ಸಾರಾಂಶ
ಸಾರ್ವಜನಿಕರು ಪುರಸಭೆಗೆ ಸಂದಾಯ ಮಾಡಬೇಕಾಗಿರುವ ತೆರಿಗೆ ಹಣವನ್ನು ಸಕಾಲಕ್ಕೆ ಪಾವತಿಸುವಂತೆ ಶನಿವಾರ ಪುರಸಭೆ ಮುಖ್ಯಾಧಿಕಾರಿ ಸಿಬ್ಬಂದಿ ಹಾಗೂ ಕಾರ್ಮಿಕರು ಪಟ್ಟಣದಲ್ಲಿ ಜನ ಜಾಗೃತಿ ಜಾಥಾ ನಡೆಸಿದರು
ಕನ್ನಡಪ್ರಭ ವಾರ್ತೆ ತೇರದಾಳ (ರ-ಬ)
ಸಾರ್ವಜನಿಕರು ತೆರಿಗೆ ಹಣ ಪಾವತಿಸಿದಾಗ ಮಾತ್ರ ಪುರಸಭೆ ವತಿಯಿಂದ ಮೂಲಭೂತ ಸೌಲಭ್ಯ ಒದಗಿಸಲು ಸಾಧ್ಯ. ಆಸ್ತಿ ತೆರಿಗೆ, ನೀರಿನ ಕರ, ಲೈಸೆನ್ಸ್ ನವೀಕರಣ ಕಡ್ಡಾಯವಾಗಿ ಮಾಡಿಕೊಳ್ಳಬೇಕು ಎಂದು ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ ತಿಳಿಸಿದರು.ಸಾರ್ವಜನಿಕರು ಪುರಸಭೆಗೆ ಸಂದಾಯ ಮಾಡಬೇಕಾಗಿರುವ ತೆರಿಗೆ ಹಣವನ್ನು ಸಕಾಲಕ್ಕೆ ಪಾವತಿಸುವಂತೆ ಶನಿವಾರ ಪುರಸಭೆ ಮುಖ್ಯಾಧಿಕಾರಿ ಸಿಬ್ಬಂದಿ ಹಾಗೂ ಕಾರ್ಮಿಕರು ಪಟ್ಟಣದಲ್ಲಿ ಜನ ಜಾಗೃತಿ ಜಾಥಾ ನಡೆಸಿದರು. ಪುರಸಭೆಯಿಂದ ಪ್ರಾರಂಭಗೊಂಡ ಜಾಥಾ, ಜಾಮೀಯಾ ಮಸಜೀದ, ವಿಶೇಷ ತಹಸೀಲ್ದಾರ್ ಕಚೇರಿ, ಸರ್ಕಾರಿ ಚಾವಡಿ, ಕನ್ನಡ ಶಾಲೆ, ಜವಳಿ ಬಜಾರ, ಸಿದ್ದೇಶ್ವರ ಗಲ್ಲಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಈ ವೇಳೆ ಮಾತನಾಡಿದ ಅವರು, ಕಟ್ಟಡ ಪರವಾನಗಿ ತಗೆದುಕೊಳ್ಳದೆ ಹಲವರು ಕಟ್ಟಡ ನಿರ್ಮಿಸುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಅಂತಹವರು ತಾವಾಗಿಯೇ ಬಂದು ಕಟ್ಟಡ ಅನುಮತಿ ಪಡೆದುಕೊಳ್ಳಬೇಕು. ಇಲ್ಲದಿದ್ರೆ ಯಾವುದೇ ಮುಲಾಜು ಇಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ತೆರಿಗೆ ಹಣ ಬಾಕಿ ಉಳಿಸಿಕೊಂಡವರಿಗೆ ಈಗಾಗಲೇ ನೋಟಿಸ್ ನೀಡಲಾಗುತ್ತಿದೆ. ತಕ್ಷಣವೇ ಬಾಕಿ ಹಣ ಪಾವತಿಸಬೇಕು. ಅನಧಿಕೃತ ನಳ ಜೋಡಣೆ ಹೊಂದಿದವರು ಅಧಿಕೃತವಾಗಿ ಮಾಡಿಕೊಳ್ಳಬೇಕೆಂದು ಸೂಚಿಸಿದರು. ಸಾರ್ವಜನಿಕರು ತೆರಿಗೆ ಹಣ ಪಾವತಿಸುವ ಮೂಲಕ ಪುರಸಭೆಗೆ ಸಹಕಾರ ನೀಡಿದಾಗ ಮಾತ್ರ ಸೌಲಭ್ಯ ಒದಗಿಸಲು ಸಾಧ್ಯ ಆಗುತ್ತದೆ. ಎಲ್ಲವನ್ನು ಸರ್ಕಾರದ ಅನುದಾನದಲ್ಲಿಯೇ ಮಾಡಲು ಸಾಧ್ಯ ಇಲ್ಲ ಎಂದರು. ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿರಾದಾರ ಪಾಟೀಲ, ಕಂದಾಯ ಅಧಿಕಾರಿ ಎಫ್.ಬಿ. ಗಿಡ್ಡಿ ಸೇರಿದಂತೆ ಸಿಬ್ಬಂದಿ, ಪೌರ ಕಾರ್ಮಿಕರು ಜಾಥಾದಲ್ಲಿದ್ದರು.