ಸಾರಾಂಶ
ಗಂಗಾವತಿ:
ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ಕತ್ತರಿಸಿರುವುದು ಹಾಗೂ ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿ ಖಂಡಿಸಿ ಇಲ್ಲಿಯ ಬ್ರಾಹ್ಮಣ ಸಮುದಾಯದಿಂದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಬಳಿಕ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಬ್ರಾಹ್ಮಣ ಸಮಾಜದ ಅಧ್ಯಕ್ಷ ಮೇಗೂರು ರಾಘವೇಂದ್ರ, ಭಾರತದಲ್ಲಿ ಜನಿವಾರದಾರಿಗಳಿಗೆ ಪದೇ ಪದೇ ಅಪಮಾನ ಮಾಡಲಾಗುತ್ತಿದೆ. ಆದರೂ ಸಮಾಜ ಎಲ್ಲವನ್ನು ಸಹಿಸಿಕೊಂಡು ಬಂದಿದೆ. ಆಯಾ ಸಮುದಾಯಗಳು ಧರ್ಮಾಚರಣೆ ಆಚರಿಸಿಕೊಂಡು ಬಂದಿದೆ. ಆದರೆ, ರಾಜ್ಯ ಸರ್ಕಾರ ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿರುವುದು ಹಾಗೂ ಕತ್ತರಿಸಿದೆ. ಇದು ವಿದ್ಯಾರ್ಥಿಗೆ ಮಾಡಿದ ಅವಮಾನವಿಲ್ಲ. ಜನಿವಾರ ಧರಿಸುವ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಕ್ಕ ಪಾಠ ಕಲಿಸಿ:ಪ್ರವಾಸಕ್ಕೆಂದು ಜಮ್ಮು-ಕಾಶ್ಮೀರಕ್ಕೆ ತೆರಳಿದ್ದ ಪ್ರವಾಸಿಗರ ಮೇಲೆ ಮನಸ್ಸೋಇಚ್ಛೆ ಗುಂಡು ಹಾರಿಸುವ ಮೂಲಕ 26 ಜನರನ್ನು ಹತ್ಯೆ ಮಾಡಿರುವುದು ಖಂಡನೀಯ. ಧರ್ಮಾಧಾರಿತವಾಗಿ ಹತ್ಯೆ ಮಾಡಿರುವುದು ಇಡೀ ಹಿಂದೂ ಸಮುದಾಯಕ್ಕೆ ಆದ ಘೋರ ಅನ್ಯಾಯವಾಗಿದೆ. ಕೇಂದ್ರ ಸರ್ಕಾರ ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕುವ ಮೂಲಕ ಉಗ್ರರನ್ನು ಮಟ್ಟ ಹಾಕಬೇಕೆಂದು ಒತ್ತಾಯಿಸಿದರು.ಮಾಜಿ ಸಂಸದ ಶಿವರಾಮಗೌಡ ಮಾತನಾಡಿ, ಪರೀಕ್ಷೆ ಸಂದರ್ಭದಲ್ಲಿ ಕೇವಲ ಜನಿವಾರವಲ್ಲ, ಶಿವಧಾರ, ಉಡದಾರ ತೆಗೆಸುವುದು ಸೇರಿದಂತೆ ಇತರ ಧಾರ್ಮಿಕ ಆಚರಣೆಯ ಸಂಕೇತಗಳಿಗೆ ಧಕ್ಕೆ ತರುವಂತಹ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿರುವುದು ಅತ್ಯಂತ ಖಂಡನೀಯ ಎಂದರು.
ವಿಪ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಮಾತನಾಡಿ ಬ್ರಾಹ್ಮಣ ಸಮುದಾಯ ಧರ್ಮಗಳ ಆಚರಣೆ ಜತೆಗೆ ಆಚಾರ-ವಿಚಾರಗಳನ್ನು ಶ್ರದ್ಧೆಯಿಂದ ಮಾಡುತ್ತಿದೆ. ಇಂತಹ ಸಮುದಾಯದ ವಿದ್ಯಾರ್ಥಿಯ ಜನಿವಾರ ಕತ್ತರಿಸುವ ಮೂಲಕ ಸಮಾಜಕ್ಕೆ ಅಪಮಾನ ಮಾಡಿರುವುದು ಸರಿಯಲ್ಲ ಎಂದ ಅವರು, ಕಾಶ್ಮೀರದಲ್ಲಿ ನಡೆದ ದಾಳಿಯನ್ನು ಪ್ರತಿಯೊಬ್ಬರು ಖಂಡಿಸಲೇಬೇಕು ಎಂದರು.ಹಾಸ್ಯ ಸಾಹಿತಿ ಬಿ. ಪ್ರಾಣೇಶ, ರಾಜವಂಶಸ್ಥೆ ಲಲಿತರಾಣಿ ಶ್ರೀರಂಗದೇವರಾಯಲು, ನಾರಾಯಣರಾವ ವೈದ್ಯ ಮಾತನಾಡಿದರು. ಪ್ರತಿಭಟನೆಯಲ್ಲಿ ನ್ಯಾಯವಾದಿ ಪ್ರಹ್ಲಾದರಾವ್ ನವಲಿ, ನಗರಸಭೆ ಸದಸ್ಯ ವಾಸುದೇವ ನವಲಿ, ವಿಷ್ಣುತೀರ್ಥ ಜೋಶಿ, ರಾಘವೇಂದ್ರ ಲಾಯದುಣಿಸಿ, ರಾಘವೇಂದ್ರ ಶೆಟ್ಟಿ, ಗುರುರಾಜ ಬೆಳ್ಳುಬ್ಬಿ, ವೆಂಕಟೇಶ ಕುಲಕರ್ಣಿ ಕನಕಗಿರಿ, ಗುರುರಾಜ ಕುಲಕರ್ಣಿ, ಜೋಗದ ನಾರಾಯಣಪ್ಪನಾಯಕ, ಕೆ.ಜಿ. ಕುಲಕರ್ಣಿ, ಮುರುಳೀಧರ, ನರಸಿಂಗರಾವ ಕುಲಕರ್ಣಿ, ಶ್ರವಣಕುಮಾರ ರಾಯ್ಕರ, ಮಹಾಲಿಂಗಪ್ಪ ಬನ್ನಿಕೊಪ್ಪ, ಫಂಡರಿ ಜಾಹಗೀರದಾರ, ವೆಂಕನಗೌಡ ಮೋದಿ, ವಟಗಲ್ ರಂಗನಾಥ ಸೇರಿದಂತೆ ಹಲವರು ಭಾಗವಹಿಸಿದ್ದರು.