ಇನ್ನೋವಾ ಕಾರು ಡಿಕ್ಕಿ: ನಾಯಿ, ಜಿಂಕೆ ಬಲಿ

| Published : Jun 09 2024, 01:32 AM IST

ಸಾರಾಂಶ

ಕಾಡು ನಾಯಿ, ಜಿಂಕೆಗೆ ಡಿಕ್ಕಿ ಹೊಡೆದ ಚಾಲಕ ಹಾಗೂ ಸಾವನ್ನಪ್ಪಿದ ಪ್ರಾಣಿಗಳೊಂದಿಗೆ ಎಸಿಎಫ್‌ ಜಿ.ರವೀಂದ್ರ, ಆರ್‌ಎಫ್‌ಒ ಬಿ.ಎಂ.ಮಲ್ಲೇಶ್‌ ಇದ್ದಾರೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ಹುಲಿ ಸಂರಕ್ಷಿತ ಮದ್ದೂರು ವಲಯದಲ್ಲಿ ಹಾದು ಹೋಗುವ ಗುಂಡ್ಲುಪೇಟೆ-ಸುಲ್ತಾನ್‌ ಬತ್ತೇರಿ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ ಕೇರಳದ ಇನ್ನೋವಾ ಕಾರು ಕಾಡುನಾಯಿ ಹಾಗೂ ಜಿಂಕೆಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಪ್ರಾಣಿಗಳು ಸಾವನ್ನಪ್ಪಿವೆ.

ಕೇರಳ ನೋಂದಣಿ ಇರುವ ಇನ್ನೋವಾ ಕಾರು (ಕೆಎಲ್‌ ೫೦ ಎಎಫ್‌ ೩೩೧ ನಂಬರಿನ ಕಾರು ಶುಕ್ರವಾರ ರಾತ್ರಿ ಕೇರಳದ ಸುಲ್ತಾನ್‌ ಬತ್ತೇರಿ ಕಡೆಗೆ ತೆರಳುತ್ತಿದ್ದಾಗ ೫ ವರ್ಷದ ಕಾಡು ನಾಯಿ,೩ ವರ್ಷದ ಜಿಂಕೆಯನ್ನು ಬಲಿ ತೆಗೆದುಕೊಂಡಿದೆ. ಕೇರಳ ಮೂಲದ ಇನ್ನೋವಾ ಕಾರನ್ನು ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಹಾಗೂ ಅರಣ್ಯ ಸಿಬ್ಬಂದಿ ಬೆನ್ನಟ್ಟಿ ಹಿಡಿದಿದ್ದಾರೆ. ಕಾರಿನ ಚಾಲಕ ಸ್ಟಿಫನ್ ಸನ್ನಿ ಹಾಗೂ ಕಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಂಡೀಪುರ ಹುಲಿ ಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಎಸ್.ಪ್ರಭಾಕರನ್ ಸೂಚನೆಯಂತೆ ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಿದ್ದಾರೆ.

ಬಂಧಿತ ಆರೋಪಿಯನ್ನು ವಿಚಾರಣೆ ಬಳಿಕ ನ್ಯಾಯಾಧೀಶರ ಬಳಿಗೆ ಹಾಜರು ಪಡಿಸಲಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಎಸಿಎಫ್‌ ಜಿ.ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮದ್ದೂರು ವಲಯ ಅರಣ್ಯಾಧಿಕಾರಿ ಬಿ.ಎಂ. ಮಲ್ಲೇಶ್,ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್ ಸಂಗೂರ್,ಗಸ್ತು ವನಪಾಲಕರಾದ ಬಾಹುಬಲಿ,ಮಹಮ್ಮದ್ ನಡಾಫ್,ನವೀನ,ವಾಹನ ಚಾಲಕರಾದ ಜೀವನ್,ಶ್ರೀ ಮನು ಇದ್ದರು.