ಸಾರಾಂಶ
ತಾಲೂಕಿನಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಫಲಿತಾಂಶ ತಂದುಕೊಡುವ ನಿಟ್ಟಿನಲ್ಲಿ ವಿವಿಧ ಬಗೆಯ ಕಾರ್ಯಕ್ರಮ ಹಾಗೂ ವಿನೂತನ ಚಟುವಟಿಕೆ ನಡೆಸಿರುವುದು ಶ್ಲಾಘನೀಯ ಎಂದು ಡಯಟ್‌ನ ಪ್ರಾಚಾರ್ಯ ಪುರುಷೋತ್ತಮ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಫಲಿತಾಂಶ ತಂದುಕೊಡುವ ನಿಟ್ಟಿನಲ್ಲಿ ವಿವಿಧ ಬಗೆಯ ಕಾರ್ಯಕ್ರಮ ಹಾಗೂ ವಿನೂತನ ಚಟುವಟಿಕೆ ನಡೆಸಿರುವುದು ಶ್ಲಾಘನೀಯ ಎಂದು ಡಯಟ್‌ನ ಪ್ರಾಚಾರ್ಯ ಪುರುಷೋತ್ತಮ್ ಮೆಚ್ಚುಗೆ ವ್ಯಕ್ತಪಡಿಸಿದರು.ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಪ ನಿರ್ದೇಶಕರ ಕಚೇರಿ ಹಾಗೂ ಮಂಡ್ಯ ಡಯಟ್‌ನ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಬಾರಿ 10ನೇ ತರಗತಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಫಲಿತಾಂಶ ತರುವ ನಿಟ್ಟಿನಲ್ಲಿ ಬಿಇಒ ನೇತೃತ್ವದ ಅಧಿಕಾರಿಗಳ ತಂಡದ ಸಹಕಾರದಲ್ಲಿ ಎಲ್ಲಾ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಉತ್ತಮ ಕಾರ್ಯ ಚಟುವಟಿಕೆಗಳನ್ನು ನಡೆಸಿರುವುದು ತಿಳಿದುಬಂದಿದೆ. ಫಲಿತಾಂಶದ ಉತ್ತಮಿಕರಣಕ್ಕೆ ಡಯಟ್‌ನ ಸಂಪೂರ್ಣ ಸಹಕಾರ ಮತ್ತು ಮಾರ್ಗದರ್ಶನವಿರುತ್ತದೆ ಎಂದು ತಿಳಿಸಿದರು.ಸಭೆ ಅಧ್ಯಕ್ಷತೆ ವಹಿಸಿದ್ದ ಬಿಇಒ ಕೆ.ಯೋಗೇಶ್ ಮಾತನಾಡಿ, 2024-25ನೇ ಸಾಲಿನಲ್ಲಿ ತಾಲೂಕಿನ ಎಲ್ಲಾ ಪ್ರೌಢಶಾಲೆಗಳಲ್ಲಿ ಉನ್ನತ ಸಾಧನೆ ಮಾಡುವ ನಿಟ್ಟಿನಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು, ರಾತ್ರಿ ಶಾಲೆಗಳು, ಗುಂಪು ಅಧ್ಯಯನ, ರಸಪ್ರಶ್ನೆ, ರಾಜ್ಯಮಟ್ಟದ ಸಂಪನ್ಮೂಲಗಳ ವ್ಯಕ್ತಿಯಿಂದ ಪ್ರೇರಣಾ ಶಿಬಿರ ಸೇರಿದಂತೆ ನಿರಂತರ ಪರೀಕ್ಷೆಗಳನ್ನು ನಡೆಸಲಾಗಿದೆ. ಅಲ್ಲದೆ ಆಗಾಗ್ಗೆ ಶಾಲೆಗಳಿಗೆ ಭೇಟಿ ಕೊಟ್ಟು ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಹಾಗಾಗಿ ಈ ಬಾರಿ ತಾಲೂಕಿಗೆ ಉತ್ತಮ ಫಲಿತಾಂಶ ಬರುವ ನಿರೀಕ್ಷೆಯಿದೆ ಎಂದರು.
ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಶಿಕ್ಷಣಾಧಿಕಾರಿ ಚಂದ್ರಕಾಂತ, ಜಿಲ್ಲಾ ಉಪ ಯೋಜನೆ ಸಮನ್ವಯಾಧಿಕಾರಿ ಚಂದ್ರಶೇಖರ್, ವಿಸಯ ಪರಿವೀಕ್ಷಕ ನಾಗರಾಜು ಮಾತನಾಡಿದರು. ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಗನ್ನಾಥ್, ವಿಶ್ವಮಂಜುಸ್ವಾಮಿ, ತಿಮ್ಮರಾಯಿಗೌಡ, ಸುರೇಶ್, ಜಯಶಂಕರ್ ಸೇರಿದಂತೆ ಮುಖ್ಯ ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತು ತಾಲೂಕಿನ ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಕಚೇರಿಯ ಶಿಕ್ಷಣ ಸಂಯೋಜಕರು ಇದ್ದರು.