ಸಾರಾಂಶ
ಮುಂಡಗೋಡ: ಮುಂಡಗೋಡ ಸರ್ಕಾರಿ ಆಸ್ಪತ್ರೆ ಬಗ್ಗೆ ಜನರಲ್ಲಿ ತೀವ್ರ ಅಸಮಾಧಾನವಿದ್ದು, ವೈದ್ಯರು ಉತ್ತಮ ನಡತೆಯೊಂದಿಗೆ ಬಡಜನರ ವಿಶ್ವಾಸ ಗಳಿಸಿ ಕೆಲಸ ಮಾಡುವರು ಮಾಡಲಿ. ಆಗದಿದ್ದರೆ ಬೇಕಾದ ಜಾಗಕ್ಕೆ ಹೋಗಲಿ. ಇಲ್ಲಿದ್ದುಕೊಂಡು ಬಡವರಿಗೆ ತೊಂದರೆ ಕೊಡುವುದು ಬೇಡ ಎಂದು ಶಾಸಕ ಶಿವರಾಮ ಹೆಬ್ಬಾರ ಆಕ್ರೋಶ ಹೊರಹಾಕಿದರು.
ಮಂಗಳವಾರ ಇಲ್ಲಿಯ ನಗರಸಭಾ ಭವನದಲ್ಲಿ ತ್ರೈಮಾಸಿಕ ಪ್ರಗತಿ ಪರಿಶಿಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಡವರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ತಾಲೂಕಿನ ಜನರು ಯಾವುದೇ ಅನಾರೋಗ್ಯ ಸಮಸ್ಯೆ ಹೇಳಿಕೊಂಡು ಬಂದರೂ ಹುಬ್ಬಳ್ಳಿಗೆ ಹೋಗಿ ಎಂದು ಕಳುಹಿಸುವುದಾದರೆ ಇಲ್ಲಿ ಆಸ್ಪತ್ರೆ ಇದ್ದು ಏನು ಪ್ರಯೋಜನ ಎಂದು ಶಾಸಕ ಶಿವರಾಮ ಹೆಬ್ಬಾರ ಅವರು ತಾಲೂಕು ವೈದ್ಯಾಧಿಕಾರಿ ನರೇಂದ್ರ ಪವಾರ ಅವರನ್ನು ತರಾಟೆಗೆ ತೆಗೆದುಕೊಂಡರು.ವೈದ್ಯರನ್ನು ನಿಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗೆ ಬರುವವರೆಲ್ಲ ಬಡವರೇ ಹೊರತು ಶ್ರೀಮಂತರಲ್ಲ. ಬಡವರಿಗೆ ಅನ್ಯಾಯವಾದರೆ ಸಹಿಸುವುದಿಲ್ಲ. ತಕ್ಷಣ ವೈದ್ಯರ ತುರ್ತು ಸಭೆ ಕರೆದು ಒಳ್ಳೆಯ ನಡವಳಿಕೆಯಿಂದ ಕೆಲಸ ಮಾಡಲು ಸೂಚಿಸಿ. ಆಸ್ಪತ್ರೆ ಎಂದರೆ ದೇವಸ್ಥಾನ ಎಂಬ ಭಾವನೆ ಬರಬೇಕು. ಏನಾದರೂ ಸಮಸ್ಯೆ ಇದ್ದರೆ ತಮ್ಮ ಗಮನಕ್ಕೆ ತಂದರೆ ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಅದು ಬಿಟ್ಟು ಜನರಿಗೆ ತೊಂದರೆ ಕೊಡಬೇಡಿ ಎಂದು ಶಾಸಕರು ಗುಡುಗಿದರು. ತಾಲೂಕು ವೈದ್ಯಾಧಿಕಾರಿ ನರೇಂದ್ರ ಪವಾರ ಮಾತನಾಡಿ, ಸುತ್ತಮುತ್ತ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಲ್ಲದೇ, ಸೊಳ್ಳೆಗಳು ನೀರಿನಲ್ಲಿ ಮನೆ ಮಾಡದಂತೆ ಎಚ್ಚರವಹಿಸಿದರೆ ಜ್ವರ ಮುಂತಾದ ಸಾಂಕ್ರಾಮಿಕ ಅನಾರೋಗ್ಯ ಕಾಯಿಲೆಗಳಿಗೆ ಕಡಿವಾಣ ಹಾಕಲು ಸಾಧ್ಯ. ಕಾಯಿಸಿ ಆರಿಸಿದ ನೀರನ್ನು ಸೇವಿಸುವುದು ಉತ್ತಮ ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು.
ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್ ಕುಲಕರ್ಣಿ ಮಾತನಾಡಿ, ಭತ್ತ ಹಾಗೂ ಗೋವಿನಜೋಳ ಅಧಿಕ ಬಿತ್ತನೆಯಾಗಿದ್ದು, ಅಗತ್ಯ ಬೀಜ, ಗೊಬ್ಬರ ದಾಸ್ತಾನಿದ್ದು, ಯಾವುದೇ ಕೊರತೆ ಇಲ್ಲ. ಡಿಎಪಿ ಗೊಬ್ಬರ ೧೦೦ ಟನ್ ಮಾತ್ರ ದಾಸ್ತಾನಿದ್ದು, ಇದಕ್ಕೆ ಪರ್ಯಾಯವಾಗಿ ಕಾಂಪ್ಲೆಕ್ಸ್ ಗೊಬ್ಬರ ವಿತರಣೆ ಮಾಡಲಾಗುತ್ತಿದೆ ಎಂದರು.ತಹಸೀಲ್ದಾರ್ ಶಂಕರ ಗೌಡಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಟಿ.ವೈ. ದಾಸನಕೊಪ್ಪ, ಸಿಪಿಐ ರಂಗನಾಥ ನೀಲಮ್ಮನವರ, ಎಸಿಎಫ್ ರವಿ ಹುಲಕೋಟಿ, ಪಪಂ ಮುಖ್ಯಾಧಿಕಾರಿ ಬಿ. ಚಂದ್ರಶೇಖರ, ನರೇಗಾ ಸಹಾಯ ನಿರ್ದೇಶಕ ಸೋಮಲಿಂಗಪ್ಪ ಛಬ್ಬಿ, ರವಿಗೌಡ ಪಾಟೀಲ ಜ್ಞಾನದೇವ ಗುಡಿಯಾಳ, ಚೇತನ ನಾಯ್ಕ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಳು ಸಾರ್ವಜನಿಕರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))