ಸಾರಾಂಶ
ಹನುಮಸಾಗರ: ದನದ ದೊಡ್ಡಿ ನಿರ್ಮಾಣದ ಸಹಾಯಧನ ಮಂಜೂರು ಮಾಡುವಂತೆ ಒತ್ತಾಯಿಸಿ ಫಲಾನುಭವಿಗಳು ಸಮೀಪದ ತುಮರಿಕೊಪ್ಪ ಗ್ರಾಪಂ ಕಾರ್ಯಾಲಯಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಬಂದ ಪಿಡಿಒ ಮುತ್ತಣ್ಣ ಶಾಂತಿಗೇರಿ ಅವರೊಂದಿಗೆ ವಾಗ್ವಾದ ನಡೆಸಿದ ಫಲಾನುಭವಿಗಳು ನಮ್ಮ ಖಾತೆಗೆ ಹಣ ಜಮಾ ಆಗುವ ವರೆಗೆ ಯಾರನ್ನೂ ಗ್ರಾಪಂ ಒಳಗೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.ಕಳೆದ 15 ತಿಂಗಳ ಹಿಂದೆಯೇ ದನದ ದೊಡ್ಡಿ ನಿರ್ಮಾಣ ಮಾಡಿಕೊಂಡಿದ್ದೇವೆ. ಈ ವರೆಗೂ ಅಧಿಕಾರಿಗಳು ನಮ್ಮ ಖಾತೆಗೆ ಬಿಒಸಿ ಹಣ ಜಮಾ ಮಾಡಿಲ್ಲ. ಅನೇಕ ಬಾರಿ ಗ್ರಾಪಂಗೆ ಭೇಟಿ ನೀಡಿ ಬಿಲ್ ಜಮಾ ಮಾಡುವಂತೆ ಮನವಿ ಮಾಡಿದ್ದೇವೆ. ಅಧಿಕಾರಿಗಳು ಕೇವಲ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಬಿಲ್ ಜಮಾ ಮಾಡಲು ಅಧಿಕಾರಿಗಳು ಮೀನಮೇಷ ಮಾಡುತ್ತಿದ್ದು, ಗ್ರಾಪಂಗೆ ಅಲೆದು ಸಾಕಾಗಿದೆ. ಕಳೆದ ಒಂದು ವರ್ಷದಲ್ಲಿ ಗ್ರಾಪಂ ಅಧ್ಯಕ್ಷರು, ಸದಸ್ಯರು ಮತ್ತು ಅವರ ಸಂಬಂಧಿಕರು ಮಾಡಿದ ಬಹಳಷ್ಟು ಕಾಮಗಾರಿಗಳ ಬಿಒಸಿ ಬಿಲ್ ಜಮಾ ಆಗಿದೆ. ಆದರೆ, ದನದ ದೊಡ್ಡಿ ನಿರ್ಮಾಣದ ಬಿಒಸಿ ಬಿಲ್ ಮಾತ್ರ ಯಾಕೆ ಜಮಾ ಮಾಡುತ್ತಿಲ್ಲ ಎಂದು ಕೇಳಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ.ಪದೇ ಪದೇ ಪಿಡಿಒ ಹಾಗೂ ಸಹಾಯಕ ಎಂಜಿನಿಯರ್‌ಗಳು ಬದಲಾಗುತ್ತಾರೆ. ಹೊಸದಾಗಿ ಬಂದವರು ಈ ಹಿಂದೆ ಇದ್ದವರು ಸರಿಯಾದ ದಾಖಲೆಗಳನ್ನು ಕ್ರೂಢೀಕರಿಸಿಲ್ಲ. ನಾವು ಮತ್ತೊಮ್ಮೆ ದನದ ದೊಡ್ಡಿ ಪರಿಶೀಲನೆ ಮಾಡುತ್ತೇವೆ. ದನದ ದೊಡ್ಡಿ ನಿರ್ಮಾಣದ ಎಲ್ಲ ಹಂತದ ಫೋಟೋ ಹಾಗೂ ದಾಖಲೆಗಳನ್ನು ನಮಗೆ ಮತ್ತೊಮ್ಮೆ ನೀಡಿ ಎನ್ನುತ್ತಾರೆ. ದನದ ದೊಡ್ಡಿ ನಿರ್ಮಾಣ ಸಮಯದಲ್ಲಿ ಎಲ್ಲ ಹಂತದ ಫೋಟೋ ಹಾಗೂ ದಾಖಲೆಗಳನ್ನು ನೀಡಿದ್ದೇವೆ. ಅಷ್ಟೇ ಅಲ್ಲದೆ ಜಿಪಿಎಸ್ ಮಾಡಲು ಬಂದ ಸಹಾಯಕ ಎಂಜಿನಿಯರ್‌ಗಳಿಗೆ ಪ್ರತಿ ಜಿಪಿಎಸ್‌ಗೆ ₹500 ಹಾಗೂ ದೊಡ್ಡಿ ನಿರ್ಮಾಣ ಸಂಪೂರ್ಣ ಕಾರ್ಯ ಮುಗಿದ ನಂತರ ಫೈನಲ್ ಫೈಲ್ ಸಲ್ಲಿಸುವಾಗ ₹3000 ನೀಡಿದ್ದೇವೆ. ಆದರೂ ನಮ್ಮ ಬಿಲ್ ಜಮಾ ಆಗುತ್ತಿಲ್ಲ. ಇದರಿಂದಾಗಿ ದನದ ದೊಡ್ಡಿ ನಿರ್ಮಾಣಕ್ಕೆ ಮಾಡಿಕೊಂಡ ಸಾಲಕ್ಕೆ ಬಡ್ಡಿ ಕಟ್ಟಬೇಕಾಗಿದೆ. ಕೆಲವರು ತಮ್ಮ ದನಗಳನ್ನು ಮಾರಾಟ ಮಾಡಿ ಸಾಲ ತೀರಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಮೇಲಧಿಕಾರಿಗಳು ನಮ್ಮ ಸಹಾಯಕ್ಕೆ ಬರಬೇಕು. ಇಲ್ಲದಿದ್ದರೆ ಗ್ರಾಪಂ ಬಾಗಿಲು ತೆರೆಯಲು ಬಿಡುವುದಿಲ್ಲ ಎಂದು ಪ್ರತಿಭಟನಾ ನಿರತ ಫಲಾನುಭವಿಗಳಾದ ಮರಿಯಪ್ಪ ಕಾ. ಗ್ವಾತಗಿ, ತಿಪ್ಪಣ್ಣ ಮೆಣಸಗಿ, ಸುಭಾಸ ಚಿಕನಾಳ, ಸುರೇಶ ಗ್ವಾತಗಿ, ನೂರಂದಪ್ಪ ಗ್ವಾತಗಿ, ಲೋಕಪ್ಪ ಅಡವಿಬಾವಿ, ಶಾಂತಪ್ಪ ತುಗ್ಗಲಡೋಣಿ, ಮಾಸಪ್ಪ ಹೂಲಗೇರಿ, ರಂಗಪ್ಪ ಪೂಜಾರ, ಮಕಾಳೇಪ್ಪ ಪೂಜಾರ, ಧರ್ಮಣ್ಣ ನಸಗುನ್ನಿ, ಯಮನೂರ ಶ. ಗ್ವಾತಗಿ, ಯಮನೂರ ತುಗ್ಗಲಡೋಣಿ ಇತರರು ಒತ್ತಾಯಿಸಿದರು.ತಾಂತ್ರಿಕ ಸಮಸ್ಯೆ
ಕಳೆದ ಮೂರು ತಿಂಗಳ ಹಿಂದೆ ಈ ಗ್ರಾಪಂಗೆ ಬಂದಿದ್ದೇನೆ. ಕೆಲ ತಾಂತ್ರಿಕ ಸಮಸ್ಯೆಯಿಂದ ಬಿಒಸಿ ಬಿಲ್ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ. ಕಾಮಗಾರಿಗಳ ಜಿಪಿಎಸ್ ಫೋಟೋ ಇಲ್ಲ. ಮತ್ತೊಮ್ಮೆ ದನದ ದೊಡ್ಡಿಗಳನ್ನು ಪರಿಶೀಲನೆ ಮಾಡಿ ಗೂಗಲ್ ಫಾರ್ಮ್ ಓಪನ್ ಆದ ನಂತರ ಫಾರ್ಮ್ ತುಂಬಿ ಎಫ್‌ಡಿಎಗೆ ಕಳುಹಿಸಲಾಗುವುದು.ಮುತ್ತಣ್ಣ ಶಾಂತಗೇರಿ ಪಿಡಿಒ ತುಮರಿಕೊಪ್ಪ ಗ್ರಾಪಂ. ದಾಖಲೆ ಪರಿಶೀಲನೆ
ಪಿಡಿಒ ನನಗೆ ಫೋನ್ ಮಾಡಿದ್ದರು. ದನದ ದೊಡ್ಡಿ ನಿರ್ಮಾಣದ ಫೋಟೋ ಮತ್ತು ದಾಖಲೆಗಳು ಸರಿಯಾಗಿ ಇಲ್ಲ ಎಂದು ತಿಳಿಸಿದ್ದಾರೆ. ದನದ ದೊಡ್ಡಿ ನಿರ್ಮಾಣದ ನಂತರ 23 ಚೆಕ್ ಲಿಸ್ಟ್ ಪ್ರಕಾರ ದಾಖಲೆಗಳಿದ್ದರೆ ಮಾತ್ರ ಬಿಒಸಿ ಬಿಲ್ ಜಮಾ ಮಾಡಲಾಗುವುದು. ಮತ್ತೊಮ್ಮೆ ದನದ ದೊಡ್ಡಿಗಳನ್ನು ಪರಿಶೀಲನೆ ಮಾಡಿ, ಫೋಟೋ ಹಾಗೂ ದಾಖಲೆಗಳನ್ನು 23 ಚೇಕ್ ಲಿಸ್ಟ್ ಪ್ರಕಾರ ತಯಾರಿಸುವಂತೆ ಪಿಡಿಒಗೆ ತಿಳಿಸಿದ್ದೇನೆ.ನಿಂಗನಗೌಡ ಹಿರೇಹಾಳ, ನರೇಗಾ ಎಡಿ ತಾಪಂ ಕುಷ್ಟಗಿ.