ಸಾರಾಂಶ
ವಿಷಪೂರಿತ ಆಹಾರ ಸೇವಿಸಿ 60 ಕುರಿ ಹಾಗೂ ಮೇಕೆಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಶುಕ್ರವಾರ ತಾಲೂಕಿನ ವಡ್ರೇವು ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಪಾವಗಡ
ವಿಷಪೂರಿತ ಆಹಾರ ಸೇವಿಸಿ 60 ಕುರಿ ಹಾಗೂ ಮೇಕೆಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಶುಕ್ರವಾರ ತಾಲೂಕಿನ ವಡ್ರೇವು ಗ್ರಾಮದ ಹೊರವಲಯದಲ್ಲಿ ನಡೆದಿದೆ.ತಾಲೂಕು ಗಡಿ ಗ್ರಾಮವಾದ ಬಿ.ಕೆ. ಹಳ್ಳಿ ಗ್ರಾಪಂ ವ್ಯಾಪ್ತಿಯ ವಡ್ರೇವು ಗ್ರಾಮದ ಬಡ ರೈತರಿಗೆ ಸೇರಿದ್ದ ತಲ 12ಸಾವಿರ ರು, ಬೆಲೆಬಾಳುವ 60ಕುರಿ ಹಾಗೂ ಮೇಕೆಗಳು ಇದ್ದಕ್ಕಿದ್ದ ಹಾಗೆ ಸ್ಥಳದಲ್ಲಿಯೇ ಸಾವನ್ನಪ್ಪಿವೆ. ಮೇವಿಗಾಗಿ ಎಂದಿನಂತೆ ಕುರಿಗಳನ್ನು ಗ್ರಾಮದ ಹೊರವಲಯಕ್ಕೆ ಕರೆದ್ಯೊಯ್ದಿದ್ದು ಸಮೀಪದ ಪರಂಗಿ ಗಿಡ ತೋಟದ ಪಕ್ಕದಲ್ಲಿ ಬೆಳೆದಿದ್ದ ಹುಲ್ಲು ಸೇವಿಸಿದ ಬಳಿಕ ಈ ದುರ್ಘಟನೆ ಸಂಭವಿಸಿರುವುದಾಗಿ ಕುರಿಗಾಹಿಗಳಿಂದ ತಿಳಿದುಬಂದಿದೆ.
ವಡ್ರೇವು ಗ್ರಾಮದ ಗೊಲ್ಲ ಸಮುದಾಯಕ್ಕೆ ಸೇರಿದ್ದ ಅಂಜಪ್ಪ, ಗೋಪಾಲಪ್ಪ ಮತ್ತು ರವಿ ಎಂಬ ಈ ಮೂರು ಕುಟುಂಬಕ್ಕೆ ಸೇರಿದ ಈ ಕುರಿ ಮೇಕೆಗಳು ಸಾವಿಗೀಡಾಗಿ ತೀವ್ರ ಆತಂಕ ಸೃಷ್ಟಿಸಿದೆ. ಕುರಿ, ಮೇಕೆ ಸಾಕಾಣಿಕೆಯಿಂದ ತಮ್ಮ ಜೀವನ ಸಾಗಿಸುತ್ತಿದ್ದೇವೆ. ಮೇವು ತಿಂದ ಬಳಿಕ ಎಲ್ಲಾ ಕುರಿ, ಮೇಕೆ ಸಾವನ್ನಪ್ಪಿವೆ. ದಿಕ್ಕು ತೋಚದಾಂಗಿದೆ ಎಂದು ಕುರಿ ಮೇಕೆಯ ರೈತರು ಆಳಲು ತೋಡಿಕೊಂಡಿದ್ದಾರೆ.ಇನ್ನೂ ವಿಷಯ ತಿಳಿಯುತ್ತಿದ್ದಂತೆ ತಾಲೂಕು ಪಶು ಸಂಗೋಪನೆ ಇಲಾಖೆಯ ವೈದ್ಯರು ಧಾವಿಸಿದ್ದು ಕುರಿಮೇಕೆಗಳ ಶವ ಪರೀಕ್ಷೆ ನಡೆಸಿ ವರದಿ ಪಡೆದಿದ್ದಾರೆ. ಕುರಿ ಮೇಯಿಸುವ ಮೂಲಕ ಆಧಾರವಾಗಿಟ್ಟುಕೊಂಡ ರೈತರು ಕುರಿ ಮೇಕೆಯ ಸಾವಿನಿಂದ ತೀವ್ರ ಕಂಗಾಲಾಗಿದ್ದು ಆರು ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಈ ಸಂಬಂಧ ಶೀಘ್ರ ಸರ್ಕಾರ ಸಂತ್ರಸ್ಥ ರೈತರ ನೆರವಿಗೆ ಬಂದು ಸೂಕ್ತ ಪರಿಹಾರ ಕಲ್ಪಿಸುವಂತೆ ಇಲ್ಲಿನ ಆನೇಕ ಮಂದಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.