ರಸ್ತೆ, ಡಿವೈಡರ್‌, ವಿದ್ಯುತ್ ದೀಪ ಕಾಮಗಾರಿಗಳ ಪರಿಶೀಲನೆ

| Published : Nov 15 2024, 12:33 AM IST

ಸಾರಾಂಶ

ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ವ್ಯಾಪ್ತಿಯಲ್ಲಿ ಕೆಲ ವರ್ಷಗಳ ಹಿಂದೆ ನಡೆದಿರುವ ರಸ್ತೆ ಕಾಮಗಾರಿ, ರಸ್ತೆ ಡಿವೈಡರ್, ರೋಡ್ ಲೈಟ್ ಕಾಮಗಾರಿಗಳು ಕಳಪೆಯಾಗಿವೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೋರಿ ತಾಲೂಕಿನ ಭ್ರಷ್ಟಾಚಾರ ವಿರೋಧಿ ವೇದಿಕೆ ಕಾರ್ಯದರ್ಶಿ ಸೊರಟೂರು ಹನುಮಂತಪ್ಪ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಮಂಗಳವಾರ ಲೋಕಾಯುಕ್ತ ಸಂಸ್ಥೆ ಮುಖ್ಯ ಅಭಿಯಂತರರಾದ ಶುಭ ಟಿ. ಅವಳಿ ತಾಲೂಕುಗಳಿಗೆ ಭೇಟಿ ನೀಡಿ, ಕಾಮಗಾರಿಗಳ ಸ್ಥಳ ಪರೀಶೀಲನೆ ನಡೆಸಿದ್ದಾರೆ.

- ಕಳಪೆ ಕಾಮಗಾರಿ ತನಿಖೆಗೆ ಒತ್ತಾಯಿಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದ ಹನುಮಂತಪ್ಪ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ/ ನ್ಯಾಮತಿ

ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ವ್ಯಾಪ್ತಿಯಲ್ಲಿ ಕೆಲ ವರ್ಷಗಳ ಹಿಂದೆ ನಡೆದಿರುವ ರಸ್ತೆ ಕಾಮಗಾರಿ, ರಸ್ತೆ ಡಿವೈಡರ್, ರೋಡ್ ಲೈಟ್ ಕಾಮಗಾರಿಗಳು ಕಳಪೆಯಾಗಿವೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೋರಿ ತಾಲೂಕಿನ ಭ್ರಷ್ಟಾಚಾರ ವಿರೋಧಿ ವೇದಿಕೆ ಕಾರ್ಯದರ್ಶಿ ಸೊರಟೂರು ಹನುಮಂತಪ್ಪ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಮಂಗಳವಾರ ಲೋಕಾಯುಕ್ತ ಸಂಸ್ಥೆ ಮುಖ್ಯ ಅಭಿಯಂತರರಾದ ಶುಭ ಟಿ. ಅವಳಿ ತಾಲೂಕುಗಳಿಗೆ ಭೇಟಿ ನೀಡಿ, ಕಾಮಗಾರಿಗಳ ಸ್ಥಳ ಪರೀಶೀಲನೆ ನಡೆಸಿದರು.

ತಾಂತ್ರಿಕ ಸಿಬ್ಬಂದಿ ಸಹಾಯದಿಂದ ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿ, ಹೊನ್ನಾಳಿ, ನ್ಯಾಮತಿ ಸುರಹೊನ್ನೆ ಗ್ರಾಮಗಳ ವ್ಯಾಪ್ತಿಯಲ್ಲಿ ಸ್ಥಳ ಪರಿಶೀಲನೆ ನಡೆಸಿದರು. ಗೊಲ್ಲರಹಳ್ಳಿಯಿಂದ ತಾಂತ್ರಿಕ ಉಪಕರಣಗಳನ್ನು ಬಳಸಿ, ಕಾಮಗಾರಿ ಗುಣಮಟ್ಟದ ಬಗ್ಗೆ ಹೊನ್ನಾಳಿ ಪಟ್ಟಣದ ಟಿ.ಬಿ. ವೃತ್ತ, ಖಾಸಗಿ ಬಸ್ ನಿಲ್ದಾಣ , ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ನಂತರ ಹಿರೇಕಲ್ಮಠ, ಅಪ್ಪರ್ ತುಂಗಾ, ಚೌಡಮ್ಮ ದೇವಸ್ಥಾನ ಪ್ರದೇಶಗಳಲ್ಲಿ ಕಾಮಗಾರಿ ಗುಣಮಟ್ಟ ಪರಿಶೀಲನೆ ನಡೆಸಿದರು. ಅಲ್ಲಿಂದ ನ್ಯಾಮತಿ, ಸುರಹೊನ್ನೆ ಗ್ರಾಮಗಳ ಮೂಲಕ ಹಾದುಹೋಗಿರುವ ರಸ್ತೆ ಮತ್ತು ರೋಡ್ ಡಿವೈಡರ್, ರೋಡ್ ಲೈಟ್ ಕಾಮಗಾರಿಗಳನ್ನು ಪರಿಶೀಲಿಸಿ, ಸ್ಥಳ ಮಹಜರು ನಡೆಸಿದರು.

ಈ ಸಂದರ್ಭ ಕೆ.ಆರ್.ಡಿ.ಎಲ್. ಶಿವಮೊಗ್ಗ ವಿಭಾಗದ ಕಾರ್ಯಪಾಲಕ ಅಭಿಯಂತರ ಶಶಿಧರ್ ಮಾತನಾಡಿ, ಕಾಮಗಾರಿ ಕೇವಲ ಶೇ.55ರಷ್ಟು ಮಾತ್ರ ನಡೆದಿದೆ. ಇನ್ನೂ ಬಾಕಿ ಇದೆ ಎಂದರು.

ರಾಜ್ಯ ಲೋಕಾಯುಕ್ತರಿಗೆ ವರದಿ:

ತನಿಖಾಧಿಕಾರಿ ಅವರು ತನಿಖಾ ಕಾರ್ಯ ಪೂರ್ಣಗೊಳಿಸಿದ ನಂತರ ಮಾಧ್ಯಮದವರು ವರದಿ ಬಗ್ಗೆ ಪ್ರಶ್ನೆ ಕೇಳಿದಾಗ. ತಾವು ರಾಜ್ಯ ಲೋಕಾಯುಕ್ತರ ನಿರ್ದೇಶನದಂತೆ ಅವಳಿ ತಾಲೂಕುಗಳ ಕಾಮಗಾರಿಗಳನ್ನು ತಾಂತ್ರಿಕ ಉಪಕರಣಗಳನ್ನು ಬಳಸಿ ಪರಿಶೀಲನೆ ನಡೆಸಿ, ಸ್ಥಳ ಮಹಜರು ಮಾಡಲಾಗಿದೆ. ಈ ಬಗ್ಗೆ ವರದಿ ಬಹಿರಂಗಪಡಿಸುವಂತಿಲ್ಲ. ಸಮಗ್ರ ವರದಿಯನ್ನು ಸೀಲ್ ಮಾಡಿದ ಲಕೋಟೆಯಲ್ಲಿಟ್ಟು, ಇದನ್ನು ನೇರವಾಗಿ ರಾಜ್ಯ ಲೋಕಾಯುಕ್ತರಿಗೆ ಸಲ್ಲಿಸಲಾಗುವುದು ಎಂದು ಸ್ಪಷ್ಟನೆ ನೀಡಿದರು.

