ಗಾಣಿಗ ಸಮಾಜಕ್ಕೆ ಆಯೋಗದಿಂದ ಅನ್ಯಾಯ

| Published : Apr 17 2025, 12:10 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಯಪ್ರಕಾಶ ಹೆಗ್ಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಜಾತಿ ಜನಗಣತಿ ವರದಿಯಲ್ಲಿ ಗಾಣಿಗ ಸಮುದಾಯದ ಜನಸಂಖ್ಯೆ ಅತಿ ಕಡಿಮೆ ತೋರಿಸಿ ರಾಜ್ಯದ ಬಹುಸಂಖ್ಯಾತ ಗಾಣಿಗ ಸಮಾಜಕ್ಕೆ ಆಯೋಗ ದೊಡ್ಡ ಅನ್ಯಾಯ ಮಾಡಿದೆ. ಇದನ್ನು ಕೂಡಲೇ ತಿರಸ್ಕರಿಸುವಂತೆ ಗಾಣಿಗ ಸಮಾಜ ಹಕ್ಕೊತ್ತಾಯ ಮಂಡಿಸಿದೆ. ನಗರದ ವನಶ್ರೀ ಮಂಗಲ ಕಾರ್ಯಾಲಯದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಗಾಣಿಗ ಸಮಾಜದ ಮುಖಂಡರು, ವಿವಿಧ ಸಂಘಟನೆಗಳ ಪ್ರಮುಖರು ಒಕ್ಕೊರಲಿನಿಂದ ಸರ್ಕಾರಕ್ಕೆ ಸಂದೇಶ ರವಾನಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಯಪ್ರಕಾಶ ಹೆಗ್ಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಜಾತಿ ಜನಗಣತಿ ವರದಿಯಲ್ಲಿ ಗಾಣಿಗ ಸಮುದಾಯದ ಜನಸಂಖ್ಯೆ ಅತಿ ಕಡಿಮೆ ತೋರಿಸಿ ರಾಜ್ಯದ ಬಹುಸಂಖ್ಯಾತ ಗಾಣಿಗ ಸಮಾಜಕ್ಕೆ ಆಯೋಗ ದೊಡ್ಡ ಅನ್ಯಾಯ ಮಾಡಿದೆ. ಇದನ್ನು ಕೂಡಲೇ ತಿರಸ್ಕರಿಸುವಂತೆ ಗಾಣಿಗ ಸಮಾಜ ಹಕ್ಕೊತ್ತಾಯ ಮಂಡಿಸಿದೆ. ನಗರದ ವನಶ್ರೀ ಮಂಗಲ ಕಾರ್ಯಾಲಯದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಗಾಣಿಗ ಸಮಾಜದ ಮುಖಂಡರು, ವಿವಿಧ ಸಂಘಟನೆಗಳ ಪ್ರಮುಖರು ಒಕ್ಕೊರಲಿನಿಂದ ಸರ್ಕಾರಕ್ಕೆ ಸಂದೇಶ ರವಾನಿಸಿದರು.

ಜಿಲ್ಲಾ ಗಾಣಿಗ ಸಮಾಜ ಸಂಘ, ಜಿಲ್ಲಾ ಯುವ ಗಾಣಿಗ ಘಟಕ, ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ, ನಿವೃತ್ತ ಗಾಣಿಗ ಸಮಾಜದ ನೌಕರರು ಸೇರಿದಂತೆ ವಿವಿಧ ಪ್ರಮುಖರು ಈ ನಿರ್ಧಾರ ಸ್ವೀಕರಿಸಿದರು. ನಂತರ ನಗರದ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು.

ಈ ವೇಳೆ ಚಳಕಾಪೂರ ಆರೂಢಾಶ್ರಮದ ಶ್ರೀಶಂಕರನಾಂದ ಸ್ವಾಮೀಜಿ ಮಾತನಾಡಿ, ಗಾಣಿಗ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದೆ, ಮೀಸಲಾತಿಯ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಾಗಿಲ್ಲ. ಅನೇಕ ಸಮುದಾಯಗಳು ಮೀಸಲಾತಿ ಪ್ರಯೋಜನ ಪಡೆದು ಮುನ್ನಡೆಯುತ್ತಿವೆ. ಆದರೆ, ಸಮಾಜ ಇಂದಿಗೂ ಸೌಲಭ್ಯಗಳಿಂದ ವಂಚಿತವಾಗಿದೆ. ಕೈಕಟ್ಟಿ ಕುಳಿತುಕೊಂಡರೆ ಪ್ರಯೋಜನವಿಲ್ಲ. ಅನ್ಯಾಯವಾದಾಗ ಹೋರಾಡಿ, ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ಸಮಾಜಕ್ಕೆ ಕರೆ ನೀಡಿದರು.

