ಸಾರಾಂಶ
ಮೂಲ್ಕಿಯ ಬಪ್ಪನಾಡು ಕ್ಷೇತ್ರದ ವಠಾರದಲ್ಲಿ ಮೂಲ್ಕಿಯ ಬಪ್ಪನಾಡು ಸಾರ್ವಜನಿಕ ಶ್ರೀ ಗಣೇಶೋತ್ಸವದ ಸುವರ್ಣ ಸಂಭ್ರಮ ನಡೆಯಿತು. ಈ ಸಂದರ್ಭ ಧಾರ್ಮಿಕ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಧಾರ್ಮಿಕ ಕೇಂದ್ರಗಳಲ್ಲಿ ಶಿಕ್ಷಣಕ್ಕೆ ಪ್ರೋತ್ಸಾಹ, ಅನಾರೋಗ್ಯ ಪೀಡಿತರಿಗೆ ಸಹಾಯ ಹಾಗೂ ದೇವಳದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಯಾಗಲಿ ಎಂದು ಮೂಲ್ಕಿಯ ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಎಚ್. ಅರವಿಂದ ಪೂಂಜ ಹೇಳಿದರು.ಮೂಲ್ಕಿಯ ಬಪ್ಪನಾಡು ಕ್ಷೇತ್ರದ ವಠಾರದಲ್ಲಿ ನಡೆಯುತ್ತಿರುವ ಸುವರ್ಣ ಸಂಭ್ರಮದಲ್ಲಿರುವ ಮೂಲ್ಕಿಯ ಬಪ್ಪನಾಡು ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಪ್ಪನಾಡು ಕ್ಷೇತ್ರದ ಶಿಬರೂರು ಗೋಪಾಲಕೃಷ್ಣ ತಂತ್ರಿ ಅವರು ಮಾತನಾಡಿ, ಹೆತ್ತವರು ತಮ್ಮ ಮಕ್ಕಳನ್ನು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿಸುವ ಮೂಲಕ ಸಂಸ್ಕಾರ ಹಾಗೂ ಸಂಸ್ಕೃತಿ ತಿಳಿಸುವ ಕಾರ್ಯಮಾಡಬೇಕೆಂದು ಹೇಳಿದರು.ದೇವಸ್ಥಾನದ ಕಾರ್ಯನಿರ್ವಣಾಧಿಕಾರಿ ಶ್ವೇತಾ ಪಳ್ಳಿ ಮಾತನಾಡಿ, ಬಪ್ಪನಾಡು ಕ್ಷೇತ್ರದಲ್ಲಿ 2030ರಲ್ಲಿ ಬ್ರಹ್ಮಕಲಶ ನಡೆಯಲಿದ್ದು, ಅದರ ಮುಂಚೆ ನಡೆಯುವ ಎಲ್ಲ ಜೀರ್ಣೋದ್ಧಾರ ಕಾರ್ಯಕ್ಕೆ ಭಕ್ತರು ಸಹಕಾರ ನೀಡಬೇಕೆಂದು ಹೇಳಿದರು.
ಧಾರ್ಮಿಕ ವಿದ್ವಾಂಸ ವೇ.ಮೂ. ವಾದಿರಾಜ ಉಪಾಧ್ಯಾಯ ಕೊಲಕಾಡಿ ಆಶೀರ್ವಚನ ನೀಡಿದರು. ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರನ್ನು ಸಾಧಕರ ನೆಲೆಯಲ್ಲಿ ಗೌರವಿಸಲಾಯಿತು. ಪಾದೆಮನೆ ಜಯಂತ್ ರೈ, ಶರತ್ ನರ್ಸಪ್ಪ ಸಾಲ್ಯಾನ್, ಹಿರಿಯರಾದ ಮುರಳೀಧರ ಭಂಡಾರಿ ಕುಬೆವೂರು, ಮಯೂರಿ ಫೌಂಡೇಶನ್‌ನ ಜಯ ಶೆಟ್ಟಿ ಮತ್ತಿತರರು ಇದ್ದರು. ಸಮಿತಿ ಅಧ್ಯಕ್ಷ ಚಂದ್ರಶೇಖರ ಸುವರ್ಣ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುನಿಲ್ ಆಳ್ವ ನಿರೂಪಿಸಿದರು. ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.