ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಶಾಸಕರು ಮಧ್ಯಸ್ಥಿಕೆ ವಹಿಸಿದ್ದರಿಂದ ಬಿಜೆಪಿ ಸದಸ್ಯರಿಗೆ ಅನ್ಯಾಯವಾಗಿದೆ. ಇದು ಸಂವಿಧಾನ ವಿರೋಧಿ ಚುನಾವಣೆಯಾಗಿ ಇದನ್ನು ನಾವು ಖಂಡಿಸುತ್ತೇವೆ ಎಂದು ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಹಾಗೂ ಸದಾಶಿವ ಮಾಗಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಶಾಸಕರು ಮಧ್ಯಸ್ಥಿಕೆ ವಹಿಸಿದ್ದರಿಂದ ಬಿಜೆಪಿ ಸದಸ್ಯರಿಗೆ ಅನ್ಯಾಯವಾಗಿದೆ. ಇದು ಸಂವಿಧಾನ ವಿರೋಧಿ ಚುನಾವಣೆಯಾಗಿ ಇದನ್ನು ನಾವು ಖಂಡಿಸುತ್ತೇವೆ ಎಂದು ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಹಾಗೂ ಸದಾಶಿವ ಮಾಗಿ ಹೇಳಿದ್ದಾರೆ.ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಬಳಿಕ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಜೆಪಿಯಿಂದ ಒಟ್ಟು 8 ಸದಸ್ಯರು ಹಾಗೂ ಐದು ಪಕ್ಷೇತರರು ಒಟ್ಟಾಗಿ ರಿಯಾಜ ಅಹ್ಮದ ಢವಳಗಿಯನ್ನು ಅಧ್ಯಕ್ಷ ಸ್ಥಾನಕ್ಕೆ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸಹನಾ ಬಡಿಗೇರ ಅವರ ನಾಮಪತ್ರ ಸಲ್ಲಿಸಿದ್ದೆವು. ಆದರೆ, ಚುನಾವಣೆಯ ಕೆಲವೇ ನಿಮಿಷಗಳಲ್ಲಿ ಶಾಸಕ ಸಿ.ಎಸ್.ನಾಡಗೌಡರು ಹಾಗೂ ಕಾಂಗ್ರೆಸ್ ಮುಖಂಡರು ಮೈಬೂಬ ಗೊಳಸಂಗಿ ಅಧ್ಯಕ್ಷರನ್ನಾಗಿ, ಪ್ರೀತಿ ದೇಗಿನಾಳರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡುವಂತೆ ಚುನಾವಣಾಧಿಕಾರಿಗಳ ಮೇಲೆ ಒತ್ತಡ ಹೇರಿ ಘೋಷಣೆ ಮಾಡಿದ್ದು ಆಶ್ಚರ್ಯ ಉಂಟು ಮಾಡಿದೆ. ಇದು ಕಾನೂನು ವಿರೋಧಿ ನಡೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣಾಧಿಕಾರಿಗಳು ಸಹಿತ ಕಾಂಗ್ರೆಸ್ ಅಣತಿಯಂತೆ ನಡೆದುಕೊಂಡಿದ್ದು, ಇದರಿಂದ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ನಮಗೆ ಅನ್ಯಾಯವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುವ ಮೂಲಕ ಕಾನೂನು ಸಮರಕ್ಕೆ ಸಿದ್ಧವಾಗಿದ್ದಾಗಿ ತಿಳಿಸಿದರು.ಈ ವೇಳೆ ಮುಖಂಡರಾದ ಸೋಮನಗೌಡ ಬಿರಾದಾರ, ಹರೀಶ ನಾಟಿಕಾರ, ಸಂಜು ಬಾಗೇವಾಡಿ, ವಿಜಯಕುಮಾರ ಬಡಿಗೇರ, ಪುರಸಭೆ ಸದಸ್ಯರಾದ ಚನ್ನಪ್ಪ ಕಂಠಿ, ಸಹನಾ ಬಡಿಗೇರ, ಅಶೋಕ ಒನಹಳ್ಳಿ ಸೇರಿ ಹಲವರು ಇದ್ದರು.