ಸವದತ್ತಿ: ಲೋಕಾಪುರದಿಂದ ರಾಮದುರ್ಗ, ಸವದತ್ತಿ, ಧಾರವಾಡ ಶ್ರೀ ರೇಣುಕಾ ಯಲ್ಲಮ್ಮಾ ರೈಲ್ವೆ ಮಾರ್ಗ ನಿರ್ಮಾಣದ ಕುರಿತು ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಕುತುಬುದ್ದೀನ್ ಖಾಜಿ ವಿನೂತನ ಮಾದರಿಯಲ್ಲಿ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.

ಸವದತ್ತಿ: ಲೋಕಾಪುರದಿಂದ ರಾಮದುರ್ಗ, ಸವದತ್ತಿ, ಧಾರವಾಡ ಶ್ರೀ ರೇಣುಕಾ ಯಲ್ಲಮ್ಮಾ ರೈಲ್ವೆ ಮಾರ್ಗ ನಿರ್ಮಾಣದ ಕುರಿತು ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಕುತುಬುದ್ದೀನ್ ಖಾಜಿ ವಿನೂತನ ಮಾದರಿಯಲ್ಲಿ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.

ಗುರುವಾರ ಪರಶುರಾಮನ ವೇಷ ಧರಿಸಿ ಶ್ರೀ ಕ್ಷೇತ್ರ ಯಲ್ಲಮ್ಮಾ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಶ್ರೀ ದೇವಿಯ ದರ್ಶನ ಪಡೆದು ಸವದತ್ತಿ ಪಟ್ಟಣದ ಗಾಂಧಿಚೌಕದಲ್ಲಿ ಪರುಶರಾಮನ ವೇಷದೊಂದಿಗೆ ಅನಿರ್ದಿಷ್ಟ ಅವಧಿಯವರೆಗೆ ಸತ್ಯಾಗ್ರಹ ಆರಂಭಿಸಿದ್ದಾರೆ. ಗಾಂಧಿಚೌಕದಲ್ಲಿ ಪ್ರಾರಂಭಿಸಿದ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ಗುಡ್ಡದ ಯಲ್ಲಮ್ಮನ ಆಶೀರ್ವಾದದೊಂದಿಗೆ ಈ ಹೋರಾಟವನ್ನು ಮುಂದುವರೆಸಲಾಗುತ್ತಿದ್ದು, ಕೇಂದ್ರದ ಬಜೆಟ್ ಅಧಿವೇಶನದಲ್ಲಿ ಶ್ರೀ ರೇಣುಕಾ ಯಲ್ಲಮ್ಮಾ ಎಕ್ಸಪ್ರೆಸ್ ರೈಲ್ವೆ ಮಾರ್ಗದ ಅನುಮೋದನೆಯಾಗಲೇ ಬೇಕೆಂದು ಈ ಹೋರಾಟವನ್ನು ಮತ್ತೆ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಈ ಹಿಂದೆ ರೈಲ್ವೆ ಮಾರ್ಗಕ್ಕೆ ಸರ್ವೆ ನಡೆದು ₹೧೬೭೦ ಕೋಟಿ ಕ್ರಿಯಾ ಯೋಜನೆ ಮಾಡಿ ಕೊನೆ ಗಳಿಗೆಯಲ್ಲಿ ಈ ಮಾರ್ಗ ಚಾಲನೆ ಮಾಡದೆ ಬಿಟ್ಟಿರುವುದು ವಿಷಾದದ ಸಂಗತಿಯಾಗಿದೆ. ೧.೫ ಕೋಟಿ ಜನ ಸವದತ್ತಿಯ ಶ್ರೀ ಕ್ಷೇತ್ರ ಯಲ್ಲಮ್ಮನ ದೇವಸ್ಥಾನಕ್ಕೆ ಬಂದು ಹೋಗುತ್ತಾರೆ. ಅದೇ ರೀತಿ ಶಿರಸಂಗಿ ಕಾಳಮ್ಮ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತಾದಿಗಳು ದರ್ಶನಕ್ಕೆ ಬರುತ್ತಾರೆ. ರಾಮದುರ್ಗದ ಶಬರಿ ಕೊಳ್ಳಕ್ಕೆ ಮತ್ತು ಗೊಡಚಿಯ ವೀರಭದ್ರ ದೇವಸ್ಥಾನಕ್ಕೆ ಲಕ್ಷಾಂತರ ಜನ ಬಂದು ಹೋಗುತ್ತಾರೆ. ಈ ಎಲ್ಲ ಭಕ್ತಾದಿಗಳ ಅನುಕೂಲಕ್ಕಾಗಿ ಹಾಗೂ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಇಲ್ಲಿ ರೈಲ್ವೆ ಮಾರ್ಗ ಅತಿ ಅವಶ್ಯವಿದೆ. ಕಳೆದ ೨ ದಶಕಗಳಿಂದಲೂ ಈ ಭಾಗದಲ್ಲಿ ರೈಲ್ವೆ ಮಾರ್ಗ ಆಗಬೇಕೆಂದು ಹೋರಾಟ ಮಾಡುತ್ತ ಬರಲಾಗಿದ್ದರೂ ಸಹಿತ ಈ ಭಾಗದ ಚುನಾಯಿತ ಪ್ರತಿನಿಧಿಗಳ ಇಚ್ಛಾಶಕ್ತಿ ಇಲ್ಲದೆ ಈ ಮಾರ್ಗ ನನೆಗುದಿಗೆ ಬಿದ್ದಿದೆ. ಅದಕ್ಕೋಸ್ಕರ ಈ ಭಾಗದ ಮೂವರು ಸಂಸದರ ಮೇಲೆ ಒತ್ತಡ ತಂದು ರೈಲು ಮಾರ್ಗದ ಅನುಮೋದನೆಗೆ ಒತ್ತಾಯಿಸಲಾಗುತ್ತಿದೆ ಎಂದರು.

ಮೂಲಿಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ರಾಜಶೇಖರ ನಿಡವಣಿ, ಫಕ್ರುಸಾಬ ನದಾಫ, ಮಲ್ಲಿಕಾರ್ಜುನ ಕಲಾದಗಿ, ಆರ್.ಬಿ.ಶಂಕರಗೌಡರ, ಬಸವರಾಜ ಕಪ್ಪನ್ನವರ, ಮಲ್ಲಿಕಾರ್ಜುನ ಬೀಳಗಿ, ಎಲ್.ಎಸ್.ನಾಯಕ, ಉಮೇಶ ಭೀಮನ್ನವರ, ಗುರು ಅಲಬನ್ನವರ ಇತರರು ಉಪಸ್ಥಿತರಿದ್ದರು.