ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ನಾವೀನ್ಯತೆ ಮೇಳ

| Published : Jan 31 2024, 02:15 AM IST

ಸಾರಾಂಶ

ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಸೋಮವಾರದಿಂದ 2 ದಿನಗಳ ನಾವೀನ್ಯತೆ ಮೇಳ, ಆವಿಷ್ಕಾರೋತ್ಸವದಲ್ಲಿ ಹೆಚ್ಚಿನ ಮಕ್ಕಳು ಪಾಲ್ಗೊಂಡು ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯಗಳ ಪರಿಷತ್ತಿನ ಅಂಗ ಸಂಸ್ಥೆಯಾದ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಸೋಮವಾರದಿಂದ 2 ದಿನಗಳ ನಾವೀನ್ಯತೆ ಮೇಳ, ಆವಿಷ್ಕಾರೋತ್ಸವದಲ್ಲಿ ಹೆಚ್ಚಿನ ಮಕ್ಕಳು ಪಾಲ್ಗೊಂಡು ಸಂಭ್ರಮಿಸಿದರು.

ಹೈದರಾಬಾದ್ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್, ಇಸ್ರೋ ವಿಜ್ಞಾನಿ ಡಾ. ಪಿ.ಶ್ರೀನಿವಾಸ ರೆಡ್ಡಿ ಅವರು ನಾವೀನ್ಯತೆಯ ಮೇಳ ಉದ್ಘಾಟಿಸಿ ಮಕ್ಕಳಿಗೆ ಶುಭ ಕೋರಿದರು. ಗುವಿವಿ ಹಿರಿಯ ಪ್ರಾಧ್ಯಾಪಕರು, ಎಸ್.ಎಂ. ಹನಗೋಡಿಮಠ ಹಾಜರಿದ್ದು ಮಕ್ಕಳ ವೈಜ್ಞಾನಿಕ ಪ್ರಾತ್ಯಕ್ಷಿಕೆಗಳನ್ನು ನೋಡಿ ಸಂತಸಪಟ್ಟರು.

ನಾವೀನ್ಯತೆ ಮೇಳವು ವಿದ್ಯಾರ್ಥಿಗಳು ಕೈಗೊಂಡ ನವೀನ ಯೋಜನೆಗಳು, ಆಲೋಚನೆಗಳು ಮತ್ತು ಉಪ ಕ್ರಮಗಳನ್ನು ಪ್ರದರ್ಶಿಸಲು ಮತ್ತು ಆಚರಿಸಲು ಶಾಲೆಗಳಿಗೆ ವೇದಿಕೆ ಒದಗಿಸುವ ಗುರಿಯನ್ನು ಹೊಂದಿದ್ದು ಇದು ಹೆಚ್ಚಿನ ಪ್ರಯೋಜನ ಮಕ್ಕಳಿಗೆ ನೀಡಿದೆ.

ವಿದ್ಯಾರ್ಥಿಗಳಿಗೆ ತಮ್ಮ ಸೃಜನಶೀಲತೆ, ಸಮಸ್ಯೆ-ಪರಿಹರಿಸುವ ಕೌಶಲ್ಯ ಮತ್ತು ವೈಜ್ಞಾನಿಕ ಜ್ಞಾನವನ್ನು ಪ್ರದರ್ಶಿಸಲು ಅತ್ಯುತ್ತಮ ಅವಕಾಶವಾಗಿದೆ. ಕಲಬುರಗಿ ಜಿಲ್ಲೆಯ ಪ್ರೌಢಶಾಲೆ, ಪಿಯು ಕಾಲೇಜುಗಳು/ಐಟಿಐ, ಇಂಜಿನಿಯರಿಂಗ್ ಕಾಲೇಜು/ ಪದವಿ ಕಾಲೇಜು ವಿದ್ಯಾರ್ಥಿಗಳು ಇಲ್ಲಿ ಆಗಮಿಸಿದ್ದರು. ನಾವೀನ್ಯತೆ ಮೇಳಕ್ಕಾಗಿ 48 ಹೊಸ ಯೋಜನೆಗಳು/ಮಾದರಿಗಳನ್ನು ಆಯ್ಕೆ ಮಾಡಿ ಪ್ರದರ್ಶಿಸಲಾಗಿತ್ತು.

ಈ ನಾವೀನ್ಯತೆಯ ಪ್ರದರ್ಶನದ ಜೊತೆಗೆ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮ ಮತ್ತು ದೂರ ಸಂವೇದಿ ಕುರಿತು ಉಪನ್ಯಾಸ ಹಾಗೂ ಸಂವಾದ, ರೋಬೋಟಿಕ್ಸ್ ಕಾರ್ಯಾಗಾರ, ಡ್ರೋಣ್‌ ಪ್ರದರ್ಶನ, ಚಾಲೆಂಜರ್ಸ್ ಕಾರ್ನರ್, ಮಣ್ಣಿನ ಕುಂಬಾರಿಕೆ ಪ್ರಾತ್ಯಕ್ಷಿಕೆ ಮುಂತಾದ ಕಾರ್ಯಕ್ರಮಗಳನ್ನು ಸಹ ಮೇಳದಲ್ಲಿ ಏರ್ಪಡಿಸಲಾಗಿತ್ತು. ವಿಜ್ಞಾನ ಕೇಂದ್ರದ ಅಧಿಕಾರಿ ಕೆ.ಎಂ. ಸುನೀಲ ಉಸ್ತುವಾರಿ ಇತ್ತು. ಜ.31ರಂದು ಬೆ.11.30ಕ್ಕೆ ಸಮಾರೋಪ ಕಾರ್ಯಕ್ರಮವಿದ್ದು, ಗುವಿವಿ ಹಿರಿಯ ಪ್ರಾಧ್ಯಾಪಕ ಚಂದ್ರಕಾಂತ ಕೆಳಮನಿ ಅಧ್ಯಕ್ಷತೆ ವಹಿಸುವರು.