ಹೊನ್ಮಾಳಿ ಪಟಾಕಿ ಮಾರಾಟ ಮಳಿಗೆಗಳಲ್ಲಿ ವ್ಯವಸ್ಥೆಗಳ ಪರಿಶೀಲನೆ

| Published : Oct 31 2024, 12:53 AM IST / Updated: Oct 31 2024, 12:54 AM IST

ಸಾರಾಂಶ

ದೀಪಾವಳಿ ಹಿನ್ನೆಲೆ ಹೊನ್ನಾಳಿಯ ಪಟಾಕಿ ಮಾರಾಟ ಮಳಿಗೆಗಳಿಗೆ ಬುಧವಾರ ಉಪವಿಭಾಗಾಧಿಕಾರಿ ಅಭಿಷೇಕ್ ಹಾಗೂ ತಹಸೀಲ್ದಾರ್ ಪಟ್ಟರಾಜ ಗೌಡ ನೇತೃತ್ವದ ಅಧಿಕಾರಿಗಳ ತಂಡ ಖುದ್ದು ಭೇಟಿ ನೀಡಿ, ಸುರಕ್ಷಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆ ಪಟ್ಟಣದ ಪಟಾಕಿ ಮಾರಾಟದ ಅಂಗಡಿಗಳಿಗೆ ಬುಧವಾರ ತಾಲೂಕು ಆಡಳಿತ ಅಧಿಕಾರಿಗಳ ತಂಡ ಭೇಟಿ ನೀಡಿ, ಹಸಿರು ಪಟಾಕಿಗಳ ಮಾರಾಟ, ಇನ್ನಿತರೆ ಸುರಕ್ತತಾ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿತು.

ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಮತ್ತು ತಹಸೀಲ್ದಾರ್ ಪಟ್ಟರಾಜ ಗೌಡ ಅವರು ಖುದ್ದು ಪಟಾಕಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿದರು. ಸರ್ಕಾರದ ಮಾರ್ಗಸೂಚಿಗಳನ್ನು ಪರಿಪಾಲಿಸಲಾಗಿದೆಯೇ, ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿದರು.

ಪಟ್ಟಣದ ಪಟ್ಟಣಶೆಟ್ಟಿ ಪರಮೇಶ್ ಎಂಬವರ ವಿಶಾಲವಾದ ಲೇಔಟ್ ಜಾಗದಲ್ಲಿ ಒಟ್ಟು 4 ಪಟಾಕಿ ಅಂಗಡಿಗಳನ್ನು ತೆರೆಯಲಾಗಿದೆ. ಈಗಾಗಲೇ ಜನರು ಪಟಾಕಿಗಳನ್ನು ಖರೀದಿಸುತ್ತಿದ್ದಾರೆ. ಬುಧವಾರ ದಿಢೀರ್ ಭೇಟಿ ನೀಡಿದ ಅಧಿಕಾರಿಗಳ ತಂಡ ಎಲ್ಲ ಪಟಾಕಿ ಅಂಗಡಿಗಳಿಗೆ ಭೇಟಿ ನೀಡಿತು.

ಅಂಗಡಿಗಳ ಮಧ್ಯೆ ಅಂತರ ಬಿಡಲಾಗಿದೆಯೇ, ಪ್ರತಿ ಪಟಾಕಿ ಅಂಗಡಿಗಳಲ್ಲಿ ಅಗ್ನಿನಂದಕಗಳನ್ನು ಇಡಲಾಗಿದೆಯೇ ಹಾಗೂ ಸಮೀಪದಲ್ಲಿ ನೀರಿನ ಟ್ಯಾಂಕ್ ಮತ್ತು ಮರಳಿನ ವ್ಯವಸ್ಥೆಗಳನ್ನೂ ಮಾಡಿಕೊಳ್ಳಲಾಗಿದೆಯೇ, ಉತ್ತಮ ದರ್ಜೆಯ ವಿದ್ಯುತ್ ಉಪಕರಣಗಳನ್ನು ಬಳಸಿಕೊಳ್ಳಲಾಗಿದೆಯೇ, ಅಂಗಡಿಗಳಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆಯೋ ಅಥವಾ ಇಲ್ಲವೋ ಎಂಬ ವಿಚಾರಗಳ ಬಗ್ಗೆ ಖಾತ್ರಿಪಡಿಸಿಕೊಂಡಿದರು. ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಮಾರಾಟಗಾರರಿಗೆ, ಅಂಗಡಿ ಮಾಲೀಕರಿಗೆ ಸೂಚನೆಗಳನ್ನು ನೀಡಿದರು.