ಅನ್ನಭಾಗ್ಯ ಯೋಜನೆಯಡಿ ಪಡಿತರ ವಿತರಿಸುವ ಅಂಗಡಿಗಳಲ್ಲಿ ಮುಖ್ಯಮಂತ್ರಿಗಳ ಭಾವಚಿತ್ರ ಸೇರಿದಂತೆ ಯೋಜನೆಗೆ ಸಂಬಂಧಿಸಿದ ಮಾಹಿತಿ ಹಾಗೂ ದರಪಟ್ಟಿ ಒಳಗೊಂಡ ಫಲಕ ಅಳವಡಿಸಬೇಕು.
ಧಾರವಾಡ:
ಸರ್ಕಾರದ ನಿಯಮಾನುಸಾರ ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಅಗತ್ಯ ಮಾಹಿತಿಯುಳ್ಳ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.ಜಿಪಂ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆ ಜರುಗಿಸಿದ ಅವರು, ಅನ್ನಭಾಗ್ಯ ಯೋಜನೆಯಡಿ ಪಡಿತರ ವಿತರಿಸುವ ಅಂಗಡಿಗಳಲ್ಲಿ ಮುಖ್ಯಮಂತ್ರಿಗಳ ಭಾವಚಿತ್ರ ಸೇರಿದಂತೆ ಯೋಜನೆಗೆ ಸಂಬಂಧಿಸಿದ ಮಾಹಿತಿ ಹಾಗೂ ದರಪಟ್ಟಿ ಒಳಗೊಂಡ ಫಲಕ ಅಳವಡಿಸಬೇಕು. ಸಾರ್ವಜನಿಕರಿಗೆ ಪಡಿತರ ದರ ಹಾಗೂ ವಿತರಿಸಲಾಗುವ ಸಾಮಗ್ರಿಗಳ ಕುರಿತು ಸ್ಪಷ್ಟ ಮಾಹಿತಿ ದೊರೆಯುವಂತೆ ವ್ಯವಸ್ಥೆ ಮಾಡಬೇಕು ಎಂದರು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಬಂಧಿತ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಲೈನ್‌ಮನ್‌ಗಳು ಹೆಚ್ಚಿನ ಜವಾಬ್ದಾರಿ ವಹಿಸಬೇಕು. ಯಾವುದೇ ಕಾರಣಕ್ಕೂ ವಿದ್ಯುತ್ ಕಂಬ, ಲೈನ್ ದುರಸ್ತಿ ಸೇರಿದಂತೆ ಅಪಾಯಕಾರಿ ಕಾಮಗಾರಿಗಳಿಗೆ ಸಾರ್ವಜನಿಕರನ್ನು ಬಳಸಿಕೊಳ್ಳಬಾರದು. ತರಬೇತಿ ಪಡೆದ ಲೈನ್‌ಮನ್‌ಗಳೇ ನೇರವಾಗಿ ನಿರ್ವಹಿಸಬೇಕು ಎಂದರು.ಜಿಪಂ ಸಿಇಒ ಭುವನೇಶ ಪಾಟೀಲ್ ಮಾತನಾಡಿ, ಜಿಲ್ಲೆಯ ಬಸ್ ನಿಲ್ದಾಣಗಳಲ್ಲಿನ ಶೌಚಾಲಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಬಸ್‌ಗಳನ್ನು ತಿಂಗಳಿಗೆ ಒಮ್ಮೆ ಕಡ್ಡಾಯವಾಗಿ ಡೀಪ್ ಕ್ಲೀನ್ ಮಾಡುವ ವ್ಯವಸ್ಥೆ ಕೈಗೊಳ್ಳಬೇಕು ಎಂದರು.
ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಪ್ರಾಧಿಕಾರಿದ ಸದಸ್ಯರಾದ ವರ್ಧಮಾನ ಹಿರೇಗೌಡರ, ಶಿವಾನಂದ ಭೂಮಣ್ಣನವರ, ವಿನಾಯಕ ಕುರುಬರ, ಸಾವಿತ್ರಿ ಬಸವರಾಜ್ ಭಗವತಿ ಇದ್ದರು.