ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಒಳ ಮೀಸಲಾತಿ ವರ್ಗಿಕರಣ ವಿಚಾರವಾಗಿ ಜಸ್ಟಿಸ್ ನಾಗಮೋಹನ್ ದಾಸ್ ಅವರ ವರದಿಯ ಪ್ರಕಾರ ರಾಜ್ಯದಲ್ಲಿ ಈಗ ಹೊಲಯ ಮತ್ತು ಮಾದಿಗ ಈ ಎರಡು ಸಮುದಾಯದ ಗುಂಪಿನ ನಡುವೆ ಅಂಕಿಅಂಶದಲ್ಲಿ ವ್ಯತ್ಯಾಸವಾಗಿರುವುದರಿಂದ ಸರ್ಕಾರ ವರ್ಗಿಕರಣವನ್ನು ಮರು ಪರಿಷ್ಕರಣೆಗೊಳಿಸಬೇಕು ಎಂದು ದಸಂಸ ಜಿಲ್ಲಾ ಸಂಚಾಲಕ ಎಂ.ಎನ್.ರಾಜಪ್ಪ ಹೇಳಿದರು.ಅವರು ಶನಿವಾರಸಂತೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳ ಮೀಸಲಾತಿ ವರ್ಗಿಕರಣ ಸಂದರ್ಭದಲ್ಲಿ ಬಲಗೈ ಸೇರಿದ ಅಂಕಿಅಂಶಕ್ಕೆ ಸಂಬಂಧಿಸಿದಂತೆ 1985ರ ಸಾಲಿನಲ್ಲಿ ಬಂದಿದ್ದ ತೀರ್ಪಿನ ಪ್ರಕಾರದಂತೆ ಬಲಗೈ ವರ್ಗದ ಸಂಖ್ಯೆ ಶೇ.70ರಷ್ಟು ಮತ್ತು ಎಡಗೈ ವರ್ಗದವರ ಸಂಖ್ಯೆ ಶೇ.60ರಷ್ಟು ಇದ್ದರು ಎಂಬ ಮಾಹಿತಿ ಕೊಡಲಾಗಿತ್ತು. ಆದರೆ ಈಗ ಬಲಗೈ ವರ್ಗದವರ ಸಂಖ್ಯೆ ಏರಿಕೆಯಾಗಿದ್ದು, ಸರ್ಕಾರ ಈಗ ಮಾಡಿರುವ ಒಳ ಮೀಸಲಾತಿ ವರ್ಗಿಕರಣದಲ್ಲಿ ಬಲಗೈ ವರ್ಗದವರಿಗೆ ಅನ್ಯಾಯವಾಗುತ್ತದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಹೊಲಯ ಬಲಗೈ ಹಾಗೂ ಇತರೆ ಒಟ್ಟು 18 ಉಪ ಜಾತಿಗಳಿದ್ದು, ಈ ಎಲ್ಲಾ ಅಂಕಿಅಂಶದಂತೆ ಮೀಸಲಾತಿ ವಿಚಾರದಲ್ಲಿ ಬಲಗೈ ವರ್ಗಕ್ಕೆ ಅನ್ಯಾಯವಾಗುತ್ತದೆ. ಈ ವಿಚಾರವಾಗಿ ಸಂಘಟನೆ ವತಿಯಿಂದ ಆ.22ರಂದು ಮಡಿಕೇರಿಯ ತಿಮ್ಮಯ್ಯ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ತೆರಳಿ ವರ್ಗಿಕರಣವನ್ನು ಮರು ಪರಿಶೀಲಿಸುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗುವುದು ಮತ್ತು ಈ ಪ್ರತಿಭಟನೆಯಲ್ಲಿ ಜಿಲ್ಲೆಯ ಬಲಗೈ ಸಮುದಾಯದ ನಾಯಕರು, ಬಾಂಧವರು, ಚಿಂತಕರು ಸೇರಿದಂತೆ ಸಮುದಾಯದ ಪ್ರತಿಯೊಬ್ಬರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.ಸಂಘಟನಾ ಸಂಚಾಲಕ ಎನ್.ಆರ್.ದೀವರಾಜು ಮಾತಮಾಡಿ, ಜಸ್ಟಿಸ್ ನಾಗಮಹೋಹನ್ ದಾಸ್ ಅವರ ಒಳ ಮೀಸಲಾತಿ ಜಾತಿ ಸಮಿಕರಣ ವರದಿ ಜಾರಿಯನ್ನು ಯಥಾವತ್ತಾಗಿ ಕೊನೆಗೊಳಿಸಿ ಮರು ಪರಿಷ್ಕರಣೆಗೊಳಿಸುವಂತೆ ರಾಜ್ಯಾದಂತ ಪ್ರತಿ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಆ.22ರಂದು ಮಡಿಕೇರಿಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಎಲ್ಲ ಬಲಗೈ ಸಂಬಂಧಿತ ಬಾಂಧವರು ಪಾಲ್ಗೊಂಡು ಪ್ರತಿಭಟನೆಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಪೊನ್ನಪ್ಪ, ರಾಜು, ಕೇಶವ, ಡಿಲಾಕ್ಷ, ವೀರಭದ್ರ ಹಾಜರಿದ್ದರು.