ಎಪಿಎಂಸಿಯಲ್ಲಿ ನಿಯಮಾವಳಿಯಂತೆ ಟೆಂಡರ್‌ಗೆ ಒತ್ತಾಯ

| Published : Feb 25 2025, 12:48 AM IST

ಸಾರಾಂಶ

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರು ಬೆಳೆದ ಶೇಂಗಾ ಬೆಳೆಗೆ, ಸರ್ಕಾರದ ನಿಯಮಾವಳಿ ಅನುಸಾರವಾಗಿ ಟೆಂಡರ್ ಪ್ರಕ್ರಿಯೆ ನಡೆಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ತಹಸೀಲ್ದಾರ್‌ ಹಾಗೂ ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿತು.

ಕರ್ನಾಟಕ ರಾಜ್ಯ ರೈತ ಸಂಘ ತಹಸೀಲ್ದಾರ್‌ ಹಾಗೂ ಎಪಿಎಂಸಿ ಕಾರ್ಯದರ್ಶಿಗೆ ಮನವಿ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರು ಬೆಳೆದ ಶೇಂಗಾ ಬೆಳೆಗೆ, ಸರ್ಕಾರದ ನಿಯಮಾವಳಿ ಅನುಸಾರವಾಗಿ ಟೆಂಡರ್ ಪ್ರಕ್ರಿಯೆ ನಡೆಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ತಹಸೀಲ್ದಾರ್‌ ಹಾಗೂ ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿತು.

ಸಂಘದ ತಾಲೂಕು ಅಧ್ಯಕ್ಷ ಹೊಸಮನಿ ಸಿದ್ದಪ್ಪ ಮಾತನಾಡಿ, ಸರ್ಕಾರದ ಆದೇಶದಂತೆ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ ಅನ್ವಯ ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಯಾವುದೇ ಮಾರುಕಟ್ಟೆಯ ಕಾರ್ಯನಿರ್ವಾಹಕರು ಮತ್ತು ಯಾವುದೇ ಇತರೆ ವ್ಯಕ್ತಿಗಳು ತೂಕ ಮತ್ತು ಪಾವತಿ ಮತ್ತು ಇತರೆ ಭತ್ಯಗಳಲ್ಲಿ ಯಾವುದೇ ಕಡಿತಗಳನ್ನು ಸ್ವೀಕರಿಸಲು ಅಥವಾ ಮರು ಪಡೆಯಲು ಅನುಮತಿ ಇಲ್ಲ. ಆದರಿಂದ ಇಲ್ಲಿನ ಎಪಿಎಂಸಿಯಲ್ಲಿ ಟೆಂಡರ್‌ ಪ್ರಕ್ರಿಯೆಯನ್ನು ಆರಂಭಿಸಬೇಕೆಂದು ಹೇಳಿದರು.

ಈ ಭಾಗದಲ್ಲಿ ರೈತರು ಬೆಳೆದ ಶೇಂಗಾವನ್ನು ಮುಂಡರಗಿ, ಕೊಟ್ಟೂರು ತಾಲೂಕುಗಳಿಗೆ ಹೋಗಿ ಮಾರಾಟ ಮಾಡುತ್ತಿದ್ದು, ಇದರಿಂದ ರೈತರಿಗೆ ಆರ್ಥಿಕ ಹೊರೆ ಉಂಟಾಗುತ್ತಿದೆ. ಈ ಆದೇಶವನ್ನು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಗೆ ಅನ್ವಯವಾಗುವಂತೆ ಪಾಲಿಸುವ ಜೊತೆಗೆ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಮತ್ತು ಖರೀದಿ ಕೇಂದ್ರವನ್ನು ಪ್ರಾರಂಭಿಸಬೇಕೆಂದು ಆಗ್ರಹಿಸಿದರು.

ತಾಲೂಕಿನದ್ಯಾಂತ ಈ ನಿಯಮಾವಳಿಗಳನ್ನು ರೈತರಿಗೆ ಪೂರಕವಾಗಿ ಜಾರಿಗೊಳಿಸಬೇಕು. ವರ್ತಕರು ಬಿಳಿ ಚೀಟಿ ವ್ಯವಹಾರ ರದ್ದು ಮಾಡಬೇಕು, ಮುಖ್ಯವಾಗಿ ರೈತರ ಬೆಳೆಗಳಿಗೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ, ಸರ್ಕಾರದ ನಿಯಮಾವಳಿ ಅನುಸಾರವಾಗಿ ಕೃಷಿ ಉತ್ಪನ್ನ ಮಾರುಕಟ್ಟೆಯ ನಿಯಮ ಅನುಸಾರವಾಗಿ, ಅರ್ಹ ಟೆಂಡರ್‌ದಾರರಿಂದ ಟೆಂಡರ್ ಕರೆದು ಆದೇಶ ನೀಡಬೇಕೆಂದು ಒತ್ತಾಯಿಸಿದರು.

ಸಂಘದ ಗೌರವ ಅಧ್ಯಕ್ಷ ಫಕ್ಕೀರಪ್ಪ ಬಾವಿಹಳ್ಳಿ, ಕಾರ್ಯದರ್ಶಿ ಎಂ.ಶಿವರಾಜ ಹೊಳಗುಂದಿ, ಉಪಾಧ್ಯಕ್ಷ ವಿ.ಬಿ. ಚನ್ನಬಸಪ್ಪ, ವಿಠಲ್ ನಾಯಕ, ಸಂಘಟನಾ ಕಾರ್ಯದರ್ಶಿ ಗಿರೀಶ, ಗನಿಸಾಬ್, ದುರುಗಪ್ಪ, ದೇವೇಂದ್ರಪ್ಪ, ಗಂಗಪ್ಪ, ಮಲ್ಲಿಕಾರ್ಜುನ, ಶೋಭಾ ಸೇರಿದಂತೆ ಇತರರಿದ್ದರು.