ಸಂಸದ ಡಾ.ಮಂಜುನಾಥರಿಂದ ರೈಲ್ವೆ ಕಾಮಗಾರಿ ಪರೀಶೀಲನೆ

| Published : Feb 22 2025, 12:48 AM IST

ಸಾರಾಂಶ

ರೈಲ್ವೆ ನಿಲ್ದಾಣ ಕಾಮಗಾರಿ ಪರಿಶೀಲನೆ ಬಳಿಕ ಎಲೇಕೇರಿ ಬಳಿಯ ರೈಲ್ವೆ ಮೇಲ್ಸೆತುವೆ ಕಾಮಗಾರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಅವರು, ಕಾಮಗಾರಿ ವಿಳಂಭಕ್ಕೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಆದಷ್ಟು ಬೇಗ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ತಕ್ಷಣ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.

ಕನ್ನಡಪ್ರಭವಾರ್ತೆ ಚನ್ನಪಟ್ಟಣ

ನಗರದ ರೈಲ್ವೆ ನಿಲ್ದಾಣಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಸಂಸದ ಡಾ.ಸಿ.ಎನ್. ಮಂಜುನಾಥ್ ಬಹುಕೋಟಿ ವೆಚ್ಚದ ರೈಲ್ವೆ ನಿಲ್ದಾಣ ಕಾಮಗಾರಿ ಹಾಗೂ ಅಪೂರ್ಣ ಎಲೇಕೇರಿ ರೈಲ್ವೆ ಮೇಲ್ಸೆತುವೆ ಕಾಮಗಾರಿ ಪರಿಶೀಲನೆ ನಡೆಸಿದರು.

ಕೇಂದ್ರ ಸರಕಾರ ಅಮೃತ ಭಾರತ್ ಸ್ಟೇಷನ್ ಯೋಜನೆಯಡಿ ೨೦.೯ ಕೋಟಿ ರು.ವೆಚ್ಚದಲ್ಲಿ ಆಧುನೀಕರಣಗೊಳ್ಳುತ್ತಿರುವ ಬೊಂಬೆ ಮಾದರಿಯ ರೈಲ್ವೆ ನಿಲ್ದಾಣ ಕಾಮಗಾರಿಯನ್ನು ವೀಕ್ಷಿಸಿದ ಸಂಸದರು, ಕೇಂದ್ರ ಸರಕಾರದ ಅಮೃತ ಯೋಜನೆಯಡಿ ರಾಜ್ಯದ ೧೫ ರೈಲು ನಿಲ್ದಾಣಗಳನ್ನು ಆಧುನೀಕರಣ ಗೊಳಿಸುತ್ತಿದ್ದು, ಅದರಲ್ಲಿ ನಮ್ಮ ಚನ್ನಪಟ್ಟಣ, ರಾಮನಗರ ರೈಲು ನಿಲ್ದಾಣಗಳು ಸಹ ಆಧುನೀಕರಣಗೊಳ್ಳುತ್ತಿವೆ ಎಂದರು.

ಬೊಂಬೆನಗರಿ ಹೆಸರಿಗೆ ತಕ್ಕಂತೆ ಮೂರು ಅಂತಸ್ತಿನ ಇಲ್ಲಿನ ಜನಸ್ನೇಹಿ ರೈಲು ನಿಲ್ದಾಣವನ್ನು ಬೊಂಬೆ ಮಾದರಿಯಲ್ಲಿ ಆಧುನೀಕರಣಗೊಳಿಸಲಾಗುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಸುಸಜ್ಜಿತವಾದ ವಿಶ್ರಾಂತಿ ಕೊಠಡಿ, ಶೌಚಾಲಯ, ಪಾದಚಾರಿ ಮಾರ್ಗ, ಕುಡಿಯುವ ನೀರು ಸೇರಿದಂತೆ ಆತ್ಯಾಧುನಿಕ ಸೌಲಭ್ಯಗಳು ಇದರಲ್ಲಿದ್ದು, ಕಾಮಗಾರಿ ಕ್ಷೀಪ್ರಗತಿಯಲ್ಲಿ ಸಾಗುತ್ತಿದೆ. ಆದಷ್ಟು ಬೇಗ ಕೆಲಸ ಪೂರ್ಣಗೊಂಡು ಸುಸಜ್ಜಿತ ಮಾದರಿ ರೈಲು ನಿಲ್ದಾಣ ಸಾರ್ವಜನಿಕರಿಗೆ ಸೇವೆ ನೀಡುವಂತಾಗಲೆಂದು ತಿಳಿಸಿದರು.

ರೈಲ್ವೆ ನಿಲ್ದಾಣ ಕಾಮಗಾರಿ ಪರಿಶೀಲನೆ ಬಳಿಕ ಎಲೇಕೇರಿ ಬಳಿಯ ರೈಲ್ವೆ ಮೇಲ್ಸೆತುವೆ ಕಾಮಗಾರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಅವರು, ಕಾಮಗಾರಿ ವಿಳಂಭಕ್ಕೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಆದಷ್ಟು ಬೇಗ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ತಕ್ಷಣ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.

ಕೆಲ ತಿಂಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದ ವೇಳೆ ನಿಗದಿತ ಅವಧಿಯಲ್ಲಿ ಕೆಲಸ ಮುಗಿಸುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ ನೀವು ತೆಗೆದುಕೊಂಡ ಕಾಲಾವಕಾಶ ಮುಗಿದು ಮತ್ತಷ್ಟು ವಿಳಂಭ ವಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಅನಾನೂಕೂಲವಾಗುತ್ತಿದ್ದು, ಇನ್ನೂ ಸಬೂಬು ಹೇಳದೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.

ಸಂಸದರ ಭೇಟಿ ವೇಳೆ ನಗರಸಭಾ ಸದಸ್ಯೆ ಸುಮಾ ರವೀಶ್, ರಾಂಪುರ ಧರಣೀಶ್, ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.