ಸಾರಾಂಶ
- ಶಹಾಪುರ ನಗರದ ತಹಸೀಲ್ದಾರ್ ಕಚೇರಿ ಎದುರು ರಾಜ್ಯ ರೈತ ಸಂಘದಿಂದ ಪ್ರತಿಭಟನೆ, ಮನವಿ
ಕನ್ನಡಪ್ರಭ ವಾರ್ತೆ ಶಹಾಪುರಮಳೆ ಏರುಪೇರಿನಿಂದಾಗಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಕೆಲವೆಡೆ ಮಳೆಯ ಅತೀವೃಷ್ಟಿಯಿಂದ ತೊಂದರೆಯಾಗಿದೆ. ಈ ಎರಡರ ಮಧ್ಯೆ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಕೃಷಿ ಚಟುವಟಕೆ ಆರಂಭಿಸಿದ ರೈತರು ತೀವ್ರ ನಷ್ಟ ಅನುಭವಿಸಿ, ಆತ್ಮಹತ್ಯೆ ದಾರಿ ತುಳಿದಿದ್ದಾರೆ. ಸರ್ಕಾರ ಕೂಡಲೇ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು. ಅತೀವೃಷ್ಟಿ-ಅನಾವೃಷ್ಟಿಯಿಂದಾದ ಬೆಳೆಹಾನಿಗೀಡಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಹತ್ತಿ, ಭತ್ತ, ತೊಗರಿ ಖರೀದಿ ಕೇಂದ್ರ ಸ್ಥಾಪಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದಿಂದ ನಗರದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶರಣು ಮಂದರವಾಡ ಅವರು, ಹತ್ತಿ, ಮೆಣಸಿನಕಾಯಿ ಮತ್ತು ಭತ್ತ ಜಿಲ್ಲೆಯಲ್ಲಿ ಸಂಪೂರ್ಣ ಹಾಳಾಗಿದೆ. ಮಾರುಕಟ್ಟೆಯಲ್ಲಿ ಧಾರಣಿ ಏರದೆ ಹತ್ತಿ ಕೂಡ ಮಾರಾಟ ಮಾಡಲು ತೊಂದರೆಯಾಗಿದೆ. ಇದಲ್ಲದೆ ಹಿಂಗಾರಿನ ಬೆಳೆಗೆ ಆಣೆಕಟ್ಟಿನಿಂದ ನೀರು ಒದಗಿಸಲು ಕೂಡಲೇ ನೀರಾವರಿ ಸಲಹಾ ಸಮಿತಿ ತೀರ್ಮಾನ ತೆಗೆದುಕೊಂಡು ಪ್ರಕಟಿಸಬೇಕು. ತೀರ್ಮಾನ ಮಾಡುವುದರಿಂದ ಪೂರ್ವಭಾವಿ ತಯಾರಿಗಾಗಿ ರೈತ ತನ್ನ ಒಕ್ಕಲನ್ನು ಆರಂಭಿಸಲು ಅನುಕೂಲವಾಗುತ್ತದೆ ಎಂದರು.ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸತ್ಯಂಪೇಟೆ ಮಾತನಾಡಿ, ಅತೀವೃಷ್ಟಿ-ಅನಾವೃಷ್ಟಿಯಿಂದಾಗಿ ಈ ವರ್ಷವು ರೈತನ ಮುಂಗಾರಿನ ಬೆಳೆಗಳಾದ ಹತ್ತಿ, ಭತ್ತ, ತೊಗರಿ, ಶೇಂಗಾ ಇನ್ನಿತರ ಬಹುತೇಕ ಎಲ್ಲಾ ಬೆಳೆಗಳು ನಾಶವಾಗಿವೆ. ಈ ಕಾರಣವಾಗಿ ರೈತನ ಬದುಕು ದಿಕ್ಕೆಟ್ಟು ಹೋಗಿದೆ. ಮಳೆ, ಗಾಳಿಯಿಂದ ಮುಂಗಾರಿನ ಫಸಲು ಸಂಪೂರ್ಣ ನೆಲಕ್ಕೆ ಬಿದ್ದು, ಸಂಪೂರ್ಣ ಹಾಳಾಗಿವೆ. ಹಿಂಗಾರಿನ ಬೆಳೆಗೆ ಆಣೆಕಟ್ಟಿನಿಂದ ನೀರು ಒದಗಿಸಲು ಕೂಡಲೆ ನೀರಾವರಿ ಸಲಹಾ ಸಮಿತಿ ತೀರ್ಮಾನ ತೆಗೆದುಕೊಳ್ಳಬೇಕು. ಉದಾಸೀನ ತೋರಿದರೆ ಅನಿರ್ದಿಷ್ಟ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ತಿಳಿಸಿದರು.
ಕಾಳ ಸಂತೆಯಲ್ಲಿ ಮಾರಾಟ ಮಾಡುವ ಎಲ್ಲಾ ತರಹದ ಬೀಜಗಳನ್ನು ಅಧಿಕೃತ ಲೈಸನ್ಸ್‌ದಾರರಿಗೆ ಮಾರುವಂತೆ ಮತ್ತೊಮ್ಮೆ ಆದೇಶಿಸಬೇಕು. ಜಿಲ್ಲೆಯಲ್ಲಿ ಶೀಘ್ರವೇ ಹತ್ತಿ ಮತ್ತು ಭತ್ತ ಖರೀದಿ ಕೇಂದ್ರ ತೆರೆಯಬೇಕು. ಮಳೆಯಿಂದಾಗಿ ಹಾನಿಗೊಳಗಾದ ಬೆಳೆಗಳಿಗೆ ಸೂಕ್ತ ಪರಿಹಾರ ನಿಗದಿಪಡಿಸಿ ಎಲ್ಲಾ ಬೆಳೆಗಳಿಗೆ ಸರ್ಕಾರವು ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.ಸಂಘಟನೆಯ ತಾಲೂಕು ಅಧ್ಯಕ್ಷ ಮಲ್ಕಣ್ಣ ಚಿಂತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುದ್ದಣ್ಣ ಅಮ್ಮಾಪುರ, ಗುರುಮಠಕಲ್ ಅಧ್ಯಕ್ಷ ಭೀಮರಾಯ ಎಲ್ಹೆರಿ, ವಡಗೇರಾ ತಾಲೂಕಾಧ್ಯಕ್ಷ ಮಲ್ಲಣ್ಣ ನೀಲಹಳ್ಳಿ, ಮುಖಂಡರಾದ ಸಾಬೀ ಲಾಲ್, ನಿಂಗಪ್ಪ, ಮಹಿಬೂಬ್ ಸಾಬ್, ಕಾಶಿಂ ಸಾಬ್, ಚಾಂದ್ ಪಾಷಾ, ಬಸವರಾಜ, ಪ್ರಕಾಶ್ ಸಜ್ಜನ್, ಸಲೀಂ, ಪ್ರಭುಗೌಡ, ಯಲ್ಲಪ್ಪ, ಬಸವರಾಜ್, ನಬಿಲಾಲ್, ಮಲ್ಲಿಕಾರ್ಜುನ್, ಕಿಸಾನ್ ಚಂದ್, ದೇವಪ್ಪ, ಮೌನೇಶ ಇದ್ದರು.
----21ವೈಡಿಆರ್6: ಶಹಾಪುರ ನಗರದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ರಾಜ್ಯ ರೈತ ಸಂಘದಿಂದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಯಿತು.