ಚಾಮರಾಜನಗರ ವಿಧಾನರಸಭಾ ಕ್ಷೇತ್ರದ ಜಿಪಂ ಮೀಸಲಾತಿ ಕಲ್ಪಿಸುವಾಗ ಪರಿಶಿಷ್ಟ ಜಾತಿಯನ್ನು ಕಡೆಗಣಿಸಲಾಗಿದೆ. ೬ ಜಿ.ಪಂ. ಕ್ಷೇತ್ರಗಳಲ್ಲಿ ಒಂದನ್ನು ಸಹ ಪರಿಶಿಷ್ಟ ಜಾತಿಗೆ ನೀಡಿಲ್ಲ. ಈ ಅನ್ಯಾಯವನ್ನು ಮೊದಲು ಸರಿಪಡಿಸಿ ಎಂದು ಕಾಂಗ್ರೆಸ್ ದಲಿತ ಮುಖಂಡರು ವರಿಷ್ಠರ ವಿರುದ್ದ ತಿರುಗಿ ಬಿದ್ದ ಪ್ರಸಂಗ ಬುಧವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಾಮರಾಜನಗರ ವಿಧಾನರಸಭಾ ಕ್ಷೇತ್ರದ ಜಿಪಂ ಮೀಸಲಾತಿ ಕಲ್ಪಿಸುವಾಗ ಪರಿಶಿಷ್ಟ ಜಾತಿಯನ್ನು ಕಡೆಗಣಿಸಲಾಗಿದೆ. ೬ ಜಿ.ಪಂ. ಕ್ಷೇತ್ರಗಳಲ್ಲಿ ಒಂದನ್ನು ಸಹ ಪರಿಶಿಷ್ಟ ಜಾತಿಗೆ ನೀಡಿಲ್ಲ. ಈ ಅನ್ಯಾಯವನ್ನು ಮೊದಲು ಸರಿಪಡಿಸಿ ಎಂದು ಕಾಂಗ್ರೆಸ್ ದಲಿತ ಮುಖಂಡರು ವರಿಷ್ಠರ ವಿರುದ್ದ ತಿರುಗಿ ಬಿದ್ದ ಪ್ರಸಂಗ ಬುಧವಾರ ನಡೆಯಿತು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಸೃಜನ್ ಅಭಿಯಾನ -೨ ಕಾರ್ಯಕ್ರಮದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಸಂಬಂಧ ನಡೆದ ಸಭೆಯಲ್ಲಿ ವೀಕ್ಷಕರ ಮುಂದೆಯೇ ಕಾಂಗ್ರೆಸ್ ಪಕ್ಷದ ದಲಿತ ಮುಖಂಡರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಕೆಪಿಸಿಸಿ ವೀಕ್ಷಕರಾಗಿ ಆಗಮಿಸಿದ್ದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಯೋಗೇಶ್, ಶಾಸಕ ಎ.ಆರ್.ಕೃಷ್ಣಮೂರ್ತಿ, ಮಾಜಿ ಶಾಸಕರಾದ ಆರ್. ನರೇಂದ್ರ, ಜಿ.ಎನ್. ನಂಜುಂಡಸ್ವಾಮಿ ಅವರು ಭಾಗವಹಿಸಿದ್ದ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮೀಸಲಾತಿ ನಿಗಧಿ ಪಡಿಸುವಲ್ಲಿ ಚಾಮರಾಜನಗರ ಕ್ಷೇತ್ರದಲ್ಲಿ ಅನ್ಯಾಯವಾಗಿದೆ. ಇದನ್ನು ಸರಿಪಡಿಸದ ಹೊರತು ಸಭೆ ನಡೆಸಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಂತೆ ಸಭೆಯಲ್ಲಿ ಕೆಲ ಕಾಲ ಗೊಂದಲ ವಾತಾವರಣ, ಕೂಗಾಟ ನಡೆಯಿತು.