ಹಣ ಪಾವತಿಯಾಗಿಲ್ಲ:

ಚಿತ್ರದುರ್ಗದ ಎಂಜಿನಿಯರ್ ಚೇತನ, ಇಂಧುದರ, ಬಿಎಂಆರ್.ಜಿ ಕನ್ಸಲ್ಟೆನ್ಸಿ ಅವರಿಂದ ಸುಮಾರು ₹22.03 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆದಿದೆ. ಇದಕ್ಕೆ ಸಂಬಂಧಿಸಿದ ಪ್ರತಿನಿಧಿ ಯೋಗೇಶ್ ಕೂಡ ಇದ್ದು, ಶೇ.70ರಷ್ಟು ಕಾಮಗಾರಿ ಮುಗಿದಿದೆ. ಸರ್ಕಾರದ ವತಿಯಿಂದ ಕಾಮಗಾರಿ ಬಿಲ್ ಹಣ ಪಾವತಿಯಾಗಿಲ್ಲ ಎಂದು ಹೇಳಿದರು.

ಈ ವೇಳೆ ಭ್ರಷ್ಟಾಚಾರ ವಿರೋಧಿ ವೇದಿಕೆ ರಾಜ್ಯ ಅಧ್ಯಕ್ಷ ಗುರುಪಾದಯ್ಯ ಮಠದ್, ಕರವೇ ವಿನಯ್ ವಗ್ಗರ್, ಧನಂಜಯ, ನಾಗರಾಜ್. ರಾಜು ಕಡಗಣ್ಣಾರ, ಆಂಜನೇಯ, ಕುಬೇರ್ ಮುಂತಾದವರು ಇದ್ದರು.

- - -

ಬಾಕ್ಸ್‌ * ಬೆಂಗಳೂರು ಕಚೇರಿಗೂ ದೂರು ದೂರುದಾರ ಸೊರಟೂರು ಹನುಮಂತಪ್ಪ ಮಾತನಾಡಿ, ಕೆ.ಆರ್.ಡಿ.ಎಲ್. ಅಧಿಕಾರಿಗಳು ಕಾಮಗಾರಿ ಕಳಪೆಯಾಗಿಲ್ಲ ಎಂದು ಹೇಳುತ್ತಾರೆ. ಸದರಿ ಕಾಮಗಾರಿಯಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಕಳಪೆಮಟ್ಟದ ಕಾಮಗಾರಿಗೆ ಕೆ.ಆರ್.ಡಿ.ಎಲ್. ಅಧಿಕಾರಿಗಳೂ ಹೊಣೆಯಾಗಿದ್ದಾರೆ. ಆದ್ದರಿಂದ ಲೋಕಾಯುಕ್ತ ಸಂಸ್ಥೆಯ ವಿಚಕ್ಷಣಾ ದಳದಿಂದಲೇ ಕಾಮಗಾರಿಗಳ ಬಗ್ಗೆ ಸಂಪೂರ್ಣ ತನಿಖೆ ಕೈಗೊಂಡು ಇದಕ್ಕೆ ಹೊಣೆಗಾರರಾಗಿರುವ ಗುತ್ತಿಗೆದಾರ, ಯೋಜನಾ ಸಮಾಲೋಚಕರು, ಸಂಬಂಧಪಟ್ಟ ಇಲಾಖೆ ಅಧಿಕಾರಿ ಅಭಿಯಂತರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಪರ ನಿಬಂಧಕರು (ವಿಚಾರಣೆಗಳು) ಕರ್ನಾಟಕ ಲೋಕಾಯುಕ್ತ ಬೆಂಗಳೂರು ಅವರಿಗೂ ದೂರು ಸಲ್ಲಿಸಿರುವುದಾಗಿ ತಿಳಿಸಿದರು.

- - - -12ಎಚ್.ಎಲ್.ಐ2:

ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಮುಖ್ಯ ಅಭಿಯಂತರರು ಮಂಗಳವಾರ ರೋಡ್ ಡಿವೈಡರ್ ಹಾಗೂ ರೋಡ್ ಲೈಟ್ ಕಾಮಗಾರಿಗಳನ್ನು ತಾಂತ್ರಿಕ ಉಪಕರಣಗಳ ಬಳಸಿ ಗುಣಮಟ್ಟ ಪರಿಶೀಲನೆ ನಡೆಸಿದರು.