ಸಮರ್ಪಕ ಬೆಳೆ ಹಾನಿ ಪರಿಶೀಲನೆಗೆ ಒತ್ತಾಯ

| Published : Oct 29 2024, 12:50 AM IST

ಸಾರಾಂಶ

Insist on adequate crop damage inspection

-ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ತಹಸೀಲ್ದಾರರಿಗೆ ಮನವಿ

ಕನ್ನಡಪ್ರಭ ವಾರ್ತೆ ಸುರಪುರ

ಸಮರ್ಪಕ ಬೆಳೆ ಹಾನಿ ಪರಿಶೀಲಿಸದಿರುವುದು, ರೈತರಿಗೆ ಸರ್ಕಾರಿ ನೌಕರರಿಂದ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟಿಸಿ ತಹಸೀಲ್ದಾರ ಎಚ್. ಎ. ಸರಕಾವಸ್‌ಗೆ ಮನವಿ ಸಲ್ಲಿಸಿದರು.

ವಿವಿಧ ಮುಖಂಡರು ಮಾತನಾಡಿ, ಕಳೆದ ಎರಡು ವರ್ಷಗಳಿಂದ ಅತೀವೃಷ್ಟಿ, ಅನಾವೃಷ್ಟಿಯಿಂದ ಸಮಸ್ಯೆಗಳು ಉಂಟಾಗಿ ಸಾಲಕ್ಕೆ ಒಳಗಾಗಿದ್ದೇವೆ. ರೈತರು ಬೆಳೆದ ಬೆಳೆಗೆ ಬೆಲೆಯಿಲ್ಲ. ಪ್ರಕೃತಿ ವಿಕೋಪದಿಂದ ಬೆಳೆಗಳು ಹಾಳಾಗಿವೆ. ರಾಜ್ಯ ರೈತ ಸಂಘ 3 ವರ್ಷಗಳಿಂದ ಹೋರಾಟ ಮಾಡಿ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಮತ್ತು ಕಂದಾಯ ಅಧಿಕಾರಿಗಳು ಸಮರ್ಪಕವಾಗಿ ಬೆಳೆ ಹಾನಿ ಪರಿಶೀಲಿಸದೇ ಇರುವುದರಿಂದ ಪರಿಹಾರ ದೊರೆತಿಲ್ಲ. 2-3 ವರ್ಷಗಳಿಂದ ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಯಡಿ ಬೆಳೆ ಖರೀದಿಸಬೇಕೆಂದು ಆದೇಶವಿದ್ದರೂ ಖರೀದಿಸುತ್ತಿಲ್ಲ. ಸುರಪುರ ತಾಲೂಕಿನಲ್ಲಿ ಹತ್ತಿ, ಭತ್ತದ ಖರೀದಿ ಕೇಂದ್ರಗಳನ್ನು ತರೆದಿಲ್ಲ. ಅಧಿಕಾರಿಗಳು ರೈತ ವಿರೋಧಿಯಾಗಿದ್ದಾರೆ ಎಂದು ದೂರಿದರು.

2 ವರ್ಷಗಳಿಂದ ಮಳೆ ನಾರಾಯಣಪುರ ಮತ್ತು ಆಲಮಟ್ಟಿ ಡ್ಯಾಂನಲ್ಲಿ ನೀರು ಸಂಗ್ರಹವಿಲ್ಲದೆ ಹಿಂಗಾರು ಬೆಳೆ ಬೆಳೆಯಲಾಗಿಲ್ಲ. ಡ್ಯಾಂಗಳಲ್ಲಿ ನೀರು ಸಂಗ್ರಹವಿದ್ದು, ನದಿಗಳಿಗೆ ನೀರು ಹರಿ ಬಿಡುವುದನ್ನು ನಿಲ್ಲಿಸಬೇಕು. ನೀರಾವರಿ ಸಲಹಾ ಸಮಿತಿ ಸಭೆ ಕರೆದು ಹಿಂಗಾರು ಬೆಳೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ರಂಗಂಪೇಟೆಯಲ್ಲಿ ಪ್ರತಿ ರವಿವಾರದಂದು ದನದ ಸಂತೆ ನಡೆಯುತಿತ್ತು. ಸಂತೆ ನಡೆಯುವ ಜಾಗವನ್ನು ಅಕ್ರಮವಾಗಿ ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ದೊಡ್ಡ ಕಟ್ಟಡ ನಿರ್ಮಿಸಿ ಸಂತೆ ನಡೆಯದಂತೆ ಮಾಡಿದ್ದಾರೆ. ತಕ್ಷಣವೇ ಪರಿಶೀಲಿಸಿ ಒತ್ತುವರಿ ಮಾಡಿರುವ ಜಾಗವನ್ನು ತೆರವುಗೊಳಿಸಿ ರೈತರಿಗೆ ದನದ ವ್ಯಾಪಾರ ಮಾಡವುದಕ್ಕೆ ಅನುಕೂಲ ಕಲ್ಪಿಸಿಕೊಡಬೇಕು. ಮೂರು ಪಹಣಿ ಕೇಂದ್ರಗಳನ್ನು ಸ್ಥಾಪಿಸಬೇಕು. ತಹಸೀಲ್ದಾರ್ ಕಚೇರಿಯಲ್ಲಿ ಕುಡಿವ ನೀರಿನ ವ್ಯವಸ್ಥೆ ಮಾಡಬೇಕು. ಬೆಳೆ ಹಾನಿ ವರದಿ ಸಮರ್ಪಕವಾಗಿ ಮಾಡದೆ ನಿರ್ಲಕ್ಷ್ಯವಹಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಭಾವಿ, ತಾಲೂಕಾಧ್ಯಕ್ಷ ಹಣಮಂತ್ರಾಯ ಚಂದ್ಲಾಪುರ, ಸಾಹೇಬಗೌಡ ಮದಲಿಂಗನಾಳ, ತಿಪ್ಪಣ್ಣ ಜಂಪಾ, ಭೀಮನಗೌಡ ಕರ್ನಾಳ, ವೆಂಕಟೇಶ ಗೌಡ ಕುಪಗಲ್, ಗದ್ದೆಪ್ಪ ನಾಗಬೇವಿನಾಳ, ಪರಮಣ್ಣ ಬಾಣತಿಹಾಳ, ಅವಿನಾಶ ಕೊಡೇಕಲ್, ಮಾನಪ್ಪ ಕೊಂಬಿನ್, ಇಮಾಮ್‌ಸಾಬ್ ತಿಪ್ಪನಟಗಿ, ಶಿವನಗೌಡ ರುಕ್ಮಾಪುರ ಇದ್ದರು.

-----

28ವೈಡಿಆರ್6: ಸುರಪುರ ನಗರದಲ್ಲಿ ಸಮರ್ಪಕ ಬೆಳೆ ಹಾನಿ ಪರಿಶೀಲನೆ ಮಾಡಿದಿರುವುದು, ರೈತರಿಗೆ ಸರ್ಕಾರಿ ನೌಕರರು ಒಂದಲ್ಲ ಒಂದು ರೀತಿಯ ಅನ್ಯಾಯ ಮಾಡುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟಿಸಿ ತಹಸೀಲ್ದಾರ್ ಎಚ್.ಎ. ಸರಕಾವಸ್‌ಗೆ ಮನವಿ ಸಲ್ಲಿಸಿದರು.