ಸಾರಾಂಶ
ರಾಜ್ಯ ಬಲಗೈ ಸಮುದಾಯಕ್ಕೆ ಜಾತಿ ಜನಗಣತಿ ಸಂದರ್ಭ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟ ಮತ್ತು ತಾಲೂಕು ಛಲವಾದಿ ಮಹಾಸಭಾ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
- ಚನ್ನಗಿರಿಯಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾ ಅಧ್ಯಕ್ಷ ರುದ್ರಮುನಿ ಆರೋಪ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ರಾಜ್ಯ ಬಲಗೈ ಸಮುದಾಯಕ್ಕೆ ಜಾತಿ ಜನಗಣತಿ ಸಂದರ್ಭ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟ ಮತ್ತು ತಾಲೂಕು ಛಲವಾದಿ ಮಹಾಸಭಾ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಅಧ್ಯಕ್ಷ ರುದ್ರಮುನಿ ಮಾತನಾಡಿ, ರಾಜ್ಯ ಸರ್ಕಾರದ ಆದೇಶದಂತೆ ಒಳ ಮೀಸಲಾತಿ ಆಯೋಗ ರಚಿಸಿದ್ದು ರಾಜ್ಯದಲ್ಲಿ ಇರುವಂತಹ 101 ಪರಿಶಿಷ್ಠ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಸಮೀಕ್ಷೆಯ ಆಧಾರದ ಮೇಲೆ ವರ್ಗೀಕರಣ ಮಾಡಲು ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರನ್ನು ನಿಯೋಜನೆ ಮಾಡಲಾಗಿದೆ. ಇವರು ರಾಜ್ಯದಲ್ಲಿ ಸಮೀಕ್ಷೆ ಮಾಡಿ, ವರದಿ ನೀಡಿದ್ದಾರೆ. ಈ ವರದಿಯಲ್ಲಿ ಎ.ಬಿ.ಸಿ.ಡಿ. ಮತ್ತು ಈ ಎಂದು ವರ್ಗಿಕರಿಸಿ ರಾಜ್ಯದಲ್ಲಿ ಇರುವಂತಹ ಬಲಗೈ ಜಾತಿಗೆ ಸಂಬಂಧಪಟ್ಟ ಕೆಲವು ಜಾತಿಗಳನ್ನು ಬೇರೆ, ಬೇರೆ ಗುಂಪಿಗೆ ಸೇರಿಸಿ, ಬಲಗೈ ಜಾತಿ ಜನಸಂಖ್ಯೆ ಇಳಿಮುಖ ಮಾಡಿದ್ದಾರೆ ಎಂದು ಆರೋಪಿಸಿದರು.ಮಧ್ಯ ಕರ್ನಾಟಕದ ಆದಿದ್ರಾವಿಡ, ಆದಿ ಆಂಧ್ರ, ಛಲವಾದಿ ಸಮುದಾಯಗಳ ಸುಮಾರು 5.50 ಲಕ್ಷ ಜನಸಂಖ್ಯೆ ಪರಾಯ್ ಮತ್ತು ಪರಯನ್ ಜಾತಿ ಮತ್ತು ಮೋಗೇರ್ ಜಾತಿಯ 3.8 ಲಕ್ಷ ಜನಸಂಖ್ಯೆಯನ್ನು ಬೇರೆ ಪಂಗಡಗಳಾಗಿ ವರ್ಗೀಕರಿಸಿದ್ದಾರೆ. ಈ ಜಾತಿಗಳು ಬಲಗೈ ಸಮುದಾಯದವರಾಗಿದ್ದು, ಈ ಜಾತಿಗಳು ಸೇರಿದರೆ ಬಲಗೈ ಸಮುದಾಯವು 38.70 ಲಕ್ಷ ಜನಸಂಖ್ಯೆಯಾಗಲಿದೆ. ಪರಿಶಿಷ್ಟ ಜಾತಿಯಲ್ಲಿಯೇ ಬಹುದೊಡ್ಡ ಸಮುದಾಯವಾಗಿದೆ. ಈ ಜಾತಿಗಳನ್ನು ಒಡೆದು ಬೇರೆ ಬೇರೆ ಗುಂಪುಗಳಾಗಿ ವರ್ಗೀಕರಿಸಿ ಅನ್ಯಾಯ ಮಾಡಿರುವುದು ಸರಿಯಲ್ಲ ಎಂದರು.
ನಗರ ಮತ್ತು ಕೆಲ ಗ್ರಾಮೀಣ ಪ್ರದೇಶಗಳಲ್ಲಿ 5ರಿಂದ 6 ಲಕ್ಷ ಜನಸಂಖ್ಯೆ ಸರ್ವೇ ಮಾಡಿರುವುದು ಕಂಡುಬಂದಿಲ್ಲ. ಅಲ್ಲೂ ಮೋಸ ಮಾಡಲಾಗಿದೆ. ರಾಜ್ಯ ಸರ್ಕಾರ ಘೋಷಣೆ ಮಾಡಿರುವುದು 15 ಪರ್ಸೆಂಟ್ ಮೀಸಲಾತಿ ಮಾತ್ರ. ಆದರೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು 17 ಪರ್ಸೆಂಟ್ ಮೀಸಲಾತಿ ಎಂದು ಹೇಳಿದ್ದಾರೆ. ಇದು ಸರ್ಕಾರಿ ಆದೇಶದಲ್ಲಿ ಇದೆ. ಇಲ್ಲೂ ನಮ್ಮ ಸಮುದಾಯಕ್ಕೆ ಮಂಕುಬೂದಿ ಎರಚಿದ್ದಾರೆ. ಅನ್ಯಾಯ ಸರಿಪಡಿಸದೇ ಇದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.ಈ ಸಂದರ್ಭ ತಾಲೂಕು ಅಧ್ಯಕ್ಷ ಧರಣೇಂದ್ರ, ಜಿಲ್ಲಾ ಉಪಾಧ್ಯಕ್ಷ ಸಿ.ನಾಗರಾಜ್, ಶೇಖರಪ್ಪ, ಮಧು, ರವಿ, ವೀರಪ್ಪ, ದಿಲಿಪ್, ಷಣ್ಮುಖಪ್ಪ, ಶಿವಪ್ಪ, ಶಾಂತರಾಜ್, ಶಿವಮೂರ್ತಿ ಮೊದಲಾದವರು ಭಾಗವಹಿಸಿದ್ದರು.
- - --13ಕೆಸಿಎನ್‌ಜಿ2:
ಚನ್ನಗಿರಿಯಲ್ಲಿ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟ ಮತ್ತು ತಾಲೂಕು ಛಲವಾದಿ ಮಹಾಸಭಾ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.