಾನ ಸಂಪಾದನೆ ನಿಟ್ಟಿನಲ್ಲಿ ಧರ್ಮ, ಸಂಸ್ಕೃತಿ ಪರಂಪರೆ, ದೇಶಭಕ್ತಿಯನ್ನು ಬೋಧಿಸಿ ಸಮಾಜದಲ್ಲಿ ಕೀರ್ತಿ ಶಾಲಿಗಳಾಗಿ ಬದುಕುವ ದಾರಿ ತೋರಿಸಬೇಕು ಹಾಗೂ ಪಾಲಕರು ಸಹ ಮಕ್ಕಳ ಭವಿಷ್ಯಕ್ಕೆ ಪ್ರೋತ್ಸಾಹಿಸಬೇಕು ಎಂದರು.

ಸಂಸ್ಥೆಯ ಅಧ್ಯಕ್ಷ ಎಂ.ಆರ್.ರಾಘವೇಂದ್ರ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ಆಧುನಿಕ ತಂತ್ರಜ್ಞಾನದ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ನೀಡುವುದು ನಮ್ಮ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಶಿಕ್ಷಕರ ಪಾಲಕರ ಸಹಕಾರ ಕೋರಿದರು.

ಶಾಲೆಯ ಕಾರ್ಯದರ್ಶಿ ಅಜ್ಜಪ್ಪ, ಮುಖ್ಯೋಪಾಧ್ಯಾಯರಾದ ಆರ್.ಕೆ.ರತ್ನಮ್ಮ ಶಾಲೆಯ ಮುಂದಿನ ಯೋಜನೆ ಕುರಿತು ಮಾತನಾಡಿದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಶಿರಾಳಕೊಪ್ಪದ ಶ್ರೀ ವಿನಾಯಕ ದೇವರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು.