ಕಾಂಗ್ರೆಸ್‌ ಸರ್ಕಾರದಿಂದ ಎಸ್ಸಿ, ಎಸ್ಟಿ ಜನಾಂಗಕ್ಕೆ ಅನ್ಯಾಯ

| Published : Aug 08 2025, 01:01 AM IST

ಕಾಂಗ್ರೆಸ್‌ ಸರ್ಕಾರದಿಂದ ಎಸ್ಸಿ, ಎಸ್ಟಿ ಜನಾಂಗಕ್ಕೆ ಅನ್ಯಾಯ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್‌ಸಿಪಿ, ಟಿಎಸ್‌ಪಿ ಉಪಯೋಜನೆಯಡಿ ಎಸ್‌ಸಿ, ಎಸ್‌ಟಿಗಳಿಗೆ ಮೀಸಲಿಟ್ಟ ₹೪೫,೦೦೦ ಕೋಟಿಯನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದೆ. ಈ ಮೂಲಕ ತಳ ಸಮುದಾಯಗಳಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಬಿಜೆಪಿ ಎಸ್ಟಿ ಮತ್ತು ಎಸ್ಸಿ ಮೋರ್ಚಾ ವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯಪವಾಲರಿಗೆ ಮನವಿ ಸಲ್ಲಿಸಿತು.

ಕನ್ನಡಪ್ರಭ ವಾರ್ತೆ,ಚಾಮರಾಜನಗರಎಸ್‌ಸಿಪಿ, ಟಿಎಸ್‌ಪಿ ಉಪಯೋಜನೆಯಡಿ ಎಸ್‌ಸಿ, ಎಸ್‌ಟಿಗಳಿಗೆ ಮೀಸಲಿಟ್ಟ ₹೪೫,೦೦೦ ಕೋಟಿಯನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದೆ. ಈ ಮೂಲಕ ತಳ ಸಮುದಾಯಗಳಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಬಿಜೆಪಿ ಎಸ್ಟಿ ಮತ್ತು ಎಸ್ಸಿ ಮೋರ್ಚಾ ವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯಪವಾಲರಿಗೆ ಮನವಿ ಸಲ್ಲಿಸಿತು.ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಭುವನೇಶ್ವರಿ ವೃತ್ತ ತಲುಪಿ ಅಲ್ಲಿಂದ ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಎಸ್ಸಿ ಎಸ್ಟಿ ಅನುದಾನದಿಂದ ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರ ೨೦೨೩-೨೪ ರಲ್ಲಿ ₹೧೧,೧೪೪ ಕೋಟಿ ಮತ್ತು ೨೦೨೪-೨೫ರಲ್ಲಿ ₹೧೪,೨೮೨ ಕೋಟಿ ಹಾಗೂ ೨೦೨೫-೨೬ ರಲ್ಲಿ ₹೧೩,೪೩೩ ಕೋಟಿ ಅನುದಾನವನ್ನು ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡಿದ್ದು ಎಸ್ಸಿ, ಎಸ್ಟಿ ಜನಾಂಗದವರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.ಎಸ್ಸಿ, ಎಸ್ಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ತೆಗೆದುಕೊಂಡಿರುವುದರಿಂದ ಎಸ್ಸಿಎಸ್ಟಿ ಜನಾಂಗಕ್ಕೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಬಡಾವಣೆಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣವಾಗುತ್ತಿಲ್ಲ. ಕೊಳವೆ ಬಾವಿ ಹಾಗೂ ಸಾಲ ಸೌಲಭ್ಯಗಳು ಸಿಗುತ್ತಿಲ್ಲ. ಎಸ್ಸಿ ಎಸ್ಟಿ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನ ದುರುಪಯೋಗವಾಗುತ್ತಿದೆ ಎಂದರು.ಇದನ್ನು ಜನಾಂಗದವರು ಅರಿತುಕೊಳ್ಳಬೇಕು, ಗ್ಯಾರಂಟಿ ಯೋಜನೆಗಳಲ್ಲಿ ಬೇರೆ ಜನಾಂಗದವರಿಗೆ ಖಜಾನೆಯಿಂದ ಕೊಟ್ಟರೆ ಎಸ್ಸಿ ಎಸ್ಟಿಗಳಿಗೆ ಎಸ್‌ಸಿಪಿ, ಟಿಎಸ್‌ಪಿ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ, ಖಜಾನೆಯಿಂದಲೇ ಕೊಡಬೇಕು, ಈಗ ಬಳಸಿರುವ ಹಣವನ್ನು ವಾಪಸ್ಸು ಮಾಡಬೇಕು. ಈ ಬಗ್ಗೆ ಕ್ರಮ ಕೈಗೊಳ್ಳಿದಿದ್ದರೆ ವಿಧಾನಸಭಾ ಒಳಗೆ, ಹೊರಗೆ ನಿರಂತರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್ ಮಾತನಾಡಿ, ಎಸ್‌ಸಿಪಿ, ಟಿಎಸ್‌ಪಿ ಹಣವನ್ನು ಎಸ್‌ಸಿ. ಎಸ್‌ಟಿಗಳ ಆರ್ಥಿಕ ಅಭಿವೃದ್ದಿ, ಶೈಕ್ಷಣಿಕ ಅಭಿವೃದ್ದಿ, ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಉಪಯೋಗಿಸಬೇಕೆಂಬ ರಾಷ್ಟ್ರೀಯ ನೀತಿ ಒದೆ ಇದನ್ನು ಗಾಳಿಗೆ ತೂರಿ ಗಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿರುವುದು ಖಂಡನೀಯ ಇದೊಂದು ಅಯೋಗ್ಯ ಸರ್ಕಾರ ಎಂದರು.ರಾಜ್ಯ ಎಸ್ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ವಾಲ್ಮೀಕಿ ಅಭಿವೃದ್ದಿ ಹಣ ದುರುಪಯೋಗವಾಗಿದೆ, ರಾಜ್ಯ ಸರ್ಕಾರ ವಿವಿಧ ಅಭಿವೃದ್ಧಿ ನಿಗಮಗಳ ಹಣ ಕಡಿತಗೊಳಿಸುವ ಮೂಲಕ ದಲಿತರ ಕಲ್ಯಾಣಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎಂಂದರು.

