ಸಾರಾಂಶ
ಮೈಷುಗರ್ ಕಾರ್ಖಾನೆಯವರು ಸಕಾಲದಲ್ಲಿ ರೈತರ ಕಬ್ಬನ್ನು ಕಟಾವು ಮಾಡಿಸುತ್ತಿಲ್ಲ. ಇತರೆ ಕಾರ್ಖಾನೆಗಳಿಗೆ ಕಬ್ಬನ್ನು ಸಾಗಿಸುವುದಕ್ಕೆ ಅವಕಾಶವನ್ನೂ ಕೊಡುತ್ತಿಲ್ಲ. ಬ್ಯಾಂಕ್‌ನಿಂದ ಸಾಲ ಮತ್ತು ಒಡವೆ ಸಾಲಗಳ ಹರಾಜಿಗಾಗಿ ನೋಟಿಸ್ ಬರುತ್ತಿದ್ದು, ನ್ಯಾಯಾಲಯದಿಂದ ಬೆಳೆ ಸಾಲ ಕಟ್ಟಲು ಬ್ಯಾಂಕ್‌ನ ಪರವಾಗಿ ನೋಟಿಸ್ ಕೊಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಬರದ ನಡುವೆಯೂ ಕಬ್ಬು ಬೆಳೆದು ನಷ್ಟ ಅನುಭವಿಸಿರುವ ರೈತರ ಕಬ್ಬನ್ನು ಶೀಘ್ರವೇ ಕಟಾವು ಮಾಡಿಸುವುದು, ಇಲ್ಲವೇ ಬೇರೆ ಕಾರ್ಖಾನೆಗೆ ಸಾಗಿಸಲು ಅವಕಾಶ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಬೇವಿನ ಸೊಪ್ಪು ತಿಂದು ವಿನೂತನವಾಗಿ ಪ್ರತಿಭಟನೆ ನಡೆಸಿದರು.ನಗರದ ಜೆ.ಸಿ.ವೃತ್ತದಲ್ಲಿ ಜಮಾಯಿಸಿದ ರೈತರು, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಬೇವಿನ ಸೊಪ್ಪು ತಿನ್ನುತ್ತಲೇ ಜಿಲ್ಲಾಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಮಂಡ್ಯ ತಾಲೂಕಿನ ವಿವಿಧೆಡೆ ರೈತರು ಬೆಳೆದಿರುವ ಕಬ್ಬಿಗೆ ಈಗಾಗಲೇ ೧೪ ರಿಂದ ೧೫ ತಿಂಗಳು ತುಂಬಿದೆ. ಬೆಳೆದು ನಿಂತ ಕಬ್ಬು ಒಣಗಲಾರಂಭಿಸಿದ್ದು, ಅದರ ಇಳುವರಿಯೂ ಕಡಿಮೆಯಾಗುತ್ತಿದೆ. ಇದರಿಂದ ರೈತರು ಆತಂಕಪಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮೈಷುಗರ್ ಕಾರ್ಖಾನೆಯವರು ಸಕಾಲದಲ್ಲಿ ರೈತರ ಕಬ್ಬನ್ನು ಕಟಾವು ಮಾಡಿಸುತ್ತಿಲ್ಲ. ಇತರೆ ಕಾರ್ಖಾನೆಗಳಿಗೆ ಕಬ್ಬನ್ನು ಸಾಗಿಸುವುದಕ್ಕೆ ಅವಕಾಶವನ್ನೂ ಕೊಡುತ್ತಿಲ್ಲ. ಬ್ಯಾಂಕ್‌ನಿಂದ ಸಾಲ ಮತ್ತು ಒಡವೆ ಸಾಲಗಳ ಹರಾಜಿಗಾಗಿ ನೋಟಿಸ್ ಬರುತ್ತಿದ್ದು, ನ್ಯಾಯಾಲಯದಿಂದ ಬೆಳೆ ಸಾಲ ಕಟ್ಟಲು ಬ್ಯಾಂಕ್‌ನ ಪರವಾಗಿ ನೋಟಿಸ್ ಕೊಟ್ಟಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಬೆಳೆದು ನಿಂತ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಸಾಗಿಸಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎರಡು ಮೂರು ದಿನಗಳಲ್ಲಿ ಕಬ್ಬು ಕಟಾವು ಮಾಡದಿದ್ದಲ್ಲಿ ಅಥವಾ ಬೇರೆ ಕಡೆಗೆ ಅವಕಾಶ ಮಾಡಿಕೊಡದಿದ್ದರೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.ಕಬ್ಬು ಕಟಾವು ಮಾಡಿಸಿ ಕಾರ್ಖಾನೆಗೆ ಸಾಗಿಸುವ ವಿಚಾರವಾಗಿ ಬೇಜವಾಬ್ದಾರಿತನ ಪ್ರದರ್ಶಿಸಿ ರೈತರು ಆತ್ಮಹತ್ಯೆ ಮಾಡಿಕೊಂಡಲ್ಲಿ ಜಿಲ್ಲಾಡಳಿತವೇ ನೇರ ಹೊಣೆಯಾಗಿರುತ್ತದೆ ಎಂದು ಎಚ್ಚರಿಸಿದರು.
ರೈತ ಮುಖಂಡರಾದ ಶಿವಕುಮಾರ್ ಆರಾಧ್ಯ, ಎಸ್.ಸಿ.ಯೋಗೀಶ್, ನಂಜುಂಡಸ್ವಾಮಿ, ಶಶಿಕುಮಾರ್, ಹೊಸಹಳ್ಳಿ ಶಿವು, ಎಚ್.ಕೆ. ಮಂಜುನಾಥ್, ಈಶ್ವರರಾವ್, ರಾಜು, ಪ್ರಸನ್ನಕುಮಾರ್, ವಿವೇಕ, ಚಂದ್ರು, ರಾಜು ಇತರರಿದ್ದರು.