ಸಿದ್ದು ಸರ್ಕಾರದಿಂದ ಪರಿಶಿಷ್ಟರಿಗೆ ಅನ್ಯಾಯ: ತಿಪ್ಪೇಸ್ವಾಮಿ

| Published : Feb 25 2024, 01:48 AM IST

ಸಾರಾಂಶ

ಪರಿಶಿಷ್ಟ ಜಾತಿ, ವರ್ಗ ಸಮುದಾಯಗಳಿಗೆ ಮೀಸಲಿಟ್ಟ ಸುಮಾರು ₹17 ಸಾವಿರ ಕೋಟಿ ಹಣ ಸದ್ವಿನಿಯೋಗವಾಗಿಲ್ಲ ಎಂದು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ದೂರಿದರಲ್ಲದೆ, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಾಜ್ಯದ ಪರಿಶಿಷ್ಟ ಜಾತಿ, ವರ್ಗಕ್ಕೆ ಮೀಸಲಿಟ್ಟ ಸುಮಾರು ೧೭ ಸಾವಿರ ಕೋಟಿ ರು. ಹಣವನ್ನು ಆ ಸಮುದಾಯಗಳಿಗೆ ಖರ್ಚು ಮಾಡದೆ ಬೇರೆ ಕಾರ್ಯಕ್ಕೆ ವಿನಿಯೋಗಿಸುವ ಮೂಲಕ ಎರಡೂ ವರ್ಗಗಳಿಗೆ ಅನ್ಯಾಯವೆಸಗಿದ್ದಾರೆ. ರಾಜ್ಯದಲ್ಲಿ ಪರಿಶಿಷ್ಟ ವರ್ಗ, ಪರಿಶಿಷ್ಟ ಜಾತಿ ಸಮುದಾಯಗಳಿಗೆ ಯಾವುದೇ ಸೌಲಭ್ಯ ನೀಡದೆ ವಂಚನೆ ಮಾಡುತ್ತಿದ್ದಾರೆಂದು ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡ, ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಆರೋಪಿಸಿದರು.

ಅವರು, ಶನಿವಾರ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಜಿಜೆಪಿ ಎಸ್ಟಿ ಮೋರ್ಚಾ ಹಮ್ಮಿಕೊಂಡಿದ್ದ ಪರಿಶಿಷ್ಟ ಪಂಗಡಗಳ ಮುನ್ನಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತ ನಾಡಿ, ಕಳೆದ ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದಿಂದ ವಂಚಿತವಾದರೂ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್‌ಶೆಟ್ಟರ್‌ರವರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಚುರುಕಾಗಿದೆ. ವಿಶೇಷವಾಗಿ ರಾಜ್ಯದ ಬಿಜೆಪಿ ಅಧ್ಯಕ್ಷ ಸ್ಥಾನ ವಹಿಸಿ ಕೊಂಡ ಬಿ.ವೈ.ವಿಜಯೇಂದ್ರ ರಾಜ್ಯ ೨೫ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಸಾಕಷ್ಟು ಪರಿಶ್ರಮವಹಿಸುತ್ತಿದ್ದು, ಎಸ್ಟಿ ಜನಾಂಗಕ್ಕೆ ಮೀಸಲಾತಿ ಸೌಲಭ್ಯ ಒದಗಿಸಿದ ಬಿಜೆಪಿಯ ಬಗ್ಗೆ ನಾವೆಲ್ಲರೂ ಜಾಗೃತರಾಗುವುದಲ್ಲದೆ, ಎಲ್ಲರನ್ನೂ ಜಾಗೃತಗೊಳಿಸಬೇಕು ಎಂದರು.