ಬಜೆಟ್ ಮಂಡನೆ ವೇಳೆ ಗ್ಯಾರಂಟಿ ಯೋಜನೆಗೆ ಪ್ರತ್ಯೇಕವಾಗಿ ಹಣ ಮೀಸಲಿಡಿ. ಎಸ್‌ಸಿ/ಎಸ್‌ಟಿಗಳ ಕಲ್ಯಾಣಕ್ಕಾಗಿ ಮಿಸಲಿಟ್ಟ ಹಣವನ್ನು ಕಸಿದುಕೊಳ್ಳುವ ಬದಲು ಸಂಪನ್ಮೂಲಗಳನ್ನು ಕ್ರೋಢೀಕರಿಸಬೇಕು ಎಂದರು.ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನಕುಮಾರ್, ಮುಖಂಡರಾದ ಎಂ. ರಾಮಚಂದ್ರ, ಎಸ್. ಬಾಲರಾಜು, ನೂರೊಂದುಶೆಟ್ಟಿ, ಕುಲಗಾಣ ಶಾಂತಮೂರ್ತಿ ಮಾತನಾಡಿದರು.ವಾಲ್ಮೀಕಿ ಅಭಿವೃದ್ದಿ ನಿಗಮದ ಕಚೇರಿಗೆ ನುಗ್ಗಲು ಪ್ರತಿಭಟನಾಕಾರರು ಯತ್ನಿಸಿದಾಗ ಪೊಲೀಸರು ತಡೆದರು,

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ವೃಷಭೇಂದ್ರಪ್ಪ, ಮಹದೇವಸ್ವಾಮಿ, ಡಾ.ಎ.ಆರ್‌. ಬಾಬು, ನಗರಸಭಾ ಅಧ್ಯಕ್ಷ ಸುರೇಶ್, ಮುಖಂಡರಾದ ಆರ್.ಸುಂದರ್, ಜಯಸುಂದರ್ ನಗರಸಭಾ ಸದಸ್ಯ ಶಿವರಾಜ್, ಬಿಜೆಪಿ ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಮೂರ್ತಿ, ಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಮಹಿಳಾ ಮೋರ್ಚಾದ ಕಮಲಮ್ಮ ಎಸ್ಟಿ ಹಾಗೂ ಎಸ್ಟಿ ಮೋರ್ಚಾದ ಪದಾಧಿಕಾರಿಗಳು, ಇತರರು ಭಾಗವಹಿಸಿದ್ದರು.