ಸಾರಾಂಶ
ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿ, ತ್ವರಿತ ಗತಿಯಲ್ಲಿ ಗುಣಮಟ್ಟದಿಂದ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನ ಧಾರ್ಮಿಕ ಯಾತ್ರಾ ಸ್ಥಳ, ಮಲೆ ಮಹದೇಶ್ವರ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದಿಂದ ತಿರುಪತಿ ಮಾದರಿಯಲ್ಲಿ ಕೈಗೊಂಡಿರುವ ಸುರಂಗ ಮಾರ್ಗವನ್ನು ಪರಿಶೀಲಿಸಿ ಪ್ರತಿನಿತ್ಯ ಸಾವಿರಾರು ಹಾಗೂ ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ಮಲೈ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸುರಂಗ ಮಾರ್ಗದ ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಹಾಗೂ ಕಾಮಗಾರಿ ನಿಗದಿತ ಅವಧಿಯಲ್ಲಿ ಮುಗಿಸಿ ಬರುವಂತಹ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವಂತೆ ಸಲಹೆ ಸೂಚನೆ ನೀಡಿದರು.ಅಂತರಗಂಗೆ ಕಲ್ಯಾಣಿ ಪರಿಶೀಲನೆ:
ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದ ಬಳಿಕ ಅಂತರಗಂಗೆ ಹತ್ತಿರದ ಒಳಚರಂಡಿ ಸ್ವಚ್ಛತೆ ಬಗ್ಗೆ ಹೆಚ್ಚಿನ ಒತ್ತು ನೀಡುವಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಪೌರಕಾರ್ಮಿಕರಿಗೆ ಸೂಚಿಸಿದರು.ಶೌಚಗೃಹ ಸ್ವಚ್ಛತೆಗೆ ಸೂಚನೆ: ಸಾರಿಗೆ ಬಸ್ ನಿಲ್ದಾಣದ ಬಳಿ ನೂತನವಾಗಿ ನಿರ್ಮಿಸುತ್ತಿರುವ ಶೌಚಾಲಯ ಕಾಮಗಾರಿಯನ್ನು ವೀಕ್ಷಿಸಿದ ಶಾಸಕ ಮಂಜುನಾಥ್, ದಿನನಿತ್ಯ ಸಾವಿರಾರು ಜನಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದು ಬಸ್ ನಿಲ್ದಾಣ ಬಳಿ ಹೆಚ್ಚು ಪ್ರಯಾಣಿಕರು ಬರುವುದರಿಂದ ಇಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗುತ್ತಿರುವ ಶೌಚಾಲಯ ಕಾಮಗಾರಿಯನ್ನು ಉತ್ತಮ ಗುಣಮಟ್ಟ ಕಾಯ್ದುಕೊಂಡು ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸಂಬಂಧ ಪಟ್ಟ ಎಂಜಿನಿಯರ್‌ಗೆ ಸೂಚಿಸಿದರು.
ವ್ಯಾಘ್ರರೂಢ ಮಾದಪ್ಪನ ದೀಪದ ಗಿರಿ ಒಡ್ದುಗೆ ವೀಕ್ಷಣೆ:ಮಲೆ ಮಾದಪ್ಪನ ಬೆಟ್ಟದ ಕಳಸ ಪ್ರಾಯವಾಗಿ ದೀಪದ ಗಿರಿ ಒಡ್ಡಿನ ಬಳಿ 7 ಕೋಟಿ ರು.ವೆಚ್ಚದಲ್ಲಿ ನಿರ್ಮಿಸುತ್ತಿರುವ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಶಾಸಕ ಮಂಜುನಾಥ್ ಪರಿಶೀಲಿಸಿ ಗುಡ್ಡ ಕುಸಿತ ಉಂಟಾಗದ ರೀತಿಯಲ್ಲಿ ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಎಂಜಿನಿಯರುಗಳು ಕ್ರಮವಹಿಸಲು ಸೂಚಿಸಿದರು.
ಇದೇ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಲೋಕೋಪಯೋಗಿ ಇಲಾಖೆಯ ಎಇಇ ಚಿನ್ನಣ್ಣ, ಎಂಜಿನಿಯರ್ ಸಂತೋಷ್ ಕುಮಾರ್, ಸೇಲ್ವಗಣಪತಿ, ಗ್ರಾಪಂ ಪಿಡಿಒ ಕಿರಣ್ ಕುಮಾರ್, ಮುಖಂಡರಾದ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಂಜೇಶ್ ಗೌಡ, ಚಿನ್ನವೆಂಕಟ್, ಡಿ.ಕೆ.ರಾಜು, ಡಿ.ಆರ್. ಮಾದೇಶ್, ಸುರೇಶ್, ಗೋಪಾಲ್ ನಾಯಕ, ಶಿವರಾಮು, ಎಸ್.ಆರ್.ಮಹಾದೇವ, ವೆಂಕಟೇಶ್ ಇತರರು ಉಪಸ್ಥಿತರಿದ್ದರು.7ಸಿಎಚ್ಎನ್15
ಮಲೆಮಹದೇಶ್ವರ ಬೆಟ್ಟದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ಮಂಜುನಾಥ್ ಶನಿವಾರ ಪರಿಶೀಲಿಸಿದರು. ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಲೋಕೋಪಯೋಗಿ ಇಲಾಖೆಯ ಎಇಇ ಚಿನ್ನಣ್ಣ, ಎಂಜಿನಿಯರ್ ಸಂತೋಷ್ ಕುಮಾರ್ ಇತರರಿದ್ದರು.