ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಸಾಂತೂರು ಕೊಪ್ಲ ವ್ಯಾಪ್ತಿಯ ಬೆಳ್ಮಣ್ ಚರ್ಚ್ ವಟಾರಗಳಲ್ಲಿ ಇತ್ತೀಚೆಗೆ ಕಾಡುಕೋಣಗಳ ಭಾರಿ ಹಾವಳಿ ಕಂಡುಬಂದಿದೆ.

ಕಾರ್ಕಳ: ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಹಾವಳಿ ದಿನೇದಿನೇ ಹೆಚ್ಚುತ್ತಿದ್ದು, ಕೃಷಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ವಿಶೇಷವಾಗಿ ಪಶ್ಚಿಮ ಘಟ್ಟಗಳ ತಪ್ಪಲಿನ ಭಾಗಗಳಲ್ಲಿ ಕಾಡುಕೋಣ, ಕಡವೆ, ಹಂದಿ, ನವಿಲು, ಕೆಂಚಳಿಲು, ಮಂಗಗಳು ಸೇರಿದಂತೆ ವಿವಿಧ ಕಾಡುಪ್ರಾಣಿಗಳಿಂದ ಬೆಳೆಗಳಿಗೆ ಭಾರೀ ಹಾನಿಯಾಗುತ್ತಿದೆ. ಇದರಿಂದಾಗಿ ರೈತರು ಆತಂಕ ಹಾಗೂ ಅಸಹಾಯ ಸ್ಥಿತಿಗೆ ತಲುಪಿದ್ದಾರೆ.ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಸಾಂತೂರು ಕೊಪ್ಲ ವ್ಯಾಪ್ತಿಯ ಬೆಳ್ಮಣ್ ಚರ್ಚ್ ವಟಾರಗಳಲ್ಲಿ ಇತ್ತೀಚೆಗೆ ಕಾಡುಕೋಣಗಳ ಭಾರಿ ಹಾವಳಿ ಕಂಡುಬಂದಿದೆ.ಶುಕ್ರವಾರ ಬೆಳಗ್ಗೆ ಸುಮಾರು ಐದಕ್ಕೂ ಹೆಚ್ಚು ಕಾಡುಕೋಣಗಳ ಗುಂಪು ತೋಟಗಳಿಗೆ ದಾಳಿ ನಡೆಸಿದ್ದು, ಫಲಭರಿತವಾದ 20ಕ್ಕೂ ಹೆಚ್ಚು ಅಡಡಿಕೆ ಗಿಡಗಳನ್ನು ಸಂಪೂರ್ಣವಾಗಿ ನಾಶಪಡಿಸಿವೆ. ಬೆಳೆ ಬೆಳೆಯಲು ವರ್ಷಗಳ ಶ್ರಮ ಹೂಡಿರುವ ರೈತರಿಗೆ ಇದರಿಂದ ಅಪಾರ ನಷ್ಟ ಉಂಟಾಗಿದೆ. ಕಾಡುಕೋಣಗಳ ದಾಳಿಯಿಂದ ತೋಟದ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಭೀತಿ ವಾತಾವರಣ ನಿರ್ಮಾಣವಾಗಿದೆ.ಇದಷ್ಟೇ ಅಲ್ಲದೆ, ಕಾರ್ಕಳ ತಾಲೂಕಿನ ರೆಂಜಾಳ, ಮಾಳ, ನೂರಲ್ಬೆಟ್ಟು ಭಾಗಗಳಲ್ಲಿ ಹಂದಿಗಳು, ಕಡವೆಗಳು ಹಾಗೂ ಕಾಡುಕೋಣಗಳು ಅಗದ್ದೆ ಮತ್ತು ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿರುವ ಘಟನೆಗಳು ಹೆಚ್ಚಾಗಿವೆ. ಅಕ್ಕಿ, ಅಡಿಕೆ, ತೆಂಗು, ಬಾಳೆ ಸೇರಿದಂತೆ ವಿವಿಧ ಬೆಳೆಗಳಿಗೆ ಪ್ರಾಣಿಗಳು ದಾಳಿ ನಡೆಸುತ್ತಿದ್ದು, ರಾತ್ರಿ ವೇಳೆ ರೈತರು ತೋಟಗಳಲ್ಲಿ ಕಾವಲು ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರ ಆರೋಗ್ಯ ಹಾಗೂ ಭದ್ರತೆಗೂ ಅಪಾಯ ಎದುರಾಗುತ್ತಿದೆ.ಪಶ್ಚಿಮ ಘಟ್ಟಗಳ ತಪ್ಪಲಿನ ಮಾಳ, ಶಿರ್ಲಾಲು, ಕೆರುವಾಶೆ ಭಾಗಗಳಲ್ಲಿ ಕಾಡುಪ್ರಾಣಿಗಳ ಹಾವಳಿ ತೀವ್ರವಾಗಿದ್ದು, ಕೃಷಿಗೆ ಭಾರೀ ಧಕ್ಕೆ ಉಂಟಾಗಿದೆ. ಕಾಡುಕೋಣ ಹಾಗೂ ಹಂದಿಗಳ ಜೊತೆಗೆ ನವಿಲುಗಳ ಕಾಟವೂ ಹೆಚ್ಚಿದ್ದು, ಬೀಜ ಬಿತ್ತಿದ ತಕ್ಷಣವೇ ಬೆಳೆ ಹಾಳಾಗುತ್ತಿರುವುದು ರೈತರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ನವಿಲುಗಳು ಅಡಿಕೆ ತೋಟಗಳಲ್ಲಿ ಮೊಗ್ಗುಗಳನ್ನು ಹಾನಿಗೊಳಿಸುತ್ತಿದ್ದು, ಕಡಿಮೆ ಅವಧಿಯಲ್ಲೇ ದೊಡ್ಡ ನಷ್ಟ ಉಂಟಾಗುತ್ತಿದೆ.