ಸಾರಾಂಶ
ಕನ್ನಡಪ್ರಭ ವಾರ್ತೆ ಭಟ್ಕಳ
ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ಕಾರ್ಯದಲ್ಲಿ ಶಿಕ್ಷಕರಿಗೆ ಅನ್ಯಾಯವಾಗುತ್ತಿರುವ ಕುರಿತು ರಾಜ್ಯ ಸರ್ಕಾರಿ ನೌಕರರ ಸಂಘದ ಸ್ಥಳೀಯ ಘಟಕ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.ಮನವಿಯಲ್ಲಿ ಸೆ.22ರಿಂದ ಆರಂಭವಾದ ಸಮೀಕ್ಷಾ ಕಾರ್ಯದಲ್ಲಿ ಹಲವು ನ್ಯೂನತೆಗಳು ಕಂಡುಬಂದಿದೆ. ಮನೆ ಪಟ್ಟಿ ನೀಡದೇ ಶಿಕ್ಷಕರನ್ನು ಗಣತಿಗೆ ನಿಯೋಜಿಸಿರುವುದು, ಪ್ರದೇಶದ ವ್ಯಾಪ್ತಿ ಸ್ಪಷ್ಟವಾಗಿಲ್ಲದಿರುವುದು, ಗಣತಿ ಆಪ್‌ನಲ್ಲಿ ತೋರಿಸುವ ಮನೆಗಳ ವಿವರಗಳು ಮತ್ತು ವಾಸ್ತವ ಮನೆಗಳ ಮಾಹಿತಿ ಹೊಂದಿಕೆಯಾಗದಿರುವುದು ಶಿಕ್ಷಕರಿಗೆ ದೊಡ್ಡ ತೊಂದರೆ ಉಂಟುಮಾಡುತ್ತಿದೆ ಎಂದು ತಿಳಿಸಲಾಗಿದೆ. ಗ್ರಾಮೀಣ ಭಾಗದ ಶಿಕ್ಷಕರನ್ನು ಪಟ್ಟಣಕ್ಕೆ ನಿಯೋಜಿಸಿರುವುದರಿಂದ ವಿಶೇಷವಾಗಿ ಮಹಿಳಾ ಶಿಕ್ಷಕರಿಗೆ ಅಪರಿಚಿತ ಪ್ರದೇಶದಲ್ಲಿ ಗಣತಿ ನಡೆಸುವುದು ಕಷ್ಟಕರವಾಗಿದೆ. ಅನಾರೋಗ್ಯ ಪೀಡಿತರು, ನಿವೃತ್ತಿ ಅಂಚಿನಲ್ಲಿರುವವರು, ಮೊಬೈಲ್ ಆ್ಯಪ್ ಬಳಕೆ ತಿಳಿಯದವರಿಗೂ ಗಣತಿ ಜವಾಬ್ದಾರಿ ನೀಡಿರುವುದು ಅಸಮಂಜಸವಾಗಿದೆ ಎಂದು ತಿಳಿಸಲಾಗಿದೆ. ಗಣತಿದಾರರಿಗೆ ಅಗತ್ಯ ಪರಿಕರಗಳು ಹಾಗೂ ಬ್ಯಾಗ್ ಒದಗಿಸದೆ ಇರುವುದರ ಜೊತೆಗೆ 150ಕ್ಕಿಂತ ಹೆಚ್ಚು ಮನೆ ಹಂಚಿಕೆ ಮಾಡಿರುವುದು ಶಿಕ್ಷಕರಿಗೆ ಹೆಚ್ಚುವರಿ ಹೊರೆ ತಂದಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸಮಸ್ಯೆಗೆ ಸೂಕ್ತ ಪರಿಹಾರ ದೊರೆಯುವವರೆಗೆ ಗಣತಿ ಕಾರ್ಯದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸಂಘಗಳು ತಹಶೀಲ್ದಾರರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ಸಂದರ್ಭ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ, ಕಾರ್ಯದರ್ಶಿ ವೆಂಕಟೇಶ ನಾಯ್ಕ, ಶಿಕ್ಷಕರ ಸಂಘದ ಉಲ್ಲಾಸ ನಾಯ್ಕ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))