ಸಾರಾಂಶ
ಪರಿಶಿಷ್ಟ ಜಾತಿಯ ೧೦೧ ಉಪಜಾತಿಗಳನ್ನು ಮೀಸಲಾತಿಯಲ್ಲಿ ಎ, ಬಿ, ಸಿ, ಡಿ, ಇ ಗುಂಪುಗಳನ್ನಾಗಿ ವರ್ಗೀಕರಿಸಿರುವ ಆಯೋಗವು ಒಂದು ಜಾತಿಯ ವಿರುದ್ಧ ಮತ್ತೊಂದು ಜಾತಿಯನ್ನು ಎತ್ತಿಕಟ್ಟಿ ಮೀಸಲಾತಿಯನ್ನೇ ನಿರ್ನಾಮ ಮಾಡಲು ಹೊರಟಿದಂತಿದೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ನಡೆದ ದಲಿತರ ಈ ಒಳಮೀಸಲಾತಿ ಸಮೀಕ್ಷೆ ರಾಜಕಾರಣಿಗಳ, ಅಧಿಕಾರಿಗಳ ಸ್ವಾರ್ಥಕ್ಕೆ ಅಮಾಯಕ ದಲಿತರು ಎಡಗೈ- ಬಲಗೈ ಎಂದು ಕದನ ಕಲಹಕ್ಕೆ ಇಳಿಯುವಂತೆ ಮಾಡಿದೆ ಎಂದು ಜಯನ್ ಮಲ್ಪೆ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ನ್ಯಾಯಮೂರ್ತಿ ನಾಗಮೋಹನ್ ಆಯೋಗವು ನೀಡಿರುವ ರಾಜ್ಯದ ದಲಿತರ ಜನಸಂಖ್ಯೆಯ ಜೊತೆಗೆ ಶೈಕ್ಷಣಿಕ, ಔದ್ಯೋಗಿಕ ಮತ್ತು ಸಾಮಾಜಿಕ ಹಿಂದುಳಿದಿರುವ ಸಮೀಕ್ಷ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಅವಸರದಲ್ಲಿ ಅದನ್ನು ಅಂಗೀಕರಿಸಬಾರದು ಎಂದು ಸರ್ಕಾರಕ್ಕೆ ಜನಪರ ಹೋರಾಟಗಾರ ಜಯನ್ ಮಲ್ಪೆ ಒತ್ತಾಯಿಸಿದ್ದಾರೆ.ಪರಿಶಿಷ್ಟ ಜಾತಿಯ ೧೦೧ ಉಪಜಾತಿಗಳನ್ನು ಮೀಸಲಾತಿಯಲ್ಲಿ ಎ, ಬಿ, ಸಿ, ಡಿ, ಇ ಗುಂಪುಗಳನ್ನಾಗಿ ವರ್ಗೀಕರಿಸಿರುವ ಆಯೋಗವು ಒಂದು ಜಾತಿಯ ವಿರುದ್ಧ ಮತ್ತೊಂದು ಜಾತಿಯನ್ನು ಎತ್ತಿಕಟ್ಟಿ ಮೀಸಲಾತಿಯನ್ನೇ ನಿರ್ನಾಮ ಮಾಡಲು ಹೊರಟಿದಂತಿದೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ನಡೆದ ದಲಿತರ ಈ ಒಳಮೀಸಲಾತಿ ಸಮೀಕ್ಷೆ ರಾಜಕಾರಣಿಗಳ, ಅಧಿಕಾರಿಗಳ ಸ್ವಾರ್ಥಕ್ಕೆ ಅಮಾಯಕ ದಲಿತರು ಎಡಗೈ- ಬಲಗೈ ಎಂದು ಕದನ ಕಲಹಕ್ಕೆ ಇಳಿಯುವಂತೆ ಮಾಡಿದೆ ಎಂದವರು ಆರೋಪಿಸಿದ್ದಾರೆ.
