ಕಾಂಗ್ರೆಸ್ ಸರ್ಕಾರದಿಂದ ಬಂಜಾರ ಸಮುದಾಯಕ್ಕೆ ಅನ್ಯಾಯ: ತಿಪ್ಪಾ ಸರನಾಯಕ

| Published : May 04 2024, 12:36 AM IST

ಸಾರಾಂಶ

ಕಾಂಗ್ರೆಸ್ ಅಧಿಕಾರಕ್ಕೆ ಬರಲು ನಮ್ಮ ಸಮಾಜ ಕಾರಣವಾಗಿದೆ. ಕಾಂಗ್ರೆಸ್ ನಮ್ಮನ್ನು ನಿರ್ಲಕ್ಷ್ಯ ಮಾಡಿದೆ. ಐದು ಮೀಸಲು ಕ್ಷೇತ್ರದಲ್ಲಿ ಒಂದೇ ಒಂದು ಟಿಕೆಟ್ ನಮ್ಮ ಸಮುದಾಯಕ್ಕೆ ನೀಡಿಲ್ಲ ಎಂದು ಬಂಜಾರ ಜಾಗೃತ ದಳದ ಸಂಸ್ಥಾಪಕ ಅಧ್ಯಕ್ಷ ತಿಪ್ಪಾ ಸರನಾಯಕ ಹೇಳಿದರು.

ಕೊಪ್ಪಳ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಂಜಾರ ಸಮಾಜದ ಪಾತ್ರವೂ ದೊಡ್ಡದಿದೆ. ಆದರೆ, ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಬಂಜಾರ ಸಮುದಾಯಕ್ಕೆ ಯಾವುದೇ ನ್ಯಾಯ ಸಿಗಲಿಲ್ಲ ಎಂದು ಬಂಜಾರ ಜಾಗೃತ ದಳದ ಸಂಸ್ಥಾಪಕ ಅಧ್ಯಕ್ಷ ತಿಪ್ಪಾ ಸರನಾಯಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಮೀಸಲಾತಿ ಹೋರಾಟದಿಂದಾಗಿ ಹಲವು ನಾಯಕರು ಸೋಲು ಅನುಭವಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬರಲು ನಮ್ಮ ಸಮಾಜ ಕಾರಣವಾಗಿದೆ. ಕಾಂಗ್ರೆಸ್ ನಮ್ಮನ್ನು ನಿರ್ಲಕ್ಷ್ಯ ಮಾಡಿದೆ. ಐದು ಮೀಸಲು ಕ್ಷೇತ್ರದಲ್ಲಿ ಒಂದೇ ಒಂದು ಟಿಕೆಟ್ ನಮ್ಮ ಸಮುದಾಯಕ್ಕೆ ನೀಡಿಲ್ಲ. ಬಂಜಾರ ಸಮಾಜದ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ನೀಡಿಲ್ಲ. ಇದು ನಮ್ಮ ದುರ್ದೈವ, ನಿಗಮ-ಮಂಡಳಿಗೂ ನೇಮಕ ಮಾಡದೆ ಬಂಜಾರ ಸಮುದಾಯಕ್ಕೆ ಕಾಂಗ್ರೆಸ್ ಅನ್ಯಾಯ ಮಾಡುತ್ತಲೇ ಇದ್ದು, ಪ್ರಸಕ್ತ ಚುನಾವಣೆಯಲ್ಲಿ ಪಾಠ ಕಲಿಸಬೇಕು ಎಂದರು.

ಸದಾಶಿವ ಆಯೋಗದ ವರದಿಯ ಬಗ್ಗೆ ನಮಗೆ ತಪ್ಪು ಕಲ್ಪನೆ ಇತ್ತು. ಈಗ ಈ ಕಲ್ಪನೆ ಇಲ್ಲ. ತಾಂಡಾಗಳಲ್ಲಿ ವಲಸೆ ಹೋಗುತ್ತಾರೆ. ಇದಕ್ಕೆ ಶಾಶ್ವತ ಪರಿಹಾರ ನೀಡಬೇಕು. ತಾಂಡಾ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ‌ ಮಾಡಿಲ್ಲ.‌‌ ಅಧ್ಯಕ್ಷರು ನೇಮಕವಾದ ನಂತರ ಈ ಸಮಸ್ಯೆ ಬಗೆಹರಿಸಬೇಕು ಎಂದರು.

ಬಂಜಾರ ಸಮುದಾಯದ ಜಿಲ್ಲಾಧ್ಯಕ್ಷ ಸುರೇಶ ಪಿ. ಮಾತನಾಡಿ, ನಾವೇನು ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ. ಕಳೆದ ಬಾರಿ ನಾವು ಬಿಜೆಪಿ ವಿರೋಧಿಸಿದ್ದೇವು. ಈಗ ನಾವು ಬಿಜೆಪಿ ಬೆಂಬಲಿಸುತ್ತೇವೆ ಎಂದು ಹೇಳಿದರು.

ನಮ್ಮ ಸಮಾಜದ ನ್ಯಾಯಕ್ಕಾಗಿ ಈ ಬಾರಿ ಈ ನಿರ್ಧಾರ ತೆಗೆದುಕೊಂಡಿದ್ದು, ಸಮಾಜದ ಮತ ಬಾಂಧವರು ಬಿಜೆಪಿಯನ್ನು ಬೆಂಬಲಿಸುವಂತೆ ಕೋರಿದರು.

ನಿಂಗರಾಜ್ ಕಟ್ಟಿಮನಿ, ಸುರೇಶ ಬಳೂಟಗಿ, ಗುರು ಗೋಸಾಯಿ ಬಾಬಾ, ಮುತ್ತು ರಾಠೋಡ, ಮಹೇಶ ನಾಯಕ ಇದ್ದರು.