ಬೆಳೆ ಸಮೀಕ್ಷೆಯಲ್ಲಿ ರೈತರಿಗೆ ಅನ್ಯಾಯ- ಅಧಿಕಾರಿಗಳ ವಿರುದ್ಧ ಹರಿಹಾಯ್ದ ಶಾಸಕ ಲಮಾಣಿ

| Published : Sep 07 2025, 01:00 AM IST

ಬೆಳೆ ಸಮೀಕ್ಷೆಯಲ್ಲಿ ರೈತರಿಗೆ ಅನ್ಯಾಯ- ಅಧಿಕಾರಿಗಳ ವಿರುದ್ಧ ಹರಿಹಾಯ್ದ ಶಾಸಕ ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

೨೦೨೫ನೇ ಸಾಲಿನ ಮುಂಗಾರು ಹಂಗಾಮು ಬೆಳೆ ಸಮೀಕ್ಷೆಗೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚನೆ ಮಾಡಿಕೊಂಡು ಬೆಳೆ ಸಮೀಕ್ಷೆ ನಡೆಸಿದ್ದು, ಈ ಬಾರಿ ಅತಿವೃಷ್ಟಿಯಿಂದ ಹಾನಿಯಾದ ರೈತರ ಜಮೀನುಗಳಿಗೆ ಭೇಟಿ ನೀಡದೇ ತಪ್ಪು ಮಾಹಿತಿ ನೀಡಿದ್ದು, ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಶಿರಹಟ್ಟಿ: ೨೦೨೫ನೇ ಸಾಲಿನ ಮುಂಗಾರು ಹಂಗಾಮು ಬೆಳೆ ಸಮೀಕ್ಷೆಗೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚನೆ ಮಾಡಿಕೊಂಡು ಬೆಳೆ ಸಮೀಕ್ಷೆ ನಡೆಸಿದ್ದು, ಈ ಬಾರಿ ಅತಿವೃಷ್ಟಿಯಿಂದ ಹಾನಿಯಾದ ರೈತರ ಜಮೀನುಗಳಿಗೆ ಭೇಟಿ ನೀಡದೇ ತಪ್ಪು ಮಾಹಿತಿ ನೀಡಿದ್ದು, ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಶನಿವಾರ ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಕರೆದಿದ್ದ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಮಾತನಾಡಿದರು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರಶಾಂತ ಕುಲಕಣಿ ತೋಟಗಾರಿಕೆ ಬೆಳೆ ಹಾನಿಯ ತಪ್ಪು ಮಾಹಿತಿ ನೀಡಿದ್ದು, ನೀವು ಸಮೀಕ್ಷೆ ಮಾಡಿದ ನಿಖರ ಮಾಹಿತಿ ನೀಡುವಂತೆ ಕೇಳಿದರೆ ಸಭೆ ಮುಗಿಯುವ ವರೆಗೂ ಮಾಹಿತಿ ನೀಡದೇ ಇರುವುದರಿಂದ ಅಧಿಕಾರಿಗೆ ಛೀಮಾರಿ ಹಾಕಿದರು.ನಮ್ಮ ಕ್ಷೇತ್ರದಲ್ಲಿ ನಿಮ್ಮಂತ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿರುವುದರಿಂದ ತಾಲೂಕಿನ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಎದುರಾಗಿದೆ ಎಂದು ದೂರಿದರು. ೧೨೦ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ಅಂಕಿ ಅಂಶ ಸೇರಿ ವರದಿ ನೀಡಿದ್ದು, ಯಾವ ಭಾಗದ ರೈತರ ಜಮೀನಿನಲ್ಲಿ ಹಾಳಾಗಿದೆ ಎಂದು ನಿಮ್ಮಲ್ಲಿ ಉತ್ತರವಿಲ್ಲ. ಹೀಗಾದರೆ ನೀವು ಯಾವ ರೈತರ ಜಮೀನಿಗೆ ತೆರಳಿ ಸಮೀಕ್ಷೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು.ವಿಮಾ ಕಂಪನಿ ಜೊತೆ ಶಾಮಿಲು ಅಧಿಕಾರಿಗಳ ನಿಜ ಬಣ್ಣ ಬಯಲು- ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರುಗಳು ಕಾರ್ಯಾಲಯದಲ್ಲಿಯೇ ಕುಳಿತುಕೊಂಡು ರೈತರ ಜಮೀನುಗಳಿಗೆ ತೆರಳಿ ಸಮೀಕ್ಷೆ ಮಾಡದೇ ವಿಮಾ ಕಂಪನಿಯವರೊಂದಿಗೆ ಶಾಮಿಲಾಗಿ ನಿಜವಾದ ಬೆಳೆಹಾನಿಯಾದ ರೈತರಿಗೆ ಬೆಳೆ ವಿಮೆ ಹಣ ದೊರಕದಂತೆ ಬೆಳೆ ಸಮೀಕ್ಷೆ ವರದಿ ನೀಡಿದ್ದೀರಿ. ನಮ್ಮ ತಾಲೂಕು ಒಣಬೇಸಾಯ ಪ್ರದೇಶವಾಗಿದ್ದು, ಶೇ. ೮೦ರಷ್ಟು ನೀರಾವರಿ ಬೆಳೆ ಎಂದು ತೋರಿಸಿ ರೈತರಿಗೆ ಅನ್ಯಾಯ ಮಾಡಿದ್ದೀರಿ ಎಂದು ದೂರಿದರು.