ಸಾರಾಂಶ
ಮುದ್ದೇಬಿಹಾಳ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಒಂದೆರಡು ಸಮುದಾಯಗಳ ಓಲೈಸಿಕೊಳ್ಳಲು ಒಳ ಮೀಸಲಾತಿ ಜಾರಿಗೊಳಿಸುವ ಮೂಲಕ ರಾಜ್ಯದ ಎಲ್ಲ ತಾಂಡಾಗಳ ಲಂಬಾಣಿ ಜನಾಂಗಕ್ಕೆ ಬಿಜೆಪಿ ಸರ್ಕಾರದ ಅನ್ಯಾಯ ಮಾಡಿದೆ. ಸಂವಿಧಾನ ವಿರೋಧಿ ನೀತಿ ಅನುಸರಿಸಿದ್ದಲ್ಲದೇ ಜಾತಿ, ಜಾತಿಗಳ ಮಧ್ಯೆ ವೈಷಮ್ಯ ಸೃಷ್ಟಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ನಡೆಸಿದೆ ಎಂದು ಬಂಜಾರ ಸಮಾಜದ ರಾಜ್ಯಾಧ್ಯಕ್ಷ ಅರ್ಜುನ ರಾಠೋಡ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಒಂದೆರಡು ಸಮುದಾಯಗಳ ಓಲೈಸಿಕೊಳ್ಳಲು ಒಳ ಮೀಸಲಾತಿ ಜಾರಿಗೊಳಿಸುವ ಮೂಲಕ ರಾಜ್ಯದ ಎಲ್ಲ ತಾಂಡಾಗಳ ಲಂಬಾಣಿ ಜನಾಂಗಕ್ಕೆ ಬಿಜೆಪಿ ಸರ್ಕಾರದ ಅನ್ಯಾಯ ಮಾಡಿದೆ. ಸಂವಿಧಾನ ವಿರೋಧಿ ನೀತಿ ಅನುಸರಿಸಿದ್ದಲ್ಲದೇ ಜಾತಿ, ಜಾತಿಗಳ ಮಧ್ಯೆ ವೈಷಮ್ಯ ಸೃಷ್ಟಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ನಡೆಸಿದೆ ಎಂದು ಬಂಜಾರ ಸಮಾಜದ ರಾಜ್ಯಾಧ್ಯಕ್ಷ ಅರ್ಜುನ ರಾಠೋಡ ಆರೋಪಿಸಿದರು.ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ವಿಜಯಪುರ ಜಿಲ್ಲೆಯಿಂದ ೧೦ ವರ್ಷಗಳ ಕಾಲ ಬಿಜೆಪಿಯ ರಮೇಶ ಜಿಗಜಿಣಗಿ ಅವರು ಸಂಸದರಾಗಿದ್ದರೂ ಅವರಿಂದ ಯಾವುದೇ ಅಭಿವೃದ್ಧಿ ಪೂರಕ ಯೋಜನೆಗಳನ್ನು ಕೇಂದ್ರದಿಂದ ತರಲು ಸಾಧ್ಯವಾಗಿಲ್ಲ. ಜಿಲ್ಲೆಗೆ ಅವರ ಕೊಡುಗೆ ಏನು ಇಲ್ಲ. ಸಂಸದ ರಮೇಶ ಜಿಗಜಿಣಗಿ ಅವರ ಸಾಧನೆ ಶೂನ್ಯವಾಗಿದೆ ಎಂದರು.ತಾಂಡಾವನ್ನು ದತ್ತು ಪಡೆದು ಕಂದಾಯ ಗ್ರಾಮವನ್ನಾಗಿ ಮಾಡಿ ಅಭಿವೃದ್ಧಿ ಪಡಿಸಲು ಸಂಸದ ರಮೇಶ ಜಿಗಜಿಣಗಿ ಅವರಿಂದ ಸಾಧ್ಯವಾಗಿಲ್ಲ. ಆದರೆ, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ನೀಡಿದ ಐದು ಭರವಸೆಯ ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಅನುಷ್ಠಾನಗೊಳಿಸುವ ಮೂಲಕ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದರು.
ಈ ಹಿಂದೆ ಮುಖ್ಯಮಂತ್ರಿ ಸಿದ್ದಮಯ್ಯನವರ ನೇತೃತ್ವದ ಕಾಂಗ್ರೇಸ್ ಸರಕಾರದಲ್ಲಿ ಎಂ.ಬಿ.ಪಾಟೀಲ ಅವರು ವಿಜಯಪುರ ಜಿಲ್ಲೆಯ ಉಸ್ತುವಾರಿಗಳಾಗಿ ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ೧೫ ಸಾವಿರ ಎಕರೆ ಭೂಮಿಗಳು ಸಂಪೂರ್ಣ ನೀರಾವರಿ ಗೊಳಿಸುವುದರೊಂದಿಗೆ ರೈತರ ಬಾಳಿಗೆ ಬೆಳಕಾಗಿದ್ದಾರೆ. ಜತೆಗೆ ವಿಮಾನ ನಿಲ್ದಾಣ, ಪ್ರಸಿದ್ಧ ಲೂಲೂ ಕಂಪನಿಯ ಬಂಡವಾಳ ಹೂಡಿಕೆಯಿಂದ ಈ ಭಾಗದಲ್ಲಿ ಸಾವಿರಾರು ಜನ ನಿರುದ್ಯೋಗ ಯುವಕರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಕೈಗಾರಿಕೋದ್ಯಮ ತರಲು ಮುಂದಾಗಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಬಂಜಾರ ಸಮಾಜ ಬಾಂಧವರು ಒಗ್ಗಟ್ಟು ಪ್ರದರ್ಶಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದರು.ಈ ವೇಳೆ ಸಂತೋಷ ಚವ್ಹಾಣ, ಲಕ್ಷ್ಮಣ ಲಮಾಣಿ, ಚಿದಾನಂದ ಚಿಂತಾಮಣಿ, ರಾಜು ನಾಯಕ, ಯಮನೂರಿ ಲಮಾಣಿ, ಚಂದ್ರಕಾಂತ ಮೇಲ್ಮನಿ, ಸೇವಾಲಾಲ, ಅಪ್ಪಣ್ಣ ನಾಯಕ, ಶ್ರೀಕಾಂತ ರಾಠೋಡ, ಸತೀಶ ಚವ್ಹಾಣ, ಬಸವರಾಜ ಲಮಾಣಿ, ರವಿ ನಾಯಕ, ಚನ್ನಪ್ಪ ವಿಜಯಕರ ಸೇರಿದಂತೆ ಹಲವರು ಇದ್ದರು.