ಸಾರಾಂಶ
ವಿದ್ಯಾರ್ಥಿಗಳು ತಮ್ಮಲ್ಲಿರುವ ತಾಂತ್ರಿಕ ಕೌಶಲ್ಯತೆ, ಜ್ಞಾನ, ಆಸಕ್ತಿ, ಪ್ರಯೋಗಶೀಲತೆ ಉತ್ತೇಜಿಸುವುರೊಂದಿಗೆ ಉದ್ಯೋಗ ನೀಡುವ ಉದ್ಯಮಿಗಳಾಗುವಂತಾಗಬೇಕು
ಗದಗ: ಸಣ್ಣ ಸಣ್ಣ ಆವಿಷ್ಕಾರಗಳು ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಹೊಸ ಆಯಾಮ ಸೃಷ್ಟಿಸುತ್ತವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಹೇಳಿದರು.
ನಗರದ ಜಿ-ಎನ್‌ಟಿಟಿಎಫ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2025-26ನೇ ಸಾಲಿನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ವಿದ್ಯಾರ್ಥಿಗಳು ತಮ್ಮಲ್ಲಿರುವ ತಾಂತ್ರಿಕ ಕೌಶಲ್ಯತೆ, ಜ್ಞಾನ, ಆಸಕ್ತಿ, ಪ್ರಯೋಗಶೀಲತೆ ಉತ್ತೇಜಿಸುವುರೊಂದಿಗೆ ಉದ್ಯೋಗ ನೀಡುವ ಉದ್ಯಮಿಗಳಾಗುವಂತಾಗಬೇಕು ಎಂದರು.
ಜಿ-ಎನ್‌ಟಿಟಿಎಫ್ ಕೈಗಾರಿಕಾ ತರಬೇತಿ ಸಂಸ್ಥೆಯ ಅಧ್ಯಕ್ಷ ಕೃಷ್ಣಗೌಡ ಎಚ್.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿ-ಎನ್‌ಟಿಟಿಎಫ್ ಕೈಗಾರಿಕಾ ತರಬೇತಿಯು ಯುವಕ-ಯುವತಿಯರ ಭವಿಷ್ಯ ನಿರ್ಮಾಣಕ್ಕೆ ಬಲವಾದ ಹಡಗು. ಶಿಕ್ಷಣ ಮತ್ತು ತಾಂತ್ರಿಕತೆ ಒಂದುಗೂಡಿ ಅವರ ಬೆಳವಣಿಗೆಗೆ ದಾರಿ ಮಾಡಿಕೊಡುತ್ತಿದೆ ಎಂದರು.ಈ ವೇಳೆ ತಾಂತ್ರಿಕ ವಸ್ತು ಪ್ರದರ್ಶನ ನಿಮಿತ್ತ ಸಂಸ್ಥೆಯಲ್ಲಿ ವಿವಿಧ ವೃತ್ತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ತಯಾರಿಸಿದ ಅವಿಷ್ಕಾರಗಳ ತಾಂತ್ರಿಕ ಮಾದರಿ ಪ್ರದರ್ಶನ ನಡೆಯಿತು. ಅದರಲ್ಲಿ ಆನ್‌ಲೈನ್ ಬುಕ್ಕಿಂಗ್ ಪೋರ್ಟಲ್, ಮಹಿಳಾ ಶಿಕ್ಷಣ ವ್ಯವಸ್ಥೆ, ಸ್ವಯಂಚಾಲಿತ ಬೀದಿ ದೀಪ, ಮಳೆ ಪತ್ತೆಕಾರಕ, ನೀರಿನ ಮಟ್ಟ ಸೂಚಕ, ಬಾಗಿಲು ಎಚ್ಚರಿಕೆ ವ್ಯವಸ್ಥೆ, ಲೇಜರ್ ಭದ್ರತಾ ವ್ಯವಸ್ಥೆ, ಗಾಳಿ ಬಳಸಿ ವಿದ್ಯುತ್ ಉತ್ಪಾದನಾ ಮಾದರಿಗಳು ಗಮನ ಸೆಳೆದವು. ಜತೆಗೆ ವಿದ್ಯಾರ್ಥಿಗಳಿಗೆ ಆತ್ಮರಕ್ಷಣೆ,ನೈತಿಕತೆ ಪಾಠಗಳೊಂದಿಗೆ ಜ್ಞಾನ ಹೆಚ್ಚಿಸಿಕೊಳ್ಳುವ ತರಬೇತಿ ನೀಡಲಾಯಿತು.
ಜಿಸಿಐಇ ಅಧ್ಯಕ್ಷ ಆರ್.ಆರ್. ಓದುಗೌಡರ, ಪ್ರಾಂಶುಪಾಲ ಜಿಯಾರುದ್ದೀನ ಶೇಖ್, ಆಡಳಿತ ಅಧಿಕಾರಿ ಸಂಗಪ್ಪ ಜೋಡಳ್ಳಿ, ತರಬೇತಿ ಅಧಿಕಾರಿ ಮಂಜುನಾಥ ಕಣವಿ, ಮಧು ಪಾಟೀಲ, ಫಕ್ಕೀರಪ್ಪ ಮರಡಿ, ಸೌಮ್ಯ ಪಾಟೀಲ, ಮೈತ್ರಾ ಭಜಂತ್ರಿ, ಯೂನೂಸ್ ವಂಟಮುರಿ ಹಾಗೂ ನಿರ್ವಹಣಾ ಸಮಿತಿ ಸದಸ್ಯರು ಇದ್ದರು.