ವಿಮಾ ಕಂಪನಿ ಮತ್ತು ಅಧಿಕಾರಿಗಳು ಕಳೆದ ನಾಲ್ಕೈದು ವರ್ಷಗಳಿಂದ ಇದೇ ವ್ಯವಸ್ಥೆ ಮುಂದುವರೆಸಿಕೊಂಡು ಹೋಗುತ್ತಿದ್ದು, ನಿಮ್ಮಂತ ಅಧಿಕಾರಿಗಳಿಂದ ನಿಜವಾದ ರೈತರು ನೇಣಿಗೆ ಕೊರಳೊಡ್ಡುತಿದ್ದಾರೆ. ತಾಲೂಕಿನ ರೈತರ ಪರವಾಗಿ ಅಧಿವೇಶನದಲ್ಲಿಯೂ ಪ್ರಸ್ತಾಪಿಸಿ ರೈತರಿಗೆ ನ್ಯಾಯ ಕೊಡಿಸಬೇಕೆಂದು ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ತಾಲೂಕಿನ ಅಧಿಕಾರಿಗಳು ಈ ರೀತಿ ಆಟವಾಡುತ್ತಿದ್ದು, ನಿಮಗೆ ರೈತರ ಶಾಪ ಹತ್ತದೇ ಹೋಗುವುದಿಲ್ಲ ಎಂದು ಎಚ್ಚರಿಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ರೈತರಾದ ಶಂಕರ ಮರಾಠೆ, ರಾಜೀವರಡ್ಡಿ ಬಮ್ಮನಕಟ್ಟಿ ಮಾತನಾಡಿ, ಕೃಷಿ ಇಲಾಖೆ ಅಧಿಕಾರಿ ರೇವಣೆಪ್ಪ ಮನಗೂಳಿ, ತೋಟಗಾರಿಕೆ ಇಲಾಖೆ ಅಧಿಕಾರಿ ಪ್ರಶಾಂತ ಕುಲಕರ್ಣಿ ರೈತರ ಜೀವದ ಜತೆ ಚಲ್ಲಾಟವಾಡುತ್ತಿದ್ದಾರೆ. ಹೊಲದಲ್ಲಿ ಬಿತ್ತಿದ ಬೆಳೆಯೇ ಬೇರೆ ಇದೆ. ಅಧಿಕಾರಿಗಳು ವರದಿ ನೀಡಿರುವುದೇ ಬೇರೆ ಇದೆ. ಈ ರೀತಿ ಮೋಸದಾಟ ನಡೆದರೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಕೂಡಲೇ ನಮ್ಮ ತಾಲೂಕಿನಿಂದ ಇಂಥ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ. ಇಲ್ಲವೇ ಸೂಕ್ತ ಕ್ರಮಕ್ಕೆ ಮುಂದಾಗಿ ಎಂದು ಶಾಸಕರಿಗೆ ಒತ್ತಾಯಿಸಿದರು. ಈ ಇಬ್ಬರು ಇಲಾಖೆ ಅಧಿಕಾರಿಗಳು ಮಾಡುವ ಯಡವಟ್ಟಿನಿಂದ ಬೆಳೆ ಸಮೀಕ್ಷೆಯಲ್ಲಿ ತಪ್ಪಾಗಿದೆ. ರೈತರ ಹೊಲದಲ್ಲಿ ಗೋವಿನ ಜೋಳ ಬೆಳೆದಿದ್ದರೆ ಅಧಿಕಾರಿಗಳು ಬೇರೊಂದು ಬೆಳೆ ನಮೂದು ಮಾಡಿ ವಿಮಾ ಕಂಪನಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ದಾಖಲೆ ಸಮೇತ ನಿಮ್ಮೆದುರು ಇಡುತ್ತೇವೆ. ಆಗಲಾದರೂ ರೈತರಿಗೆ ನ್ಯಾಯ ದೊರಕಿಸಿ ಕೊಡಿ ಎಂದು ಅಂಗಲಾಚಿದರು.ಯಾರದೋ ಹೊಲದಲ್ಲಿ ನಿಂತು ಸಮೀಕ್ಷೆ ಮಾಡುತ್ತಾರೆ. ಇದಕ್ಕೆ ರೈತರು ಹೊಣೆಯಲ್ಲ. ಇಷ್ಟೆಲ್ಲಾ ಅವ್ಯವಹಾರ ಮಾಡಿ ತಮ್ಮ ತಪ್ಪು ಮುಚ್ಚಿಕೊಳ್ಳಲು ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನದ ಒಂದೇ ದಿನ ಮುಂಚಿತವಾಗಿ ತಿಳಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ವಿಚಿತ್ರವೆಂದರೆ ಕೆಲವರ ಪಹಣಿಯಲ್ಲಿ ಬೆಳೆ ಇಲ್ಲ ಎಂದು ನಮೂದಾಗಿವೆ. ಈ ಎಲ್ಲ ದೋಷ ಸರಿಪಡಿಸಿ ರೈತರಿಗೆ ನ್ಯಾಯ ದೊರಕಿಸಿ ಕೊಡದಿದ್ದರೆ ಹೋರಾಟಕ್ಕೆ ಮುಂದಾಗುವ ಎಚ್ಚರಿಕೆ ನೀಡಿದರು. ತಹಸೀಲ್ದಾರ್ ಕೆ. ರಾಘವೇಂದ್ರರಾವ್, ಆಹಾರ ಇಲಾಖೆ ಅಧಿಕಾರಿ, ಮುಖಂಡ ವಿಶ್ವನಾಥ ಕಪ್ಪತ್ತನವರ, ನಾಗರಾಜ ಲಕ್ಕುಂಡಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಇದ್ದರು.