ಸಾರಾಂಶ
ಹಾನಗಲ್ಲ: ಪಟ್ಟಣದ ಹೊರವಲಯದ ಅಲೆಮಾರಿಗಳ ಗುಡಿಸಿಲಿನಂಗಳಕ್ಕೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲೆಮಾರಿ ಆಭಿವೃದ್ಧಿ ನಿಗಮದ ಮ್ಯಾನೇಜಿಂಗ್ ಡೈರೆಕ್ಟರ್ ಮಲ್ಲಿಕಾರ್ಜುನ ದಿಢೀರ್ ಭೇಟಿ ನೀಡಿ, ಕೂಡಲೇ ಕುಡಿಯುವ ನೀರು, ರಸ್ತೆ, ಸುರಕ್ಷಿತ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಅನುದಾನ ಒದಗಿಸುವುದಾಗಿ ತಿಳಿಸಿದರು.ಇಲ್ಲಿನ ಅಲೆಮಾರಿಗಳ ಸಮಸ್ಯೆ ಕುರಿತು ಮಾ. 9ರಂದು ಕನ್ನಡಪ್ರಭ ಅಲೆಮಾರಿಗಳ ಬದುಕಿಗೆ ಬೇಕಿದೆ ಆಸರೆ ಎಂಬ ಶೀರ್ಷಿಕೆಯಡಿ ಸಚಿತ್ರ ವರದಿ ಪ್ರಕಟಿಸಿದ್ದ ಹಿನ್ನೆಲೆ ಬುಧವಾರ ಸಂಜೆ ಪಟ್ಟಣದ ಹೊರವಲಯದ ಪಾಳಾ ರಸ್ತೆಯ ಬದಿ ಇರುವ ಅಲೆಮಾರಿಗಳ ವಸತಿಗೆ ಭೇಟಿ ನೀಡಿ, ಅಲ್ಲಿನವರ ಕಷ್ಟಗಳ ಕುರಿತು ಚರ್ಚಿಸಿದ ಅವರು, ರಸ್ತೆ ಇಲ್ಲದ, ಸುರಕ್ಷಿತ ವಿದ್ಯುತ್ ಸಂಪರ್ಕವಿಲ್ಲದ, ಕುಡಿಯುವ ನೀರಿಲ್ಲದ ಸ್ಥಿತಿಯ ಬಗೆಗೆ ಚರ್ಚಿಸಿ ಪರಿಹಾರ ಮಾರ್ಗಗಳನ್ನು ಸೂಚಿಸಿ, ಅದಕ್ಕೆ ಬೇಕಾಗುವ ಅನುದಾನವನ್ನು ತಮ್ಮ ನಿಗಮದಿಂದ ನೀಡುವುದಾಗಿ ಪ್ರಕಟಿಸಿದರು.ಸ್ಥಳದಲ್ಲಿಯೇ ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಕೂಡಲೇ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆಗಾಗಿ ಬೇಕಾಗುವ ಅನುದಾನದ ಮೊತ್ತವನ್ನು ತಿಳಿಸಲು ಸೂಚಿಸಿದರು. ಶೀಘ್ರ ಇಲ್ಲಿನ ಅಲೆಮಾರಿಗಳಿಗೆ ನೀಡಿದ ವಸತಿ ನಿವೇಶನಗಳ ಅಳತೆಯನ್ನು ಸರಿಪಡಿಸಿ ನೀಡಲು ತಿಳಿಸಿದರು. ಇಲ್ಲದಿದ್ದರೆ ಇವರಿಗೆ ಮನೆ ಕಟ್ಟಿಕೊಳ್ಳಲೂ ತಾಂತ್ರಿಕ ಸಮಸ್ಯೆ ಎದುರಾಗುತ್ತದೆ ಎಂದು ಗಮನ ಸೆಳೆದರು.ಮಳೆ ಗಾಳಿಯಿಂದ ತಾತ್ಕಾಲಿಕ ರಕ್ಷಣೆಗಾಗಿ ಸಧ್ಯಕ್ಕೆ ನಿರ್ಮಿಸಿಕೊಂಡ ಗುಡಿಸಲುಗಳಿಗೆ ಎರಡು ಮೂರು ದಿನಗಳಲ್ಲಿ ಅಗತ್ಯವಾದ ತಾಡಪಾಲುಗಳನ್ನು ಒದಗಿಸುವುದಾಗಿ ತಿಳಿಸಿದರು.
ಉಳಿದೆಲ್ಲ ಸೌಲಭ್ಯಕ್ಕಾಗಿ ಜಿಲ್ಲಾಧಿಕಾರಿ, ತಹಸೀಲ್ದಾರರು, ವಿದ್ಯುತ್ ಇಲಾಖೆ, ಪುರಸಭೆಗೆ ಪತ್ರ ಬರೆದು ಕ್ರಮಕ್ಕೆ ಗಮನ ಸೆಳೆಯುವುದಾಗಿ, ಅಸುರಕ್ಷಿತ ವಿದ್ಯುತ್ ಸಂಪರ್ಕ ಹಾಗೂ ನಿವೇಶನಗಳ ಮೇಲೆ ಹಾದು ಹೋದ ಹೈವೋಲ್ಟೇಜ್ ವಿದ್ಯುತ್ ತಂತಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.ಅಲೆಮಾರಿಗಳು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಕಿತ್ತೂರು ಚೆನ್ನಮ್ಮ, ಮೊರಾರ್ಜಿ ವಸತಿ ಶಾಲೆ, ಆಶ್ರಮ ಶಾಲೆಗಳಲ್ಲಿ ಅಲೆಮಾರಿಗಳಿಗೆ ಹೆಚ್ಚು ಸೌಲಭ್ಯಗಳಿವೆ. ಅಲ್ಲಿ ಮಕ್ಕಳನ್ನು ಓದಲು ಸೇರಿಸಿ. ನಮಗೆ ಮಾಹಿತಿ ನೀಡಿದರೆ ಇಲಾಖೆಯಿಂದಲೇ ಅಲೆಮಾರಿಗಳ ಮಕ್ಕಳ ಶಾಲಾ ಶಿಕ್ಷಣಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.ರಾಜ್ಯ ಎಸ್‌ಸಿ ಎಸ್‌ಟಿ ಹಾಗೂ ಅಲೆಮಾರಿ ಬುಡಕಟ್ಟು ಜನಾಂಗಗಳ ರಾಜ್ಯಾಧ್ಯಕ್ಷ ವೀರೇಶ ವಿಭೂತಿ ಮಾತನಾಡಿ, ಕಾಲ ಕಾಲಕ್ಕೆ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ನಿಮ್ಮ ಸೌಲಭ್ಯಗಳಿಗೆ ಮನವಿ ಮಾಡಿ ಎಂದರು. ಸಮಾಜ ಸೇವಕ ನಾಗಭೂಷಣ, ಅಲೆಮಾರಿಗಳ ಪ್ರತಿನಿಧಿ ಸೋಮಣ್ಣ ಈ ಸಂದರ್ಭದಲ್ಲಿದ್ದರು.
ಅಂಗನವಾಡಿ ಬೇಡಿಕೆ: ನಮಗೆ ಇಲ್ಲಿಂದ ದೂರದ ಅಂಗವಾಡಿಗೆ ಮಕ್ಕಳನ್ನು ಕಳಿಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ನಮ್ಮ ಮಕ್ಕಳಿಗೊಂದು ಅಂಗನವಾಡಿಯನ್ನು ಇಲ್ಲಿಯೇ ತೆರೆಯಲು ಮನವಿ ಮಾಡಿದರು.