ಸಭೆಯಲ್ಲಿ ಮಾತನಾಡಿದ ದಲಿತರ ಮುಖಂಡ ಆರ್.ಮಹದೇವ್, ನಲ್ಲೂರು ಸೋಮೇಶ್ವರ್, ಮಹೇಂದ್ರ ವರ್ಮ ಸೇರಿದಂತೆ ಅನೇಕರು ಮಾತನಾಡಿ, ಈ ಹಿಂದಿನಿಂದಲು ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೀಸಲಾತಿ ನಿಗಧಿಪಡಿಸುವಾಗ ಎರಡರಿಂದ ಮೂರು ಕ್ಷೇತ್ರಗಳನ್ನು ಪರಿಶಿಷ್ಟ ಜಾತಿಗೆ ನೀಡಲಾಗುತ್ತಿತ್ತು. ಈ ಸಂಪ್ರಾದಾಯ ಹಿಂದಿನಿಂದಲು ಇದೆ. ಕಳೆದ ಅವಧಿಯಲ್ಲಿ ಎರಡು ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ನಿಗಧಿಯಾಗಿತ್ತು. ಆದರೆ ಈ ಬಾರಿ ಎಳು ಕ್ಷೇತ್ರಗಳ ಪೈಕಿ ಒಂದನ್ನು ಸಹ ಪರಿಶಿಷ್ಟ ಜಾತಿ ನೀಡಿಲ್ಲ. ಕ್ಷೇತ್ರದಲ್ಲಿ ೫೦ ಸಾವಿರಕ್ಕು ಹೆಚ್ಚು ಪರಿಶಿಷ್ಟ ಜಾತಿ ಮತದಾರರು ಇದ್ದಾರೆ. ಇದನ್ನು ಪರಿಗಣಿಸಿ, ಈ ಸಮುದಾಯಗಳಿಗೆ ನ್ಯಾಯ ಕಲ್ಪಿಸಬೇಕು. ಕಾಂಗ್ರೆಸ್ ಪಕ್ಷ ದಲಿತರು ಹಾಗೂ ಅಲ್ಪಸಂಖ್ಯಾತರು ಹೆಚ್ಚು ಬೆಂಬಲಿಸುತ್ತಿದ್ದಾರೆ. ಈಗ ದಲಿತ ಸಮುದಾಯದ ಎರಡನೇ ಹಂತ ನಾಯಕತ್ವಕ್ಕೆ ಅನ್ಯಾಯ ಮಾಡಿದರೆ, ಇನ್ನು ರಾಜಕೀಯವಾಗಿ ಬೆಳೆಯವುದು ಹೇಗೆ ಎಂಬ ಪ್ರಶ್ನೆಯನ್ನು ಮುಖಂಡರು ಮಾಡಿದರು.

ಕೆಪಿಸಿಸಿ ವೀಕ್ಷಕ ಎಂ.ಕೆ. ಸೋಮಶೇಖರ್ ಮಾತನಾಡಿ, ಜಿಪಂಗೆ ಕ್ಷೇತ್ರವಾರು ಮಾಡಿರುವ ಮೀಸಲಾತಿಯಲ್ಲಿ ಆಗಿರುವ ಲೋಪ ಹಾಗೂ ಪರಿಶಿಷ್ಟ ಜಾತಿಗೆ ಅವಕಾಶ ಕಲ್ಪಿಸಿಕೊಡುವ ನಿಮ್ಮ ಬೇಡಿಕೆಗೆಯನ್ನು ಕೆಪಿಸಿಸಿ ಮಟ್ಟದಲ್ಲಿ ಚರ್ಚೆ ಮಾಡಿ, ಸರಿಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ನಂತರ ಸಭೆ ನಡೆಯಿತು.

ಬ್ಲಾಕ್ ಅಧ್ಯಕ್ಷರಾದ ಎಚ್.ವಿ.ಚಂದ್ರು, ಮಹಮದ್ ಅಸ್ಗರ್, ಮೊದಲಾದವರು ಇದ್ದರು.