ಬರ ಸಮೀಕ್ಷೆ ಹಾಗೂ ಬರ ಘೋಷಣೆ ವಿಚಾರದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಅನ್ಯಾಯವಾಗಿದೆ. ಈ ಕುರಿತು ಮುಖ್ಯಮಂತ್ರಿ ಅವರಿಗೆ ಖಾರವಾಗಿ ಪ್ರತಿಕ್ರಿಯಿಸಿ ಪತ್ರ ಬರೆದಿದ್ದೇನೆ.

ದಕ್ಷಿಣ ಕರ್ನಾಟಕದ ಹಲವು ತಾಲೂಕುಗಳು ಬರ ಪಟ್ಟಿಗೆ, ನಮ್ಮ ಭಾಗದ ತಾಲೂಕುಗಳೇ ಇಲ್ಲ: ಸ್ಪೀಕರ್ ಬೇಸರಕನ್ನಡಪ್ರಭ ವಾರ್ತೆ ಗದಗ

ಬರ ಸಮೀಕ್ಷೆ ಹಾಗೂ ಬರ ಘೋಷಣೆ ವಿಚಾರದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಅನ್ಯಾಯವಾಗಿದೆ. ಈ ಕುರಿತು ಮುಖ್ಯಮಂತ್ರಿ ಅವರಿಗೆ ಖಾರವಾಗಿ ಪ್ರತಿಕ್ರಿಯಿಸಿ ಪತ್ರ ಬರೆದಿದ್ದೇನೆ ಎಂದು ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.

ಬುಧವಾರ ಗದಗ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ನಾಗರಿಕ ಸಮಿತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಬರ ಪರಿಸ್ಥಿತಿ ಕುರಿತು ಆಡಳಿತ ಪಕ್ಷದವರೂ ಸಮೀಕ್ಷೆ ನಡೆಸಿದ್ದಾರೆ. ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳ ಹಲವು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಆದರೆ ಬರ ಘೋಷಣೆ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದ ಹಲವು ತಾಲೂಕುಗಳೇ ಕಾಣಿಸಿಲ್ಲ. ಇದು ಯಾವ ರೀತಿಯ ತಾರತಮ್ಯ ? ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎಂಬ ಭೇದ ಮಾಡುತ್ತಿದ್ದೀರಾ ಎಂದು ಮುಖ್ಯಮಂತ್ರಿ ಅವರಿಗೆ ಖಾರವಾಗಿ ಪ್ರಶ್ನಿಸಿದ್ದೇನೆ ಎಂದರು.

ಅನ್ಯಾಯವಾದಾಗ ವಿರೋಧಿಸುವೆ:

ನಮ್ಮ ಭಾಗಕ್ಕೆ ಅನ್ಯಾಯವಾದಾಗಲೆಲ್ಲ ನಾನು ವಿರೋಧಿಸುತ್ತೇನೆ. ನಾನು ವಿಧಾನಸಭಾಧ್ಯಕ್ಷನಾಗಿದ್ದೇನೆ ಎಂಬ ಕಾರಣಕ್ಕೆ ಎಲ್ಲದಕ್ಕೂ ಮೌನವಾಗಿರಬೇಕೆಂದೇನಿಲ್ಲ. ಕೆಟ್ಟದ್ದು ಕಂಡಾಗ ಮೊದಲು ವಿರೋಧಿಸುವ ಕೆಲಸ ಮಾಡುತ್ತೇನೆ. ಆದರೆ ಸಭಾಧ್ಯಕ್ಷರಾಗಿ ಪಕ್ಷಾತೀತವಾಗಿ ಕೆಲಸ ಮಾಡಬೇಕಾದ ಜವಾಬ್ದಾರಿಯೂ ನನ್ನ ಮೇಲಿದೆ ಎಂದು ಸ್ಪಷ್ಟಪಡಿಸಿದರು.

ವಿರೋಧ ಪಕ್ಷದವರು ಮಾಡುವ ಕೆಲವು ಹೋರಾಟಗಳು ಕೂಡಾ ಸರಿಯಾಗಿರುತ್ತವೆ. ಇತ್ತೀಚೆಗೆ ವಿರೋಧ ಪಕ್ಷದವರು ಹೋರಾಟ ನಡೆಸಿದಾಗ, ಸಾಕಷ್ಟು ಬಾರಿ ಮನವಿ ಮಾಡಿದರೂ ಅವರು ಹೋರಾಟ ಮುಂದುವರಿಸಿದರು. ಕೊನೆಯಲ್ಲಿ ಏನಾಯಿತು ಎಂಬುದನ್ನು ನೀವೇ ನೋಡಿದ್ದೀರಿ. ಆಡಳಿತ ಪಕ್ಷವೇ ತಲೆಬಾಗುವಂತಾಯಿತು ಎಂದು ಅವರು ಹೇಳಿದರು. ಕಾವೇರಿ ವಿಚಾರ, ಕೆಪಿಎಸ್ಸಿ ಸೇರಿದಂತೆ ರಾಜ್ಯದ ಪ್ರಮುಖ ವಿಷಯಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆಯುವ ಸಂದರ್ಭದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳು ಪರಸ್ಪರ ಸಹಕಾರ ನೀಡಬೇಕು. ಜನರ ಸಮಸ್ಯೆಗಳನ್ನು ಬದಿಗೊತ್ತಿ ರಾಜಕೀಯ ಮಾಡುವುದಕ್ಕಿಂತ ರಾಜ್ಯದ ಹಿತದೃಷ್ಟಿಯಿಂದ ಚರ್ಚೆ ನಡೆಸುವುದು ಮುಖ್ಯ ಎಂದರು.

ಸಚಿವ ಸ್ಥಾನದ ಆಕಾಂಕ್ಷೆ ಇತ್ತು

ಈ ಹಿಂದೆ ನಾನೂ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೆ. ಆದರೆ ಪಕ್ಷ ನನಗೆ ವಿಧಾನಸಭಾಧ್ಯಕ್ಷ ಸ್ಥಾನ ನೀಡಿದೆ. ಸಚಿವ ಸ್ಥಾನದ ಬೇಡಿಕೆ ಹಾಗೂ ಹೋರಾಟದ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರು ಸೇರಿದಂತೆ ಹಲವರಿಂದ ಗೊಂದಲಕಾರಿ ಹೇಳಿಕೆಗಳು ಬಂದಿವೆ. ಯಾರೂ ಆ ವಿಚಾರಗಳನ್ನು ತಲೆಯಲ್ಲಿ ಇಟ್ಟುಕೊಳ್ಳದೆ ನಾವೆಲ್ಲರೂ ಒಗ್ಗಟ್ಟಿನಿಂದ ಮುಂದುವರಿಯಬೇಕು ಎಂದು ಹೇಳಿದರು. ಈ ಮೂಲಕ ಸಚಿವ ಸ್ಥಾನಕ್ಕಾಗಿ ಪಕ್ಷದೊಳಗೆ ನಡೆದಿದ್ದ ಪೈಪೋಟಿ ಹಾಗೂ ಆ ಸಂದರ್ಭದಲ್ಲಿ ಉಂಟಾಗಿದ್ದ ಗೊಂದಲದ ಕುರಿತು ಜಿ.ಎಸ್. ಪಾಟೀಲ ಪರೋಕ್ಷವಾಗಿ ಪ್ರಸ್ತಾಪಿಸಿದರು.