ದಾವಣಗೆರೆ ಜೈಲಿನಲ್ಲಿ ಕೈದಿಗಳ ಹೊಡೆದಾಟ, ಇಬ್ಬರಿಗೆ ಗಾಯ

| Published : Jan 29 2024, 01:30 AM IST

ದಾವಣಗೆರೆ ಜೈಲಿನಲ್ಲಿ ಕೈದಿಗಳ ಹೊಡೆದಾಟ, ಇಬ್ಬರಿಗೆ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ಜೈಲಿನಲ್ಲಿ ಗುಂಪುಗಳ ಗಲಾಟೆ ಗಮನಿಸಿದ ಜೈಲು ಅಧಿಕಾರಿ, ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಕೈದಿಗಳ ಚದುರಿಸಿದರು. ಘರ್ಷಣೆಯಲ್ಲಿ ಗಾಯಗೊಂಡಿದ್ದ ಇಬ್ಬರು ಕೈದಿಗಳ ಜಿಲ್ಲಾಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಕೊಡಿಸಲಾಗಿದೆ. ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದ ನಂತರ ಕೈದಿಗಳನ್ನು ವಾಪಸ್‌ ಜೈಲಿಗೆ ಕರೆ ತರಲಾಗಿದ್ದು, ಯಾರಿಗೂ ಅಂತಹ ಗಂಭೀರ ಪೆಟ್ಟುಗಳಾಗಿಲ್ಲ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಇಲ್ಲಿನ ಜಿಲ್ಲಾ ಉಪ ಕಾರಾಗೃಹದಲ್ಲಿ ಕೈದಿಗಳ ಮಧ್ಯೆ ಮಾತಿನ ಚಕಮಕಿ, ಹೊಡೆದಾಟವಾಗಿ ಇಬ್ಬರು ಕೈದಿಗಳ ತಲೆಗೆ ಗಾಯಗಳಾಗಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.

ಇಲ್ಲಿನ ಬಸವ ನಗರ ಪೊಲೀಸ್ ಠಾಣೆಗೆ ಹೊಂದಿರುವ ಜಿಲ್ಲಾ ವಿಶೇಷ ಉಪ ಕಾರಾಗೃಹದಲ್ಲಿ ಬೆಳಗ್ಗೆ ಸ್ಥಳೀಯ ಕೈದಿಗಳು, ಚಿತ್ರದುರ್ಗ ಜಿಲ್ಲೆ ಮೂಲಕ ಕೈದಿಗಳು, ಹೊನ್ನಾಳಿ ಕೈದಿಗಳು ಹಾಗೂ ಉತ್ತರ ಪ್ರದೇಶ ಮೂಲದ ಕೈದಿಗಳ ಮಧ್ಯೆ ಮಾತಿಗೆ ಮಾತು ಬೆಳೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.

ಜೈಲಿನಲ್ಲಿ ಗುಂಪುಗಳ ಗಲಾಟೆ ಗಮನಿಸಿದ ಜೈಲು ಅಧಿಕಾರಿ, ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಕೈದಿಗಳ ಚದುರಿಸಿದರು. ಘರ್ಷಣೆಯಲ್ಲಿ ಗಾಯಗೊಂಡಿದ್ದ ಇಬ್ಬರು ಕೈದಿಗಳ ಜಿಲ್ಲಾಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಕೊಡಿಸಲಾಗಿದೆ. ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದ ನಂತರ ಕೈದಿಗಳನ್ನು ವಾಪಸ್‌ ಜೈಲಿಗೆ ಕರೆ ತರಲಾಗಿದ್ದು, ಯಾರಿಗೂ ಅಂತಹ ಗಂಭೀರ ಪೆಟ್ಟುಗಳಾಗಿಲ್ಲ. ಘರ್ಷಣೆಯಲ್ಲಿ ಭಾಗಿಯಾಗಿದ್ದ ಕೈದಿಗಳ ಮೇಲೆ ಗಂಭೀರ ಪ್ರಕರಣಗಳಿವೆ ಎನ್ನಲಾಗಿದೆ.

ಪರಸ್ಪರ ಜಗಳ, ಘರ್ಷಣೆಯಲ್ಲಿ ತೊಡಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೈದಿಗಳ ಮೇಲೆ ಎಫ್ಐಆರ್ ದಾಖಲಿಸಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಜಿಲ್ಲಾ ವಿಶೇಷ ಕಾರಾಗೃಹಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹಾಗೂ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿದರು. ಕೈದಿಗಳಲ್ಲಿ ಮಾತಿಗೆ ಮಾತು ಬೆಳೆದು, ಪರಸ್ಪರದ ತಳ್ಳಾಟದ ವೇಳೆ ಒಬ್ಬನು ಬಿದ್ದಿದ್ದರಿಂದ ತಲೆಗೆ ಪೆಟ್ಟಾಗಿದೆಯೆಂಬುದಾಗಿ ಕೈದಿಗಳು ಹೇಳುತ್ತಿದ್ದಾರೆ. ಸಿಸಿ ಕ್ಯಾಮೆರಾ ದೃಶ್ಯಾವಳಿ, ಇತರೆ ಕೈದಿಗಳ ಹೇಳಿಕೆ ಎಲ್ಲವನ್ನೂ ಪಡೆದು, ಕೂಲಂಕಷವಾಗಿ ಪರಿಶೀಲಿಸಿ, ಸೂಕ್ತ ತನಿಖೆ ನಡೆಸಲಾಗುವುದು.

ಉಮಾ ಪ್ರಶಾಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.