ತಾಂತ್ರಿಕ ಪರಿಣತಿಯಿಲ್ಲದ ವಕೀಲರಿಂದ ಅನ್ಯಾಯ: ರಾಜಾರಾವ್
KannadaprabhaNewsNetwork | Published : Oct 10 2023, 01:01 AM IST
ತಾಂತ್ರಿಕ ಪರಿಣತಿಯಿಲ್ಲದ ವಕೀಲರಿಂದ ಅನ್ಯಾಯ: ರಾಜಾರಾವ್
ಸಾರಾಂಶ
ತಾಂತ್ರಿಕ ಪರಿಣತಿಯಿಲ್ಲದ ವಕೀಲರಿಂದ ಅನ್ಯಾಯ: ರಾಜಾರಾವ್
- ಪರಿಸರ ಸಂರಕ್ಷಣೆ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಕಷ್ಟ - ಬಾಕಿ ೨೬ ರಿಂದ ೨೭ ಟಿಎಂಸಿ ನೀರಿಗೆ ಒತ್ತಡ ತರುವುದು ಅಗತ್ಯ ಕನ್ನಡಪ್ರಭ ವಾರ್ತೆ ಮಂಡ್ಯ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ವಕೀಲರಿಗೆ ತಾಂತ್ರಿಕ ಪರಿಣಿತಿ ಇಲ್ಲದ ಕಾರಣ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ನೀರಾವರಿ ತಜ್ಞ ಕ್ಯಾಪ್ಟನ್ ರಾಜಾರಾವ್ ಹೇಳಿದರು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಡೆಯುತ್ತಿರುವ ಕಾವೇರಿ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯದ ಪರ ವಕೀಲರಿಂದ ದೊಡ್ಡ ತಪ್ಪಾಗಿದೆ. ಅದೇ ರೀತಿ ರಾಜ್ಯ ಸರ್ಕಾರವೂ ತಪ್ಪು ಹೆಜ್ಜೆ ಇಡುತ್ತಿದೆ, ನ್ಯಾಯಾಧೀಕರಣದ ತೀರ್ಪಿನಲ್ಲಿ ೪೦,೦೦೦ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಬೇಕೆಂಬ ಷರತ್ತು ಇದೆ. ಆದರೆ, ಏಳು ಸಕ್ಕರೆ ಕಾರ್ಖಾನೆಯನ್ನು ಆರಂಭಿಸಿ ರೈತರನ್ನು ಕಬ್ಬು ಬೆಳೆಯಿರಿ ಎನ್ನುತ್ತಿದೆ, ಹಲವು ಪ್ರದೇಶದಲ್ಲಿ ೧೫ಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳನ್ನು ಅನುಷ್ಟಾನ ಮಾಡಿದೆ, ಇದಕ್ಕೆಲ್ಲ ೧೫ ಟಿಎಂಸಿ ನೀರು ಬೇಕು ಎಲ್ಲಿಂದ ತಂದುಕೊಡುತ್ತಾರೆ, ರೈತರ ಗತಿ ಏನು ಎಂದು ಪ್ರಶ್ನಿಸಿದರು. ಕರ್ನಾಟಕ ಸರ್ಕಾರ ಈ ವಿಚಾರದಲ್ಲಿ ಸೂಕ್ಷ್ಮತೆಯಿಂದ ಹೆಜ್ಜೆ ಇರಿಸಬೇಕಾಗಿದೆ, ೬೭ ಟಿಎಂಸಿ ಸಾಮರ್ಥ್ಯದ ಮೇಕೆದಾಟು ಯೋಜನೆಗೆ ಪರಿಸರ ಸಂರಕ್ಷಣೆ ಹಿನ್ನೆಲೆಯಲ್ಲಿ ಅನುಮತಿ ಸಿಗುವುದು ಕಷ್ಟವಾಗಬಹುದು ಹಾಗಾಗಿ ಪರಿಸರಕ್ಕೆ ಹಾನಿಯಾಗದಂತೆ ಶಿವನ ಸಮುದ್ರಂ, ಮೇಕೆದಾಟು ಅಣೆಕಟ್ಟುಗಳ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದು ಸಲಹೆ ನೀಡಿದರು. ನಾಲ್ಕು ರಾಜ್ಯಗಳಿಗೆ ಹಂಚಿಕೆ ಮಾಡಿ ಉಳಿದಿರುವ ಬಾಕಿ ೨೬ ರಿಂದ ೨೭ ಟಿಎಂಸಿ ನೀರನ್ನು ಹಂಚಿಕೆ ಮಾಡುವಂತೆ ಒತ್ತಾಯಿಸ ಬೇಕಾಗಿದ್ದು, ಅದೇ ರೀತಿ ಜಲಾನಯನ ಪ್ರದೇಶದ ನೀರಿನ ಸದ್ಬಳಕೆ ಹಾಗೂ ನೀರಿನ ಮಿತ ಬಳಕೆಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು, ಕೇರಳದ ಜೊತೆ ಮಾತುಕತೆ ನಡೆಸಿ ಕುಂಗನಹಳ್ಳಿ ಸಮೀಪ ಸೇತುವೆ ಇರುವ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಅಣೆಕಟ್ಟು ನಿರ್ಮಾಣ ಮಾಡಿದರೆ ೧೦ ಟಿಎಂಸಿ ನೀರು ಸಿಗಲಿದೆ, ಬೆಂಗಳೂರಿಗೆ ಸರಬರಾಜು ಮಾಡುವ ಕುಡಿಯುವ ನೀರಿನಲ್ಲಿ ಐದು ಟಿಎಂಸಿ ಉಳಿಸಬಹುದಾಗಿದೆ, ಅಂತರ್ಜಲ ಬಳಕೆ ಜೊತೆಗೆ ರೈತರು ದೇಸಾಯಕ್ಕೆ ಕಡಿಮೆ ನೀರು ಬಳಸುವ ಪದ್ಧತಿ ಹಾಗೂ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು, ನಾಲೆಯ ನೀರು ರಾತ್ರಿ ವೇಳೆ ಫೋಲಾಗುತ್ತಿದೆ ಹಾಗಾಗಿ ಸಂಜೆ ೬ ರಿಂದ ಬೆಳಿಗ್ಗೆ ೬ ರವರೆಗೆ ನಾಲೆಗಳಲ್ಲಿ ನೀರು ಸಂಗ್ರಹವಾಗುವಂತೆ ತಡೆತೂಬು ನಿರ್ಮಿಸಬೇಕು ಹೀಗೆ ಮಾಡಿದರೆ ನೂರಾರು ಟಿಎಂಸಿ ಉಳಿದು ನೀರು ಸದ್ಬಳಕೆಯಾಗಲಿದೆ ಎಂದರು.