ಕಾರ್ಯಕ್ರಮ ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಿದ ವಿಚಾರವಾದಿ ವಾದಿರಾಜ್, ಕಳೆದ ಹಲವಾರು ದಶಕಗಳಿಂದ ರಾಜ್ಯವನ್ನು ಆಳಿದ ಯಾವುದೇ ಸರ್ಕಾರಗಳು ಪರಿಶಿಷ್ಟ ಪಂಗಡವೂ ಸೇರಿದಂತೆ ಪರಿಶಿಷ್ಟ ಜಾತಿ, ವರ್ಗಗಳ ಮೀಸಲಾತಿ ಹೆಚ್ಚಳ ಮಾಡದೆ ನಿರ್ಲಕ್ಷ್ಯ ವಹಿಸಿದ್ದರು. ಬಿಜೆಪಿ ಆಡಳಿತದಲ್ಲಿ ಈ ಜನಾಂಗದ ಮೀಸಲಾತಿ ಹೆಚ್ಚಳವಷ್ಟೇ ಯಲ್ಲದೆ, ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಗೂ ಸಹ ಅವಕಾಶ ನೀಡಿ, ಈ ಸಮುದಾಯವೂ ಸಹ ಮುನ್ನಡೆಯತ್ತ ಹೆಜ್ಜೆ ಇಡಲು ಅವಕಾಶ ಮಾಡಿಕೊಡಲಾಯಿತು. ಆದ್ದರಿಂದ ನಾವೆಲ್ಲರೂ ಇಂದು ಪರಿಶಿಷ್ಟ ವರ್ಗಗಳ ಮುನ್ನಡೆ ಕಾರ್ಯಕ್ರಮದ ಮೂಲಕ ಬಿಜೆಪಿ ಸರ್ಕಾರದ ಕೊಡುಗೆಯನ್ನು ನೆನಪಿಸಿಕೊಳ್ಳುವಂತಾಗಿದೆ. ಧಾರ್ಮಿಕ ಕ್ಷೇತ್ರವೂ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಸರ್ಕಾರ ಅನೇಕ ಕೊಡುಗೆ ನೀಡುವ ಮೂಲಕ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದೆ ಎಂದರು.

ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ರಾಜ್ಯವನ್ನು ಎರಡು ಅವಧಿಯಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸಿದೆ. ಈ ಹಿಂದೆ ಜೆಡಿಎಸ್ ಮೈತ್ರಿ ಯೊಂದಿಗೆ ಆಡಳಿತ ನಡೆಸಿದ ಬಿಜೆಪಿ ೨೦೨೦-೨೩ರ ತನಕ ಮತ್ತೊಮ್ಮೆ ರಾಜ್ಯವನ್ನು ಆಡಳಿತ ನಡೆಸಿ ಹಲವಾರು ಯೋಜನೆ ಬಡವರಿಗಾಗಿ ನೀಡಿದೆ. ಬಡವರು, ದುರ್ಬಲರು, ಮಹಿಳೆಯರು, ಯುವಕ, ಶ್ರೀಸಾಮಾನ್ಯರಿಗೆ ಅನೇಕ ಸೌಲಭ್ಯ ಕಲ್ಪಿಸಿ ಅವರ ಬದುಕಿಗೆ ಉತ್ತಮ ಮಾರ್ಗವನ್ನು ತೋರಿಸಿದೆ. ಮುಂಬರುವ ದಿನಗಳಲ್ಲೂ ಸಹ ಬಿಜೆಪಿ ಉತ್ತಮ ಆಡಳಿತ ನೀಡುವ ಮೂಲಕ ಜನರ ಸೇವೆ ಮಾಡಲಿದೆ. ಪರಿಶಿಷ್ಟ ಪಂಗಡದ ನೇತಾರರು ಬಿಜೆಪಿ ಸಾಧನೆಯಬಗ್ಗೆ ಹೆಚ್ಚು ಪ್ರಚಾರ ಕೈಗೊಳ್ಳಿ ಎಂದರು.

ಕಾರ್ಯಕ್ರಮ ಉದ್ದೇಶಿಸಿ ಶ್ರೀನಿವಾಸ್‌ದಾಸರ ಕರಿಯಪ್ಪ, ರಾಜ್ಯ ಎಸ್ಟಿ ಮೋರ್ಚಾ ಉಪಾಧ್ಯಕ್ಷ ಆರ್.ಅನಿಲ್‌ಕುಮಾರ್ ಮುಂತಾದವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಶಿವಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ಮುರುಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಮಂಡಿರಾಮದಾಸ್, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಆರ್.ಪಾಲಯ್ಯ, ಜಯಪಾಲಯ್ಯ, ದಲಿತ ಮುಖಂಡ ಎಂ.ಶಿವಮೂರ್ತಿ, ದೊರೆಬೈಯಣ್ಣ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಓಬಳೇಶ್, ಟಿ.ಮಂಜುನಾಥ, ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ರಾಮರೆಡ್ಡಿ, ಜಗದಾಂಭ, ಕವನ, ಪಾಲನೇತ್ರನಾಯಕ, ಹೊಸಮನೆ ಮನೋಜ್, ಈಶ್ವರನಾಯಕ, ಜೆ.ಕೆ.ತಿಪ್ಪೇಶ್, ಮುಂತಾದವರು ಉಪಸ್ಥಿತರಿದ್ದರು.