ಸಾರಾಂಶ
ಹುಮನಾಬಾದನಲ್ಲಿ ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ನೂರಾರು ಮಹಿಳೆಯರು ಕಚೇರಿ ಮುಂದೆ ಪ್ರತಿಭಟಿಸಿದರು.
ಕನ್ನಡಪ್ರಭ ವಾರ್ತೆ ಹುಮನಾಬಾದ್
ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಕಾರ್ಮಿಕ ಕಚೇರಿ ಮುಂಭಾಗ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಭಾರತೀಯ ದಲಿತ ಪ್ಯಾಂಥರ್ ಸಂಘಟನೆ ಮೂಲಕ ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿ ಕಾರ್ಮಿಕ ಇಲಾಖೆ ಅಧಿಕಾರಿ ಗಂಗಾಧರ ನೀಲೂರೆಗೆ ಮನವಿ ಪತ್ರ ಸಲ್ಲಿಸಿದರು.ಪಟ್ಟಣದ ಹಳೆ ತಹಸೀಲ್ದಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕ ಇಲಾಖೆ ಮುಂಭಾಗ ನಡೆಸಿದ ಪ್ರತಿಭಟನೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಕಾರ್ಮಿಕರಿಗೆ, ಕಾರ್ಮಿಕರ ಮಕ್ಕಳಿಗೆ ಸರ್ಕಾರದಿಂದ ದೊರೆಯಬೇಕಾದ ಕಾರ್ಮಿಕ ಕಿಟ್ ಹಾಗೂ ಸೌಲಭ್ಯ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲದ ಕಾರಣ ವಂಚಿರಾಗುತ್ತಿದ್ದಾರೆ. ಈ ಕುರಿತು ಅನೇಕ ಬಾರಿ ಮನವಿ ಪತ್ರ ಸಲ್ಲಿಸಿದರು ಯಾವುದೇ ಪ್ರಯೋಜನೆ ಆಗಿಲ್ಲ. ಈಗಲಾದರು ಇಲಾಖೆ ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸರ್ಕಾರದ ಕಾರ್ಮಿಕ ಇಲಾಖೆಯಿಂದ ಬರುವ ಮೂಲ ಸೌಕರ್ಯಗಳನ್ನು ಕಾರ್ಮಿಕರಿಗೆ ಹಾಗೂ ಅವರ ಕುಟುಂಬಕ್ಕೆ ಒದಗಿಸಬೇಕು. ಜೊತೆಗೆ ಇಲಾಖೆ ಸಲಹೆ ಸೂಚನೆಗಳನ್ನು ಕಾರ್ಮಿಕರ ಗಮನಕ್ಕೆ ತರುವಂತೆ ಆಗ್ರಹಿಸಿದರು.
ಭಾರತೀಯ ದಲಿತ ಪ್ಯಾಂಥರ್ ತಾಲೂಕು ಅಧ್ಯಕ್ಷ ಗಣಪತಿ ಅಷ್ಟುರೆ, ಉಪಾಧ್ಯಕ್ಷ ಸುಶೀಲಕುಮಾರ ಭೋಲಾ, ನಗರ ಉಪಾಧ್ಯಕ್ಷ ಪೀರಪ್ಪಾ ಪಡತಲ, ಸಿದ್ದಾರ್ಥ ಜಾನವೀರ, ಅನಂತ ಮಾಳಗೆ, ಗೌತಮ ಜಾನವೀರ, ಸುನೀಲ, ಮಹೇಶ, ರಾಜಕುಮಾರ ಸಿಂಧೋಳ, ಲಕ್ಷ್ಮೀ ಮರೂರ, ಪೂಜಾ ಪುಡಕಲ್, ಕಾವೇರಿ ಚಲವಾದಿ, ಗುಂಡಮ್ಮಾ ಪಾರ್ಲಾ ಸೇರಿದಂತೆ ಅನೇಕರಿದ್ದರು.