ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕಾಫಿ ಮಂಡಳಿಯ ಮಾಹಿತಿಗಳನ್ನು ಸದುಪಯೋಗಪಡಿಸಿಕೊಂಡು ಕಾಫೀ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಬಗ್ಗೆ ಕಾರ್ಯತತ್ಪರರಾಗಬೇಕು ಎಂದು ಕಾಫಿ ಮಂಡಳಿ ಉಪನಿರ್ದೇಶಕ ವಿ. ಚಂದ್ರಶೇಖರ್ ಹೇಳಿದರು.ಭಾರತ ಕಾಫಿ ಮಂಡಳಿ ಮಡಿಕೇರಿ ಮತ್ತು ನಾಪೋಕ್ಲುವಿನ ಪೊನ್ನಾಡ್ ರೈತ ಉತ್ಪಾದಕ ಸಂಘ ಇದರ ಸಂಯುಕ್ತ ಆಶ್ರಯದಲ್ಲಿ ಬಲ್ಲಮಾವಟಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಕಾಫಿ, ಕರಿಮೆಣಸು ಮತ್ತು ಏಲಕ್ಕಿ ಬೆಳೆಗಳನ್ನು ಬೆಳೆಸುವ ಮತ್ತು ಅದರ ಪಾಲನೆ, ಪೋಷಣೆ, ಹಾಗು ಕಾಫಿ ಮಂಡಳಿ ವತಿಯಿಂದ ದೊರೆಯುವ ಇತರ ಸೌಲಭ್ಯದ ಬಗ್ಗೆ ಆಯೋಜಿಸಲಾಗಿದ್ದ ಮಾಹಿತಿ ಕಾರ್ಯಾಗಾರ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ, ಹಳೆಯ ವಿಧಾನಗಳನ್ನೇ ಅನುಸರಿಸುವ ಬದಲು ಕಾಫಿ ಬೆಳೆಯನ್ನು ವೈಜ್ಞಾನಿಕವಾಗಿ ಬೆಳೆಯುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಕಿವಿ ಮಾತು ಹೇಳಿದರು. ಡಾ.ಶಿವಲಿಂಗು ಅವರು ತದ್ರೂಪಿ ಕಾಫಿ ಗಿಡಗಳನ್ನು ಮಾಡುವ ಮತ್ತು ನೆಡುವ ವಿಧಾನಗಳ ಡಿಜಿಟಲ್ ಪ್ರಾತ್ಯಕ್ಷಿಕೆ ನಡೆಸಿದರು. ವಿಜ್ಞಾನಿಗಳಾದ ಡಾ. ಅಕ್ಷಿತ ಅವರು ಕಾಳು ಮೆಣಸು ಹಾಗೂ ಏಲಕ್ಕಿ ಗಿಡಗಳ ವಿವಿಧ ತಳಿಗಳ ಬಗ್ಗೆ ಮಾಹಿತಿ ನೀಡಿದರು.ಸುಕ್ ಡೆನ್ ಸಂಸ್ಥೆಯ ಪ್ರತಿನಿಧಿ ಕುಮಾರಿ ಪ್ರಕೃತಿ, ತಮ್ಮ ಸಂಸ್ಥೆಯಿಂದ ಮರು ಅರಣ್ಯ ಸ್ಥಾಪಿಸುವ ನಿಟ್ಟಿನಲ್ಲಿ ಉಚಿತವಾಗಿ ಗಿಡಗಳನ್ನು ನೀಡುವುದಾಗಿಯೂ ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಮತ್ತು ಕಾಫಿಯನ್ನು ಉತ್ತಮ ಬೆಲೆಗೆ ಖರೀದಿ ಮಾಡುವ ಬಗ್ಗೆ, ಮಣ್ಣು ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ತಿಳಿಸಿದರು.ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಬಲ್ಲಮಾವಟಿ ಗ್ರಾಮ ಪಂಚಾಯಿತಿ ಉಪ ಅಧ್ಯಕ್ಷರ ಚೋಕಿರ ಬಾಬಿ ಭೀಮಯ್ಯ, ಪಂಚಾಯಿತಿ ಸದಸ್ಯರಾದ ಮಣವಟ್ಟಿರ ಕುಶಾಲಪ್ಪ, ಮಾಯಮ್ಮ, ಮಚ್ಚುರ ರವೀಂದ್ರ, ಬಲತ್ ನಾಡು ಫಾರ್ಮರ್ಸ್ ಕ್ಲಬ್ಬಿನ ಅಧ್ಯಕ್ಷ ಕರವಂಡ ಲವ ನಾಣಯ್ಯ, ಮಹಿಳಾ ಸಮಾಜದ ಅಧ್ಯಕ್ಷರಾದ ಅಪ್ಪಚೆಟ್ಟೋಳಂಡ ವನು ವಸಂತ್, ಮಂಡಳಿ ವಿಜ್ಞಾನಿ ಚಂದ್ರಶೇಖರ್, ಶಿವಲಿಂಗೇಗೌಡ, ಕಾಫಿ ಮಂಡಳಿಯ ತಜ್ಞರು ಉಪಸ್ಥಿತರಿದ್ದು ಕಾಫಿ ಬೆಳೆಗಾರರಿಗೆ ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಿ ಮಾರ್ಗದರ್ಶನ ಮಾಡಿದರು.