ರಾಷ್ಟ್ರಪತಿಯವರಿಂದ ಅಗೀಕೃತಗೊಂಡ ಆದಿ ದ್ರಾವಿಡ, ಆದಿ ಆಂದ್ರ, ಆದಿ ಕರ್ನಾಟಕ ಉಪಜಾತಿಗಳಲ್ಲ, ಅವು ಒಂದು ಗುಂಪು ಎನ್ನುವ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾಗಮೋಹನ್ ಆಯೋಗವು ಸಮೀಕ್ಷೆಯ ಪ್ರಾರಂಭದಲ್ಲಿ ತಿಳಿಸಿಲ್ಲ. ಹಲವು ದಶಕಗಳಿಂದ ಕರಾವಳಿಯ ದಲಿತರು ಜಾತಿ ಪ್ರಮಾಣ ಪತ್ರ ಪಡೆಯುವಾಗ ಪರಿಶಿಷ್ಟ ಜಾತಿ ಮತ್ತು ಉಪಜಾತಿಯಲ್ಲಿ ಆದಿದ್ರಾವಿಡ ಎಂದು ನಮೂದಿಸಿದ್ದರು. ಈಗ ವಗೀಕರಣ ಮಾಡುವಾಗ ಪ್ರವರ್ಗ ಇ ಯಲ್ಲಿ ಸೇರಿಸಿ ಅನ್ಯಾಯ ಮಾಡಿದೆ ಎಂದಿದ್ದಾರೆ.ಪರಿಶಿಷ್ಟ ಜಾತಿಯ ೧೦೧ ಮೂಲ ಜಾತಿಗಳಲ್ಲಿ ಪ್ರವರ್ಗ ‘ಎ’ಯಲ್ಲಿ, ೫೯ ಉಪಜಾತಿಗಳನ್ನು ಸೇರಿಸಿ ಒಟ್ಟು ಜನಸಂಖ್ಯೆ ೫೨೨೦೯೯ಕ್ಕೆ ಶೇ.೪.೯೭, ಪ್ರವರ್ಗ ‘ಬಿ’ಯಲ್ಲಿ ೧೮ ಉಪಜಾತಿಗಳನ್ನು ಸೇರಿಸಿ ಒಟ್ಟು ಜನಸಂಖ್ಯೆ ೩೬,೬೯,೨೪೬ರ ಶೇ.೩೪.೯೧. ನೀಡಿದರೆ, ಪ್ರವರ್ಗ ‘ಸಿ’ಯಲ್ಲಿ ೧೭ ಉಪಜಾತಿಗಳನ್ನು ಸೇರಿಸಿ ಒಟ್ಟು ಜನಸಂಖ್ಯೆ ೩೦,೦೮,೬೩೩ಕ್ಕೆ ಶೇ.೨೮.೬೩ ನೀಡಿದ್ದಾರೆ. ಪ್ರವರ್ಗ ‘ಡಿ’ ಯಲ್ಲಿ ೪ ಉಪಜಾತಿಯ ಒಟ್ಟು ಜನಸಂಖ್ಯೆ ೨ ೮,೩೪,೯೩೯ರ ಶೇ.೨೬.೯೭ ಹಾಗೂ ಪ್ರವರ್ಗ ‘ಇ’ಯಲ್ಲಿ ೩ ಉಪಜಾತಿಯನ್ನು ಸೇರಿಸಿ ಒಟ್ಟು ಜನಸಂಖ್ಯೆ ೪,೭೪,೯೫೪ರ ಶೇ.೪.೫೨ ನೀಡಿ ಆಯೋಗವು ವರದಿ ನೀಡಿರುವುದು ಸಮಾಜಿಕ ಅಸಮಾನತೆಗೆ ದಾರಿ ಮಾಡಿದೆ ಎಂದಿದ್ದಾರೆ.ಎಷ್ಟೆಲ್ಲ ಜನರ ಬೆವರು, ನೆತ್ತರಿನ ಹೋರಾಟದೊಂದಿಗೆ, ಕನಸುಗಳೊಂದಿಗೆ ಕಟ್ಟಿದ ದಲಿತ ಶಕ್ತಿಯ ಮರ ಫಲ ಕೊಡುವ ಹೊತ್ತಿನಲ್ಲಿ ಮರ ಬೆಳೆಸಿದ ಸೋದರರೇ ಪಾಲು ಬೇಡಿ ಟೊಂಗೆಗಳಿಗೆ ಕೊಡಲಿ ಹಚ್ಚಿದರೆ ಹೇಗೆಂಬುದನ್ನು ಅರಿವು ಮೂಡಿಸಬೇಕಾದ ಸರ್ಕಾರವೇ ದಲಿತರನ್ನು ಒಳಮೀಸಲಾತಿಯಲ್ಲಿ ಒಡೆಯುತ್ತಿರುವುದು ನೋವಿನ ಸಂಗತಿ ಎಂದು ಜಯನ್ ಮಲ್ಪೆ ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.