ಅಖಿಲ ಭಾರತ ಗಾಣಿಗ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಜಾತಿ ಜನಗಣತಿ ವರದಿ ಅವೈಜ್ಞಾನಿಕವಾಗಿದ್ದು, ಗಾಣಿಗ ಸಮಾಜದ ಸಂಖ್ಯೆ ಒಟ್ಟು 7 ಲಕ್ಷ ಎಂದು ನಮೂದಿಸಿರುವುದು ಸತ್ಯಕ್ಕೆ ದೂರ. ವಾಸ್ತವವಾಗಿ ಗಾಣಿಗ ಸಮಾಜದ ಜನಸಂಖ್ಯೆ 40 ಲಕ್ಷದಷ್ಟಿದೆ, 13 ಒಳಪಂಗಡಗಳನ್ನು ಹೊಂದಿದೆ. ಅವಳಿ ಜಿಲ್ಲೆಯಲ್ಲಿಯೇ ಗಾಣಿಗ ಸಮಾಜದ ಸಂಖ್ಯೆ ಐದು ಲಕ್ಷವಿದೆ. ಬೆಳಗಾವಿ, ರಾಯಚೂರ, ಕಲಬುರಗಿ ಹೀಗೆ ಇಡಿ ರಾಜ್ಯದಲ್ಲಿ ಗಾಣಿಗ ಸಮಾಜ ದೊಡ್ಡ ಸಂಖ್ಯೆಯಲ್ಲಿದೆ. ಈ ಅವೈಜ್ಞಾನಿಕ ವರದಿಯಿಂದ ಸಮಾಜಕ್ಕೆ ದೊಡ್ಡ ಅನ್ಯಾಯವಾಗಲಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಬಯಸುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮೇಲೆ ಸಮಾಜ ವಿಶ್ವಾಸವಿದೆ. ಈ ವಿಶ್ವಾಸ ಉಳಿಸಿಕೊಂಡು ಹೋಗಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಗಾಣಿಗ ಸಮಾಜ ಸಂಘದ ಜಿಲ್ಲಾಧ್ಯಕ್ಷ ಬಿ.ಬಿ.ಪಾಸೋಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಬಾಬು ಸಜ್ಜನ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮೀನಾಕ್ಷಿ ಉಟಗಿ, ಯುವ ಗಾಣಿಗ ಘಟಕದ ಜಿಲ್ಲಾಧ್ಯಕ್ಷ ಗುರುನಾಥ ಅಂದೇವಾಡಿ ಮೊದಲಾದವರು ಮಾತನಾಡಿದರು. ಈ ವೇಳೆ ಜಿಲ್ಲಾ ಗಾಣಿಗ ಸಮಾಜದ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು, ಹಿರಿಯರು‌ ಮುಂತಾದವರು ಇದ್ದರು.

--------------

ಕೋಟ್‌

ರಾಜ್ಯದಲ್ಲಿ ಗಾಣಿಗ ಸಮಾಜದ ಜನಸಂಖ್ಯೆ ಕೇವಲ 7 ಲಕ್ಷ ತೋರಿಸಿದ್ದು, ವಿಜಯಪುರ ಜಿಲ್ಲೆಯಲ್ಲಿಯೇ ಎರಡೂವರೆ ಲಕ್ಷಕ್ಕೂ ಅಧಿಕ ಗಾಣಿಗ ಸಮಾಜವಿದೆ. ವರದಿಯಲ್ಲಿ ಇಡೀ ಕೇವಲ 7ಲಕ್ಷ ಎಂದು ಹೇಳಲಾಗಿದೆ. ಇದು ಸಮಾಜಕ್ಕೆ ಮಾಡಿದ ಅವಮಾನ. ಗಾಣಿಗ ಸಮಾಜದವರು 40 ಲಕ್ಷದಷ್ಟು ಜನಸಂಖ್ಯೆ ಹೊಂದಿದೆ, ಪ್ರಸ್ತುತ ಜಾತಿ ಜನಗಣತಿ ವರದಿ ಅತ್ಯಂತ ಅವೈಜ್ಞಾನಿಕವಾಗಿದೆ. ಇದನ್ನು ನಮ್ಮ ಸಮಾಜ ಒಪ್ಪುವುದಿಲ್ಲ, ಕೂಡಲೇ ಈ ವರದಿಯನ್ನು ಹಿಂದಕ್ಕೆ ಪಡೆದುಕೊಳ್ಳಬೇಕು. ಇಲ್ಲವಾದರೆ ಹೋರಾಟ ನಿರಂತರ ನಡೆಯಲಿದೆ‌.

ದಯಾಸಾಗರ ಪಾಟೀಲ, ಸಮಾಜದ ಮುಖಂಡ----