ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕೆರಗೋಡುವಿನಲ್ಲಿ ಹನುಮ ಭಕ್ತರ ಮೇಲೆ ರೌಡಿ ಶೀರ್ಟ ತೆರೆದು ಹಿಂದೂ ಪರ ಕೆಲಸವನ್ನು ಹತ್ತಿಕ್ಕಲು ಕಾಂಗ್ರೆಸ್ ಸರ್ಕಾರವು ಪೊಲೀಸರ ಮೂಲಕ ಮಾಡಿಸುತ್ತಿದ್ದಾರೆ ಎಂದು ಬಜರಂಗದಳದ ಪ್ರಾಂತ ಸಹ ಸಂಯೋಜಕ ಗೋವರ್ಧನ್ ಆರೋಪಿಸಿದರು.ಗೂಂಡಾ ಕಾಯಿದೆ ತೆರೆದರೆ ಹಿಂದೂ ಪರ ಕೆಲಸವನ್ನು ನಿಲ್ಲಿಸುವುದಿಲ್ಲ, ಬದಲಿಗೆ ಮತ್ತಷ್ಟು ಹೆಚ್ಚು ಕೆಲಸ ಮಾಡುತ್ತೇವೆ ಎಂಬುದನ್ನು ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಶಾಸಕರು ಮತ್ತು ಜಿಲ್ಲಾ ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕು. ಇದು ಮುಂದುವರಿದರೆ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಎಚ್ಚರಿಕೆ ನೀಡಿದರು.
ಕೆರಗೋಡಿನಲ್ಲಿ ಕಳೆದ ೩೦ ವರ್ಷಗಳಿಂದಲೂ ಅರ್ಜುನ ಧ್ವಜ ಹಾರಿಸುತ್ತಾ ಬಂದಿದ್ದಾರೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದ ದಿನದ ಸವಿನೆನಪಿಗಾಗಿ ಬೃಹತ್ ಧ್ವಜಸ್ತಂಭವನ್ನು ಸ್ಥಾಪಿಸಿ ಹನುಮ ಧ್ವಜ ಹಾರಿಸಲು ಮುಂದಾದರೆ ಅದಕ್ಕೆ ಕೋಮುವಾದದ ಬಣ್ಣ ಕಟ್ಟಿದ ಕಾಂಗ್ರೆಸ್‌ನವರು ಹನುಮ ಧ್ವಜ ಇಳಿಸಿದ್ದಾರೆ. ಅದನ್ನು ಮತ್ತೆ ನಾವು ಅಲ್ಲಿಯೇ ಹನುಮ ಧ್ವಜ ಹಾರಿಸುವುದು ನಿಶ್ಚಿತ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹನುಮ ಧ್ವಜ ಉಳಿವಿನ ಹೋರಾಟದಲ್ಲಿ ಭಾಗವಹಿಸಿದ್ದ ಪ್ರಮುಖರಿಗೆ ರೌಡಿ ಶೀಟರ್ ತೆರೆಯುವುದಾಗಿ ಹೇಳಿ ಕೆರಗೋಡು ಪೊಲೀಸರ ಮೂಲಕ ನೋಟಿಸ್ ನೀಡಲಾಗುತ್ತಿದೆ, ಅದರಲ್ಲಿ ವಕೀಲರೊಬ್ಬರ ಮೇಲೆ ಯಾವುದೇ ಪ್ರಕರಣ ಇಲ್ಲದಿದ್ದರೂ ಕೂಡ ಶ್ರೀರಾಮ ಭಕ್ತನೆಂದು ತಿಳಿದು ರೌಡಿ ಶೀಟರ್ ಹಾಕಲು ನೋಟಿಸ್ ನೀಡಿದ್ದಾರೆ, ಇಂತಹ ಅದೆಷ್ಟೋ ಅಮಾಯಕರಿಗೆ ಈ ರೀತಿಯ ನೋಟಿಸ್ ಕೊಟ್ಟು ಬೆದರಿಕೆ ಹಾಕುವುದನ್ನು ಪೊಲೀಸರು ಮಾಡುತ್ತಿದ್ದಾರೆ ಇದು ನಿಲ್ಲಬೇಕು, ಇಲ್ಲವಾದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದರು.
ಹನುಮ ಧ್ವಜ ಹೋರಾಟದಲ್ಲಿ ಭಾಗಿಯಾದವರಿಗೆ ರೌಡಿ ಶೀಟರ್ ತೆರೆದರೆ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಬೆಲೆ ಎಲ್ಲಿದೆ?, ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆ ಆಗುವುದಿಲ್ಲವೇ, ಕಾಂಗ್ರೆಸ್ ಶಾಸಕರು ಪೊಲೀಸರನ್ನು ಉಪಯೋಗಿಸಿಕೊಂಡು ಸುಳ್ಳು ಪ್ರಕರಣ ಸೃಷ್ಟಿಸಿ ಚಾರ್ಜ್‌ಶಿಟ್‌ನಲ್ಲಿ ಹೆಸರು ಸೇರಿಸಿಕೊಳ್ಳುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜ್ಯಾದ್ಯಂತ ನಮ್ಮ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಪ್ರಕರಣ ದಾಖಲಿಸುತ್ತಿರುವುದಕ್ಕೆ ಉತ್ತೇಜನ ಕೊಡುತ್ತಿದ್ದಾರೆ. ನೀವು ನಮ್ಮ ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು ಮಾಡಿದರೆ ಹಿಂದೂ ಪರ ಕೆಲಸ ನಿಲ್ಲುತ್ತದೆ ಎಂದುಕೊಂಡಿದ್ದರೆ ಅದು ನಿಮ್ಮ ಮೂರ್ಖತನವಾಗಿದ್ದು, ಮತ್ತೆ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಹಾರಿಸುತ್ತೇವೆ ಎಂಬುದನ್ನು ಮತ್ತೊಮ್ಮೆ ಹೇಳುತ್ತೇನೆ ಎಂದರು.
ಬಜರಂಗದಳದ ಬಸವರಾಜು, ವಿರೂಪಾಕ್ಷ, ಸಂತೋಷ್, ನವೀನ್ ಪುನೀತ್ ಭಾಗವಹಿಸಿದ್ದರು.