ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ರೈತರು, ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಗ್ರಾಪಂ ಮಟ್ಟದಲ್ಲಿಯೇ ಸರ್ಕಾರಿ ಸೇವೆಗಳು ನಿಮ್ಮನೆ ಬಾಗಿಲಿಗೆ ತಲುಪಿಸಲು ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.ತಾಲೂಕಿನ ಬನ್ನಂಗಾಡಿ ಗ್ರಾಮದಲ್ಲಿ 12 ದಿನಗಳ ಕಾಲ ನಡೆದ ಸರ್ಕಾರಿ ಸೇವೆಗಳು ನಿಮ್ಮನೆ ಬಾಗಿಲಿಗೆ ಎಂಬ ಕಾರ್‍ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಜನತೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ವಿನೂತನ ಕಾರ್‍ಯಕ್ರಮ ನಡೆಸಿ ಯಶಸ್ಸಿಗಳಿಸಿದ್ದೇವೆ ಎಂದರು.
ಮೊದಲು ಕೆನ್ನಾಳು ಗ್ರಾಪಂನ ಕಾರ್‍ಯಕ್ರಮ ನಡೆಸಿದಾಗ ಸಂಪೂರ್ಣ ತಿಳಿದುಕೊಳ್ಳಲು ಸಾಧ್ಯವಾಗಿಲಿಲ್ಲ. ಈಗ ಜನರ ಸಮಸ್ಯೆಗಳ ಬಗ್ಗೆ ಸಾಧ್ಯವಾದಷ್ಟು ಅರಿತು ಸ್ಪಂದಿಸಿ ಕೆಲಸ ಮಾಡುತ್ತಿದ್ದೇವೆ. ಬನ್ನಂಗಾಡಿ ಗ್ರಾಮದಲ್ಲಿ ನಡೆದ ಕಾರ್‍ಯಕ್ರಮಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.ಜನರು ನೀಡಿದ ಹಲವಾರು ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವ ಕೆಲಸ ಮಾಡಿದ್ದೇವೆ. ಇನ್ನಷ್ಟು ಅರ್ಜಿಗಳಿಗೆ ಒಂದು ವಾರದೊಳಗೆ ಇತ್ಯರ್ಥ ಪಡಿಸುವುದಾಗಿ ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಬೆಳಗ್ಗೆಯಿಂದ ಸಂಜೆಯವರೆಗೂ ಸ್ಥಳದಲ್ಲಿ ಇದ್ದರು ಸಮಸ್ಯೆ ಬಗೆಹರಿಸುವ ಕೆಲಸ ಮಾಡಿರುವುದಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಸರ್ಕಾರಿ ಜಾಗಗಳನ್ನು ಅಧಿಕಾರಿಗಳು ಗುರುತಿಸಿ ಒತ್ತುವರಿ ತೆರವುಗೊಳಿಸಿದ್ದಾರೆ. ಗ್ರಾಮಸ್ಥರು ಒಗ್ಗಟ್ಟಿನಿಂದ ನಿಮ್ಮ ಗ್ರಾಮಗಳ ಸರ್ಕಾರಿ ಭೂಮಿ ಒತ್ತವರಿ ಮಾಡಲು ಅವಕಾಶ ನೀಡದೆ ಸಂರಕ್ಷಣೆ ಮಾಡಿಕೊಳ್ಳಬೇಕು, ಕೃಷಿ ಇಲಾಖೆಯಿಂದ ಅಧಿಕಾರಿಗಳು ಮನೆಮನೆಗೆ ತೆರಳಿ ರೈತರಿಗೆ ಬೆಳೆ ಪರಿವರ್ತನೆ, ಗೊಬ್ಬರ ಬಳಕೆ ಹಾಗೂ ನೀರು ಸದ್ಬಳಕೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಅದರಂತೆ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ತಹಸೀಲ್ದಾರ್ ಸಂತೋಷ್ ಮಾತನಾಡಿ, ಬನ್ನಂಗಾಡಿ ಗ್ರಾಮದಲ್ಲಿ ಜನತೆಯಿಂದ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಕಂದಾಯ ಇಲಾಖೆಗೆ 421 ಅರ್ಜಿಗಳು ಬಂದಿದ್ದವು. ಅದರಲ್ಲಿ ನಾವು 321ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಪಡಿಸಿದ್ದೇವೆ ಎಂದರು.
