ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯ

| Published : Sep 27 2024, 01:29 AM IST

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆ ಹಾಗೂ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಕೊಡುವಂತೆ ಒತ್ತಾಯಿಸಿ ನಗರದ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಗುರುವಾರ ಗ್ರಾಮ ಆಡಳಿತಾಧಿಕಾರಿಗಳು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.

ಗ್ರಾಮ ಆಡಳಿತಾಧಿಕಾರಿಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭ । ಮೂಲಭೂತ ಸೌಲಭ್ಯ ಕಲ್ಪಿಸಲು ಆಗ್ರಹ

ಕನ್ನಡಪ್ರಭ ವಾರ್ತೆ ಕೊಪ್ಪಳ

ವಿವಿಧ ಬೇಡಿಕೆಗಳ ಈಡೇರಿಕೆ ಹಾಗೂ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಕೊಡುವಂತೆ ಒತ್ತಾಯಿಸಿ ನಗರದ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಗುರುವಾರ ಗ್ರಾಮ ಆಡಳಿತಾಧಿಕಾರಿಗಳು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.

ಕಂದಾಯ ಇಲಾಖೆಯಿಂದ ೨೧ ತಂತ್ರಾಂಶಗಳನ್ನು ದಾಖಲು ಮಾಡಲು ಯಾವುದೇ ಸೌಲಭ್ಯ ನೀಡದಿರುವುದು, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ, ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸೌಲಭ್ಯಗಳನ್ನು ಕಲ್ಪಿಸಿ ಕೊಡುವುದು, ಪ್ರೋಟೋಕಲಾ ಕೆಲಸದಿಂದ ಗ್ರಾಮ ಆಡಳಿತಾಧಿಕಾರಿಗಳನ್ನು ಕೈಬಿಡುವುದು, ಮುಟ್ಯೇಷನ ಅವಧಿಯನ್ನು ವಿಸ್ತರಣೆ ಮಾಡುವುದು, ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು.

ಗ್ರಾಮ ಆಡಳಿತಾಧಿಕಾರಿ ಸಂಘದ ಜಿಲ್ಲಾಧ್ಯಕ್ಷ ಮಹ್ಮದ ಆಸೀಫ್‌ ಅಲಿ, ಉಪಾಧ್ಯಕ್ಷ ಬಸವರಾಜ ಲಂಬಾಣಿ, ತಾಲೂಕು ಅಧ್ಯಕ್ಷ ಗಂಗಾಧರ ಹಳ್ಳಿ, ಕಂದಾಯ ಇಲಾಖೆಯ ನೌಕರರ ಸಂಘ ಜಿಲ್ಲಾಧ್ಯಕ್ಷ ಮಂಜುನಾಥ ಮ್ಯಾಗಳಮನಿ, ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಇತರರಿದ್ದರು.

ಬೇಡಿಕೆ ಈಡೇರುವವರೆಗೂ ಮುಷ್ಕರ:

ವಿವಿಧ ಬೇಡಿಕೆ ಈಡೇರಿಕೆಗಾಗಿ ಕುಕನೂರು ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ತಾಲೂಕು ಗ್ರಾಮ ಆಡಳಿತಾಧಿಕಾರಿಗಳು ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು.ಎಲ್ಲ ಬಗೆಯ ಮೊಬೈಲ್ ಆ್ಯಪ್, ವೆಬ್ ಅಪ್ಲಿಕೇಷನ್ ಸ್ಥಗಿತ, ಲೇಖನಿ ಸ್ಥಗಿತಗೊಳಿಸಿ ಬೇಡಿಕೆ ಈಡೇರುವವರೆಗೂ ಮುಷ್ಕರ ಮಾಡಲಾಗುವುದು. 17 ಮೊಬೈಲ್ ಆ್ಯಪ್ ಮತ್ತು ಅಪ್ಲಿಕೇಷನ್ ಮೂಲಕ ಗ್ರಾಮ ಆಡಳಿತ ಅಧಿಕಾರಿಗಳು ಅನೇಕ ಸಮಸ್ಯೆ ಅನುಭವಿಸುತ್ತಿದ್ದಾರೆ. ಅಲ್ಲದೆ ಆ್ಯಪ್ ಗಳ ಬಳಕೆಗೆ ಲ್ಯಾಪ್ ಟಾಪ್, ಇಂಟರನೆಟ್ ಸೌಲಭ್ಯ ಸಹ ನೀಡಿಲ್ಲ. ಅಲ್ಲದೆ ಕಚೇರಿಯಲ್ಲಿ ಟೇಬಲ್, ಚೇರ್, ಪ್ರೀಂಟರ್, ಇಂಟರನೆಟ್ ಕನೇಕ್ಷನ್ ಸೇರಿ ಮೂಲಭೂತ ಸೌಲಭ್ಯ ಸಹ ಕಲ್ಪಿಸಿಲ್ಲ. ಅಲ್ಲದೆ 30 ವರ್ಷದ ಸೇವಾವಧಿ ನಂತರ ಪದೋನ್ನತಿ ನೀಡುತ್ತಿದ್ದು, ನಿವೃತ್ತಿ ಅಂಚಿನಲ್ಲಿ ಪದೋನ್ನತಿ ನೀಡದೆ ಬೇಗ ನೀಡಬೇಕು. ಕೆಲಸದ ಅವಧಿಯ ಮುನ್ನ ಹಾಗೂ ಕೆಲಸದ ನಂತರ ಅವಧಿಯಲ್ಲಿ ಎಲ್ಲ ಬಗೆಯ ವರ್ಚುವಲ್ ಸಭೆಗಳನ್ನು ನಿಷೇಧಿಸಬೇಕು ಸೇರಿದಂತೆ ಇತರೆ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.ಗ್ರಾಮ ಆಡಳಿತಾಧಿಕಾರಿಗಳ ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಪೀರಸಾಬ ಲಕ್ಕುಂಡಿ, ಖಜಾಂಚಿ ವೀರಣ್ಣ ತೆಗ್ಗಿನಮನಿ, ಜಿಲ್ಲಾ ಖಜಾಂಚಿ ಮಹೇಶಗೌಡ , ಸದಸ್ಯರಾದ ಶರೀಫ್ ನದಾಫ್‌, ರಾಣಿ ಹಳ್ಳಿ, ಶರಣಪ್ಪ ಹಳ್ಳಿ, ದೇವಮ್ಮ ಸೇರಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳಿದ್ದರು.