ಹೆಬ್ರಿ ತಾಲೂಕಿನ ಅಂಡಾರು, ಮುನಿಯಾಲು, ವರಂಗ, ಮುದ್ರಾಡಿ, ಕಬ್ಬಿನಾಲೆ, ನಾಡ್ಪಾಲು ಭಾಗಗಳಲ್ಲಿ ಕೂಡ ಕಾಡುಕೋಣ ಹಾಗೂ ಕಡವೆಗಳ ಹಾವಳಿ ನಿರಂತರವಾಗಿ ಮುಂದುವರೆದಿದೆ. ಪಶ್ಚಿಮ ಘಟ್ಟಗಳ ತಪ್ಪಲಿನ ಪ್ರದೇಶಗಳಲ್ಲಿ ಕೆಂಚಳಿಲು ಹಾಗೂ ಮಂಗಗಳ ಕಾಟವೂ ಹೆಚ್ಚಿದ್ದು, ಮನೆಗಳ ಸುತ್ತಮುತ್ತಲಿಗೂ ಪ್ರಾಣಿಗಳು ಬರುವಂತಾಗಿದೆ. ಇದರಿಂದ ಗ್ರಾಮಸ್ಥರು ದಿನನಿತ್ಯದ ಜೀವನದಲ್ಲೇ ಭಯಭೀತರಾಗಿದ್ದಾರೆ.ಕಳೆದ ಬಾರಿ ಶಿರ್ಲಾಲು, ಕಬ್ಬಿನಾಲೆ, ಹೆಬ್ರಿ ತಾಲೂಕಿನ ಚಾರ, ನಾಡ್ಪಾಲು, ಕುಚ್ಚೂರು ಭಾಗಗಳಲ್ಲಿ ಆನೆಗಳ ಹಾವಳಿ ಕೂಡ ಕಂಡುಬಂದಿದ್ದು, ಹಲವಾರು ತೋಟಗಳು ಹಾನಿಗೊಳಗಾಗಿದ್ದವು. ಆನೆಗಳ ಚಲನವಲನದಿಂದ ಗ್ರಾಮಸ್ಥರು ರಾತ್ರಿಯಲ್ಲಿ ಮನೆಯಿಂದ ಹೊರಬರಲು ಸಹ ಹಿಂಜರಿಯುವಂತಾಗಿತ್ತು. ಈ ಎಲ್ಲಾ ಘಟನೆಗಳು ಕಾಡುಪ್ರಾಣಿಗಳ ಸಮಸ್ಯೆ ಎಷ್ಟು ಗಂಭೀರವಾಗಿದೆ ಎಂಬುದನ್ನು ತೋರಿಸುತ್ತವೆ.ರೈತರು ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಶಾಶ್ವತ ಪರಿಹಾರಕ್ಕೆ ಆಗ್ರಹಿಸುತ್ತಿದ್ದಾರೆ. ಕಾಡುಪ್ರಾಣಿಗಳ ನುಗ್ಗುವಿಕೆಯನ್ನು ತಡೆಯಲು ಸೌರ ವಿದ್ಯುತ್ ಬೇಲಿ, ತಡೆಗೋಡೆ, ನಿಯಮಿತ ಪಟ್ರೋಲಿಂಗ್ ಸೇರಿದಂತೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಬೆಳೆ ನಷ್ಟಕ್ಕೆ ತಕ್ಷಣ ಪರಿಹಾರ ನೀಡಬೇಕು ಹಾಗೂ ಪ್ರಾಣಿಗಳ ಹಾವಳಿ ಇರುವ ಪ್ರದೇಶಗಳಲ್ಲಿ ವೈಜ್ಞಾನಿಕ ಅಧ್ಯಯನ ನಡೆಸಿ ದೀರ್ಘಕಾಲಿಕ ಯೋಜನೆ ರೂಪಿಸಬೇಕು ಎಂಬುದು ರೈತರ ಬೇಡಿಕೆಯಾಗಿದೆ.ಒಟ್ಟಾರೆ, ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಕಾಡುಪ್ರಾಣಿಗಳ ಕಾಟ ದಿನೇದಿನೇ ತೀವ್ರವಾಗುತ್ತಿದ್ದು, ಕೃಷಿಕರು ಕಂಗಾಲಾಗಿದ್ದಾರೆ. ಸೂಕ್ತ ಕ್ರಮಗಳನ್ನು ತಕ್ಷಣ ಕೈಗೊಳ್ಳದಿದ್ದರೆ ಕೃಷಿ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಆತಂಕ ವ್ಯಕ್ತವಾಗುತ್ತಿದೆ.ಈಗಾಗಲೇ ಕಾಡುಕೋಣ ಹಾಗೂ ಮಂಗಳು , ನವಿಲುಗಳ ಕಾಟಗಳಿಂದ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗುತಿಲ್ಲ, ಒಂದು ವರ್ಷದಿಂದ ಬೆಳೆ ಬೆಳೆಸುವುದನ್ನೆ ನಿಲ್ಲಿಸಿದ್ದೇವೆ.-ಶ್ರೀಧರ್ ಸೇರಿಗಾರ್ ಕೆರ್ವಾಶೆ