ಪ್ರಪಂಚದಾದ್ಯಂತ ಪ್ರತಿಯೊಂದು ಧರ್ಮ, ದೇಶ, ಭಾಷೆ, ಸಂಸ್ಕೃತಿ, ಜನಾಂಗ, ಪಂಥ, ಬಣ್ಣ ಮತ್ತು ನಂಬಿಕೆಗಳನ್ನು ಇನ್ನರ್ ವೀಲ್ ಪ್ರತಿನಿಧಿಸುತ್ತದೆ.

ಹಾವೇರಿ: ಮಾನವೀಯತೆಯೇ ಹೃದಯದ ಬಡಿತ ಎಂಬ ಧ್ಯೇಯೋದ್ದೇಶ ಇಟ್ಟುಕೊಂಡು ಸ್ನೇಹ, ಸೇವೆ ಮತ್ತು ತಿಳಿವಳಿಕೆಯನ್ನು ಉತ್ತೇಜಿಸಿ ವಿಶ್ವದ ಎಲ್ಲ ಸಮುದಾಯಗಳಿಗೆ ಮಹಿಳೆಯರೇ ಸ್ವಯಂಸೇವಕರಾಗಿ ಸೇವೆ ಸಲ್ಲಿಸುವ ನಿಸ್ವಾರ್ಥ ಸಂಘಟನೆಯೇ ಇನ್ನರ್ ವೀಲ್ ಸಂಸ್ಥೆಯಾಗಿದೆ ಎಂದು ಸಂಸ್ಥೆಯ ಜಿಲ್ಲಾಧ್ಯಕ್ಷೆ ಪ್ರತಿಭಾ ಹಾವನೂರ ತಿಳಿಸಿದರು.ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ. 02ರಲ್ಲಿ ಇನ್ನರ್‌ವೀಲ್ ಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ಬಡ, ಪ್ರತಿಭಾವಂತ ಬಾಲಕಿಯರಿಗೆ ಉಚಿತ ಬೈಸಿಕಲ್‌ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಪ್ರಪಂಚದಾದ್ಯಂತ ಪ್ರತಿಯೊಂದು ಧರ್ಮ, ದೇಶ, ಭಾಷೆ, ಸಂಸ್ಕೃತಿ, ಜನಾಂಗ, ಪಂಥ, ಬಣ್ಣ ಮತ್ತು ನಂಬಿಕೆಗಳನ್ನು ಇನ್ನರ್ ವೀಲ್ ಪ್ರತಿನಿಧಿಸುತ್ತದೆ. ವಿಶ್ವದ ನಾಗರಿಕರ ನಡುವೆ ಪ್ರೀತಿ, ವಿಶ್ವಾಸ ವೃದ್ಧಿಸಿ ಮಾನವ ಸಂಬಂಧಗಳ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸರ್ಕಾರಿ ಶಾಲೆಯ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬೈಸಿಕಲ್ ನೀಡುವದು ಶಿಕ್ಷಣ ಬೆಳವಣಿಗೆಗೆ ನಮ್ಮ ಅಲ್ಪ ಸೇವೆಯಾಗಿದೆ ಎಂದರು.ಡಯಟ್‌ನ ಪ್ರಾಚಾರ್ಯ ಝಡ್.ಎಂ. ಖಾಜಿ ಮಾತನಾಡಿ, ಸರ್ಕಾರಿ ಶಾಲೆಗಳ ಸಬಲೀಕರಣವು ಇಂದು ಅತಿ ಅವಶ್ಯವಾಗಿದೆ. ಸಾರ್ವಜನಿಕರ ಹಾಗೂ ಸಂಘ- ಸಂಸ್ಥೆಗಳ ಸಹಭಾಗಿತ್ವದಲ್ಲಿ ಶಾಲೆಗಳಿಗೆ ಉತ್ತಮ ಸೌಕರ್ಯಗಳನ್ನು ಒದಗಿಸಲು ಶಿಕ್ಷಕರು ಪ್ರಯತ್ನ ಮಾಡಿದಾಗ ಸರ್ಕಾರಿ ಶಾಲೆಗಳೂ ಖಾಸಗಿ ಶಾಲೆಗಳಿಗೆ ಪ್ರಬಲ ಪೈಪೋಟಿ ನೀಡಬಹುದು. ಗುಣಾತ್ಮಕ ಶಿಕ್ಷಣ ಮೊದಲ ಆದ್ಯತೆ ಆಗಿರಲಿ. ಇನ್ನರವೀಲ್‌ನ ಸಹಕಾರವು ಶ್ಲಾಘನೀಯ ಕಾರ್ಯವಾಗಿದೆ ಎಂದರು.ಜಿಲ್ಲಾ ಕಾರ್ಯದರ್ಶಿ ವಿರಾಜ್ ಕೋಟಕ್ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಈ ವರ್ಷ ಉಚಿತ ಬೈಸಿಕಲ್‌ಗಳನ್ನು ನೀಡುತ್ತಿದ್ದು, ಮಹಿಳಾ ಸದಸ್ಯರೇ ಇದರ ನಿರ್ವಹಣೆ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್, ಡಿಜಿಟಲ್ ಬೋರ್ಡ್, ಭೋಜನಾಲಯ ಸೇರಿದಂತೆ ಗುಣಾತ್ಮಕ ಶಿಕ್ಷಣಕ್ಕೆ ಬೇಕಾದ ಸಂಪನ್ಮೂಲಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದರು.ಸಮಾರಂಭದಲ್ಲಿ ಖಜಾಂಚಿ ಶಿಲ್ಪಾ ಚುರ್ಚಿಹಾಳ, ಕಾರ್ಯದರ್ಶಿ ತೇಜಶ್ರೀ ಸುರಳಿಹಳ್ಳಿ, ಸುಧಾ ಆನೂರಶೆಟ್ರ, ಡಯಟ್‌ನ ಉಪನ್ಯಾಸಕ ಶೇಖರ ಹಂಚಿನಮನಿ, ಮಂಜುಳಾ ಚಂದ್ರಗಿರಿ, ಜೆ.ಆರ್. ಯಲವದಹಳ್ಳಿ, ಸಿಆರ್‌ಪಿ ಗಿರೀಶ ಮಲ್ಲಾಡದ, ಶಕುಂತಲಾ ಗುಡಗೂರಮಠ, ಎನ್.ವೈ. ವಿಜಾಪುರ, ಎಸ್.ಎಸ್. ಜೇನು, ಎಸ್.ಸಿ. ರೂಗಿ, ದಿಲಶಾದ್ ನದಾಫ್, ಎಸ್‌ಡಿಎಂಸಿ ಉಪಾಧ್ಯಕ್ಷೆ ಅಶ್ವಿನಿ ಕುಸನೂರ, ವಿಶ್ವನಾಥ ಪತ್ತಾರ, ನಾಗರಾಜ ದೊಡ್ಡಮನಿ, ಸಂಸ್ಥೆಯ ಪದಾಧಿಕಾರಿಗಳು ಇದ್ದರು. ಶಿಕ್ಷಕಿ ಕವಿತಾ ಅಣ್ಣಿಗೇರಿ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಜೆ.ಆರ್. ಯಲವದಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚನ್ನವೀರಸ್ವಾಮಿ ಕುಲಕರ್ಣಿ ನಿರೂಪಿಸಿದರು. ಶಿವಲೀಲಾ ಹಿರೇಮಠ ವಂದಿಸಿದರು.