ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಪರಿಶಿಷ್ಟರಿಗೆ ಮೀಸಲಿಟ್ಟ ಎಸ್‌ಸಿಪಿ-ಟಿಎಸ್‌ಪಿ ಹಣವನ್ನು ತನ್ನ ಗ್ಯಾರಂಟಿ ಯೋಜನೆಗಳಿಗೆ ಬಳಸಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಅಣಕು ಶವಯಾತ್ರೆ ಮಾಡಿ, ಕಾಂಗ್ರೆಸ್ ಸರ್ಕಾರದ ಭೂತದಹನ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು.ನಗರದ ಕೆಬಿ ಬಡಾವಣೆಯ ಬಿಜೆಪಿ ಜಿಲ್ಲಾ ಕಾರ್ಯಾಲಯದಿಂದ ಪಕ್ಷದ ಹಿರಿಯ ನಾಯಕರು, ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಹೊರಟು ಹಳೆ ಪಿಬಿ ರಸ್ತೆ ಮಾರ್ಗವಾಗಿ ಪಾಲಿಕೆ ಎದುರಿನ ಎಸಿ ಕಚೇರಿ ಬಳಿ ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಲಾಯಿತು.
ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಹಿಂದಿನ ಬಿಜೆಪಿ ಸರ್ಕಾರ ಪರಿಶಿಷ್ಟರ ಏಳಿಗೆಗಾಗಿ ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟ ಜಾತಿ-ಪಂಗಡಗಳ ಜನರಿಗಾಗಿ ಮೀಸಲಿಟ್ಟ 11,144 ಕೋಟಿ ರು. ಅನುದಾನವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ತನ್ನ ಬಿಟ್ಟಿ ಭಾಗ್ಯಗಳಿಗೆ ವಿನಿಯೋಗಿಸಿ ಪರಿಶಿಷ್ಟ ಜನರಿಗೆ ತೀವ್ರ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.ಕಳೆದ 9 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟರ ವಿಚಾರದಲ್ಲಿ ಕೇವಲ ಬಾಯಿ ಮಾತಿನಲ್ಲಿ ಕಾಳಜಿ ತೋರುತ್ತಾ, ಪರಿಶಿಷ್ಟ ಜಾತಿ-ಪಂಗಡಗಳನ್ನೇ ವಂಚಿಸುತ್ತಿದೆ. ಚುನಾವಣೆಯಲ್ಲಿ ತಾವು ಗೆಲ್ಲಲು ಗ್ಯಾರಂಟಿ ಯೋಜನೆ ಘೋಷಿಸಿದ ಕಾಂಗ್ರೆಸ್ ಈಗ ಅದಕ್ಕಾಗಿ ಪರಿಶಿಷ್ಟರಿಗೆ ಮೀಸಲಿಟ್ಟ ಅನುದಾನ ವರ್ಗಾಯಿಸಿ, ತಮ್ಮ ಸ್ವಾರ್ಥ ಸಾಧನೆಗೆ ಪರಿಶಿಷ್ಟರ ಕಲ್ಯಾಣದ ಹಣಕ್ಕೆ ಕನ್ನ ಹಾಕಿದೆ. ಕಾಂಗ್ರೆಸ್ಸಿನ ಢೋಂಗಿ ದಲಿತ ಕಾಳಜಿಗೆ ಇದು ಸಾಕ್ಷಿ ಎಂದು ಟೀಕಿಸಿದರು.
ಪರಿಶಿಷ್ಟರ ಧ್ವನಿಯಾಗಿ, ರಕ್ಷಣೆ ಮಾಡಬೇಕಿದ್ದ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅನ್ಯಾಯದ ಬಗ್ಗೆ ಸೊಲ್ಲೆತ್ತದೇ, ಕಾಂಗ್ರೆಸ್ ವಿರುದ್ಧ ಸೊಲ್ಲೆತ್ತದೇ, ತನ್ನ ಪಕ್ಷದ ಹಿತಕ್ಕಾಗಿ ದಲಿತರ ಹಿತವನ್ನೇ ಬಲಿಕೊಡುತ್ತಿದ್ದಾರೆ. ಅಲ್ಪಸಂಖ್ಯಾತರಿಗೆ ₹11 ಸಾವಿರ ಕೋಟಿ ವೆಚ್ಚ ಮಾಡಲು ಸಿದ್ದರಾಮಯ್ಯರಿಗೆ ಯಾವುದೇ ಗ್ಯಾರಂಟಿ ಯೋಜನೆ ಅಡ್ಡಿಯಾಗದು. ಆದರೆ, ದಲಿತರ ಹಿತಾಸಕ್ತಿಗಿಂತಲೂ ಕಾಂಗ್ರೆಸ್‌ನ ಓಟು ಬ್ಯಾಂಕ್ ರಾಜಕಾರಣವೇ ಈ ಸರ್ಕಾರಕ್ಕೆ ಆದ್ಯತೆಯಾಗಿರುವುದು ನಾಡಿನ ದುರಂತ ಎಂದು ಹರಿಹಾಯ್ದರು.ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದ ಯಶವಂತರಾವ್ ಜಾಧವ್, ಎಸ್.ಎಂ.ವೀರೇಶ ಹನಗವಾಡಿ, ಯುವ ಮುಖಂಡ ಜಿ.ಎಸ್.ಅನಿತಕುಮಾರ, ಪಿ.ಸಿ.ಶ್ರೀನಿವಾಸ ಭಟ್, ಟಿ.ಶ್ರೀನಿವಾಸ ದಾಸಕರಿಯಪ್ಪ, ಜಿ.ಎಸ್.ಶ್ಯಾಮ್, ರಾಜನಹಳ್ಳಿ ಶಿವಕುಮಾರ, ಎಂ.ಬಸವರಾಜ ನಾಯ್ಕ, ಧನಂಜಯ ಕಡ್ಲೇಬಾಳು, ಐರಣಿ ಅಣ್ಣೇಶ, ಅನಿಲಕುಮಾರ ನಾಯ್ಕ, ಎಸ್.ಟಿ.ವೀರೇಶ, ಲಿಂಗರಾಜ, ಪ್ರಭು ಕಲ್ಬುರ್ಗಿ, ಬಾತಿ ವೀರೇಶ ದೊಗ್ಗಳ್ಳಿ, ಮಂಜಾನಾಯ್ಕ, ಎಚ್.ಪಿ.ವಿಶ್ವಾಸ, ಹನುಮಂತ ನಾಯ್ಕ, ಜಿ.ವಿ.ಗಂಗಾಧರ, ಕೆ.ಪ್ರಸನ್ನಕುಮಾರ, ಆರ್.ಶಿವಾನಂದ, ಕೃಷ್ಣಪ್ಪ, ಕೊಟ್ರೇಶ ಗೌಡ, ಮಂಜಾ ನಾಯ್ಕ, ಬೇತೂರು ಸಂಗಪ್ಪ, ಕೆ.ಜಿ.ಕಲ್ಲಪ್ಪ, ಬಾತಿ ಸಿದ್ದೇಶ, ರವಿ ನಾಯ್ಕ, ಶಿವನಗೌಡ ಟಿ.ಪಾಟೀಲ, ಟಿಂಕರ್ ಮಂಜಣ್ಣ, ಕಿಶೋರ, ಗುಡ್ಡೇಶ, ಸೋಗಿ ಗುರು, ತರಕಾರಿ ಶಿವು, ಎಚ್.ವಿನಯ್, ಸಚಿನ್ ವರ್ಣೇಕರ್, ರಘು ವರ್ಣೇಕರ್, ಕೆಟಿಜೆ ನಗರ ಲೋಕೇಶ, ಕೆಟಿಜೆ ನಗರ ಆನಂದ, ಎಂ.ರಾಜು, ಕೆ.ವಿ.ಗುರು, ರೂಪಾ ಕಾಟ್ವೆ, ಶೈಜಲಾ ಇತರರಿದ್ದರು. ಸ್ವ ಹಿತಾಸಕ್ತಿಗೆ ಕಾಂಗ್ರೆಸ್ ಸೀಮಿತ
ಸಿದ್ದರಾಮಯ್ಯ ಆಳ್ವಿಕೆಯಲ್ಲಿ ಕಳೆದ 8 ತಿಂಗಳಿನಿಂದ ಪರಿಶಿಷ್ಟರಿಗೆ ಗೃಹ ನಿರ್ಮಾಣ ಯೋಜನೆ ನಿಂತಿದೆ. ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್‌ನಡಿ ಸಾವಿರಾರು ಮನೆ ನಿರ್ಮಿಸುತ್ತಿದ್ದರೆ ಕಾಂಗ್ರೆಸ್ ಸರ್ಕಾರ ವಸತಿ ಯೋಜನೆ ಕೋಮಾಗೆ ತಲುಪಿದೆ. ರೈತ ನಿಧಿಯಡಿ ದಲಿತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ನಿಂತಿದೆ. ಕಿಸಾನ್ ಸಮ್ಮಾನ್‌ಗೆ ಹೆಚ್ಚುವರಿ ನೀಡುತ್ತಿದ್ದ 4 ಸಾವಿರ ರು. ತಡೆ ಹಿಡಿಯಲಾಗಿದೆ. ಬಾಯಿ ತೆಗೆದರೆ ದಲಿತರು, ಆದಿವಾಸಿಗಳ ಕಲ್ಯಾಣದ ಬಗ್ಗೆ ಸಿದ್ದರಾಮಯ್ಯ ಅದನ್ನು ಕಾರ್ಯರೂಪಕ್ಕೆ ತರದೇ, ಸ್ವಹಿತ, ತಮ್ಮ ಪಕ್ಷದ ಹಿತಾಸಕ್ತಿಗೆ ಸೀಮಿತವಾಗಿದ್ದಾರೆ.ಡಾ.ಎ.ಎಚ್.ಶಿವಯೋಗಿಸ್ವಾಮಿ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ.............