ಆನ್‌ಲೈನ್ ಮೂಲಕ ಅರ್ಜಿಸಲ್ಲಿಸಿ ಕ್ರಮಕೈಗೊಳ್ಳಬೇಕಿರುವ ಕೆಲವು ಅರ್ಜಿಗಳು ಸೇರಿದಂತೆ 80 ಅರ್ಜಿಗಳು ಬಾಕಿ ಉಳಿದಿವೆ. ಅವುಗಳನ್ನು ದಾಖಲೆ ಪರಿಶೀಲಿಸಿ ಇತ್ಯರ್ಥ ಪಡಿಸಲಾಗುವುದು ಎಂದು ಭರವಸೆ ನೀಡಿದರು.ತಾಪಂ ಇಒ ಲೋಕೇಶ್‌ಮೂರ್ತಿ ಮಾತನಾಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಶಾಸಕರು ಉದ್ದೇಶ. ಈ ಕಾರ್‍ಯಕ್ರಮದ ಮೂಲಕ ಇಲಾಖೆಯ ಕೆಲವು ಪ್ರಕ್ರಿಯೆ ಸರಳೀಕರಣ ಮಾಡಿಕೊಂಡು ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಬಗೆಹರಿಸುವ ಕೆಲಸ ಮಾಡಿದ್ದೇವೆ. ಇ-ಸ್ವತ್ತು ನೀಡಲು ಸರ್ವರ್ ಸಮಸ್ಯೆ ಎದುರಾದ ಹಿನ್ನೆಲೆಯ ಇ-ಸ್ವತ್ತ ನೀಡಲು ಸಾಧ್ಯವಾಗಿಲ್ಲ, ಸ್ವೀಕಾರಗೊಳಸಿರಿರುವ ಎಲ್ಲಾ ಇ-ಸ್ವತ್ತು ಅರ್ಜಿಗಳಿಗೂ ಶೀಘ್ರವೇ ಇ-ಸ್ವತ್ತು ನೀಡಲಾಗುವುದು ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆಗೆ 511 ಅರ್ಜಿ ಸ್ವೀಕರಿಸಿ 56 ಅರ್ಜಿಗಳಿಗೆ ಪರಿಹಾರ ನೀಡಲಾಗಿದೆ. 455 ಅರ್ಜಿಗಳು ಪ್ರಗತಿಯಲ್ಲಿವೆ. ತಹಸೀಲ್ದಾರ್ ಕಂದಾಯ ಇಲಾಖೆಗೆ 388 ಅರ್ಜಿಗಳು ಸ್ವೀಕಾರಗೊಂಡವು. 329 ಅರ್ಜಿಗಳಿಗೆ ಪರಿಹಾರ ನೀಡಲಾಗಿದೆ. 59 ಅರ್ಜಿಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು.ಇದಕ್ಕೂ ಮೊದಲು ಮಂಡ್ಯದಿಂದ ಪಾಂಡವಪುರ-ಬನ್ನಂಗಾಡಿ ಮಾರ್ಗವಾಗಿ ಕೆ.ಆರ್.ನಗರ ತಾಲೂಕಿನ ಬೈರ್ಯ ಗ್ರಾಮಕ್ಕೆ ಸಂಪರ್ಕಿಸುವ ಸಾರಿಗೆ ಬಸ್‌ಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ ನೀಡಿದರು.
ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷ ಪ್ರಭಾಕರ್, ಸದಸ್ಯ ತಮ್ಮೇಗೌಡ, ಸಿಡಿಸಿ ಉಪಾಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಕುರುಬರ ಸಂಘದ ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ರೇವಣ್ಣ, ಶಂಕರೇಗೌಡ, ಬಿ.ಜೆ.ಸ್ವಾಮಿ, ಕೆ.ಕುಬೇರ, ಸಿಡಿಪಿಒ ಪೂರ್ಣಿಮಾ, ಶಿರಸ್ತೇಧಾರ್ ಲಕ್ಷ್ಮೀಕಾಂತ್, ಸೆಸ್ಕ್ ಎಇಇ ಪುಟ್ಟಸ್ವಾಮಿ. ಸುರೇಂದ್ರ, ಪಿಡಿಒ ಲಕ್ಷ್ಮೇಗೌಡ, ಎನ್.ಪ್ರಸನ್ನ, ಕೃಷಿ ಎಡಿ ಮಂಜುನಾಥ್ ಸೇರಿದಂತೆ ಹಲವರು ಇದ್ದರು.